NCERT 6ನೇ ತರಗತಿ ಕನ್ನಡ ಪುಸ್ತಕದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಪಠ್ಯ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಟ್ಟು, ಪುರಾಣ, ಧಾರ್ಮಿಕ ಕತೆಗಳನ್ನು ಹೇಳಲಾಗುತ್ತಿದೆ ಎಂದು ಶಿಕ್ಷಣ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಏನಿದು ಗಲಾಟೆ?
ಬೆಂಗಳೂರು (ಜೂ.25) NCERT 6ನೇ ಕ್ಲಾಸ್ ಕನ್ನಡ ಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ ಎಂದು ಶಿಕ್ಷಣ ತಜ್ಞರು ಪ್ರಶ್ನಿಸಿದ್ದಾರೆ. ಈ ಪಠ್ಯಪುಸ್ತಕವು ಪುರಾಣ, ಧಾರ್ಮಿಕ ಕಥೆಗಳು, ಸಸ್ಯಾಹಾರ ಮತ್ತು ದೇವಕೇಂದ್ರಿತ ನಿರೂಪಣೆಗಳನ್ನು ಬಲವಂತವಾಗಿ ಹೇರಲಾಗಿದೆ. ಪುಸ್ತಕದ ಹೆಸರಿನ ಬಗ್ಗೆ ಮಾತ್ರವಲ್ಲದೆ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಪ್ರಾದೇಶಿಕ ಜೀವನ ಪದ್ಧತಿಯನ್ನು ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ ಕೈಬಿಡಲಾಗಿದೆ. ಪಠ್ಯದಲ್ಲಿ ಮಾಂಸಾಹಾರ ಬಹಿಷ್ಕಾರ ಮಾಡಲಾಗಿದೆ ಎಂದು ಶಿಕ್ಷಣ ತಜ್ಞರು ಆಕ್ರೋಶ ಹೊರಹಾಕಿದ್ದಾರೆ.
ಪಠ್ಯಪುಸ್ತಕ ಮೂಲಕ ಸಾಂಸ್ಕೃತಿ ಹೇರಿಗೆ
R3 ಎಂಬುದು 6ನೇ ತರಗತಿಯಿಂದ ಕಡ್ಡಾಯಗೊಳಿಸಲಾದ ಮೂರನೇ ಭಾಷಾ ವಿಷಯವಾಗಿದೆ. ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರ ಎಂದು ಮೂಲಭೂತ ಶಿಕ್ಷಣದ ಹಕ್ಕುಗಳ ಹೋರಾಚ ಸಾರ್ವಜನಿಕ ಒಕ್ಕೂಟ (PAFRE) ಕಿಡಿಕಾರಿದೆ. ಎನ್‌ಸಿಇಆರ್‌ಟಿ ಕನ್ನಡ (R3) ಪಠ್ಯಪುಸ್ತಕಗಳ ಮೂಲಕ ಸಾಂಸ್ಕೃತಿಕ ಹೇರಿಕೆ ಮಾಡಲಾಗುತ್ತಿದೆ. NCERT 6ನೇ ತರಗತಿಯ 'R3' ಕನ್ನಡ ಪಠ್ಯಪುಸ್ತಕವು ದಿಗ್ಭ್ರಮೆ ಮೂಡಿಸುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಕನ್ನಡದ ಸೊಗಡು ಕಾಣದಾಗಿದೆ ಆರೋಪ
ಮಕ್ಕಳಿಗೆ ರಾಜಕೀಯ ಮತ್ತು ಸಾಂಸ್ಕೃತಿಕ ಹೇರಿಕೆಯ ಅಸ್ತ್ರಗಳನ್ನಾಗಿ ಪರಿವರ್ತಿಸಲಾಗ್ತಿದೆ ಎಂದು ಆರೋಪ ಕೇಳಿಬಂದಿದೆ. ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಮಾಜಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳು ಇಲ್ಲ. ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಬದುಕು ಇಲ್ಲಿ ಕಾಣೆಯಾಗಿದೆ. 6ನೇ ತರಗತಿಯ ಮಗುವಿನ ಕುತೂಹಲ ಮತ್ತು ವಯಸ್ಸಿಗೆ ತಕ್ಕಂತಹ ಯಾವುದೇ ಚಟುವಟಿಕೆಗಳು, ಪಠ್ಯಗಳು, ಚಿತ್ರಗಳು ಅಥವಾ ಕಥೆಗಳು ಇದರಲ್ಲಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.
ಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದ್ದೇಕೆ ಎಂದು ನಿರಂಜನಾರಾಧ್ಯ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ 'ಭಾರತೀಯ ಜ್ಞಾನ ಪರಂಪರೆ'ಯನ್ನು ಹೇರುವ ನೆಪದಲ್ಲಿ ಎನ್‌ಸಿಇಆರ್‌ಟಿ ಶಿಕ್ಷಣದಲ್ಲಿ ಪುರಾಣ, ಧಾರ್ಮಿಕ ಕಥೆಗಳು ಮತ್ತು ದೇವಕೇಂದ್ರಿತ ನಿರೂಪಣೆಗಳನ್ನು ತೂರಿಸಲು ಪ್ರಾರಂಭಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಂಸಾಹಾರ ಬಹಿಷ್ಕಾರಕ್ಕೆ ಆಕ್ರೋಶ ವ್ಯಕ್ಕಪಡಿಸಿರುವ ನಿರಂಜನಾರಾಧ್ಯ, ಪಠ್ಯಪುಸ್ತಕದಲ್ಲಿರುವ 'ಆರೋಗ್ಯವೇ ಭಾಗ್ಯ' ಎಂಬ ಪಾಠದ ತಕರಾರರು ಎತ್ತಿದ್ದಾರೆ. ಆಹಾರದ ಬಗ್ಗೆ ಮಾತನಾಡುವಾಗ, ಪರೋಕ್ಷವಾಗಿ ಸಾತ್ವಿಕ ಆಹಾರದ ಪರಿಕಲ್ಪನೆಯನ್ನು ಮಕ್ಕಳ ತಲೆಗೆ ತುಂಬಲಾಗುತ್ತಿದೆ. ಮೊಟ್ಟೆ, ಮೀನು, ಚಿಕನ್, ಮಟನ್, ಉತ್ತರ ಕರ್ನಾಟಕದ ಶೇಂಗಾ ಎಣ್ಣೆಯೊಂದಿಗಿನ ಜೋಳದ ರೊಟ್ಟಿ ಇವೆಲ್ಲಾ ಎಲ್ಲಿಗೆ ಹೋದವು?. ಇದು ಮಾಂಸಾಹಾರಿ ಆಹಾರವನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುವ ತಂತ್ರವಾಗಿದೆ. ಕೇವಲ ಸಸ್ಯಾಹಾರ ಮಾತ್ರ 'ಸಮತೋಲಿತ' ಎಂದು ಬರೆಯುವುದು ಮಕ್ಕಳ ಆಹಾರದ ತಟ್ಟೆಯನ್ನು ರಾಜಕೀಯಗೊಳಿಸುವುದಾಗಿದೆ. ಇದು ಸಾಂಸ್ಕೃತಿಕ ಭಯೋತ್ಪಾದನೆ ಎಂದು ಶಿಕ್ಷಣ ತಜ್ಞರು ಕಿಡಿಕಾರಿದ್ದಾರೆ.
3ನೇ ತರಗತಿಯ ಪುಸ್ತಕಕ್ಕೆ 'ಮೃದುಲಾ' ಎಂದು ಹೆಸರಿಡಲಾಗಿದೆ. ಇದು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸುವ ಯೋಜನೆಯಲ್ಲವೇ?. ಕರ್ನಾಟಕದ ಅಸ್ಮಿತೆ ಇರುವುದು ಪಂಪ, ಕುವೆಂಪು, ಕಾರಂತ ಮತ್ತು ಬಸವಣ್ಣನವರ ಆಲೋಚನೆಗಳಲ್ಲಿ, ಆದರೆ ಇಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ಎನ್‌ಸಿಇಆರ್‌ಟಿ ಇದಕ್ಕೆ 'ಕೃಷ್ಣ' ಎಂದು ಹೆಸರಿಟ್ಟಿದೆ. ಸ್ಥಳೀಯ ಬೌದ್ಧಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ನಿರ್ಲಕ್ಷ ಮಾಡಿದೆ. ಎನ್‌ಸಿಇಆರ್‌ಟಿ ದೇವ-ಧರ್ಮದ ರಾಜಕಾರಣದತ್ತ ಮುಖ ಮಾಡಿದೆ ಎಂದು ಕಿಡಿ ಕಾರಿದೆ.


