ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್ ಪ್ರತ್ಯಕ್ಷ: ಆತಂಕ
ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್ ತಂಡ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿದೆ. ಕೊಡಗು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆರಳಾಂ ಗ್ರಾಮದ ವಿಯೆಟ್ನಾಂ ಕಾಲೋನಿಯಲ್ಲಿ ನಕ್ಸಲರ ತಂಡ ಪ್ರತ್ಯಕ್ಷಗೊಂಡಿದೆ.
ಮಡಿಕೇರಿ (ಫೆ.11): ಕೊಡಗು-ಕೇರಳ ಗಡಿ ಗ್ರಾಮದಲ್ಲಿ ನಕ್ಸಲ್ ತಂಡ ಪ್ರತ್ಯಕ್ಷಗೊಂಡು ಆತಂಕ ಮೂಡಿಸಿದೆ. ಕೊಡಗು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಆರಳಾಂ ಗ್ರಾಮದ ವಿಯೆಟ್ನಾಂ ಕಾಲೋನಿಯಲ್ಲಿ ನಕ್ಸಲರ ತಂಡ ಪ್ರತ್ಯಕ್ಷಗೊಂಡಿದೆ. ಇದು ದಕ್ಷಿಣ ಕೊಡಗಿನ ಬಿರುನಾಣಿಯಿಂದ 15 ಕಿ.ಮೀ. ದೂರದಲ್ಲಿರುವ ಗ್ರಾಮವಾಗಿದೆ.
ಐವರು ಬಂದೂಕುಧಾರಿ ಮಾವೋವಾದಿಗಳ ಗುಂಪಿನಲ್ಲಿ ಈ ಓರ್ವ ಮಹಿಳೆ ಹಾಗೂ ನಾಲ್ವರು ಪುರುಷರಿದ್ದರು. ಮೂರು ದಿನಗಳ ಹಿಂದೆ ಪ್ರತ್ಯಕ್ಷವಾಗಿರುವ ನಕ್ಸಲರು ರಾತ್ರಿ 7.30ಕ್ಕೆ ರಾಜೀವ್ ಎಂಬವರ ಮನೆಗೆ ಬಂದಿದ್ದರು. ರಾಜೀವ್ ಮನೆಯಲ್ಲೇ ಊಟ ಮಾಡಿ 9.30ರ ಬಳಿಕ ತೆರಳಿದ್ದಾರೆ. ರಾಜೀವ್ ಮನೆಯಿಂದ ಅಕ್ಕಿ, ಬೇಳೆ, ಉಪ್ಪು, ಸೋಪು ಪಡೆದೊಯ್ದಿದ್ದಾರೆ. ಕಣ್ಣೂರು ಜಿಲ್ಲೆ ಆರಳಾಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕಿತ ನಕ್ಸಲ್ ಮುಖಂಡ ರೂಪೇಶ್ ಮಡಿಕೇರಿ ಕೋರ್ಟ್‌ಗೆ: ನಕ್ಸಲ್ ಸಂಘಟನೆಯ ಶಂಕಿತ ಮುಖಂಡ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಕ್ಸಲ್ ಪ್ರಕರಣವನ್ನು ಎದುರಿಸುತ್ತಿರುವ ರೂಪೇಶ್‌ನನ್ನು ಬಿಗಿ ಭದ್ರತೆಯಲ್ಲಿ ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 2008ರಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ ನಕ್ಸಲ್ ಪರ ಚಟುವಟಿಕೆ ನಡೆಸಿದ ಆರೋಪ ಈತನ ಮೇಲಿದೆ.
4 ವರ್ಷ ಕಳೆದರೂ ಸಿಗದ ನೆರೆ ಪರಿಹಾರ: ತಾಲೂಕು ಕಚೇರಿಯಲ್ಲಿ ವಿಷ ಕುಡಿಯಲು ಮುಂದಾದ ನೆರೆ ನಿರಾಶ್ರಿತರು
ಕೇರಳ ಹಾಗೂ ಕರ್ನಾಟಕ ಪೊಲೀಸರ ಬಿಗಿ ಭದ್ರತೆಯಲ್ಲಿ ಬಂದ ರೂಪೇಶ್, ನ್ಯಾಯಾಲಯದ ಆವರಣದಲ್ಲಿ ನಕ್ಸಲ್ ಪರ ಘೋಷಣೆ ಕೂಗಿದ. ಕೇರಳದ ವೈವೂರು ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ರೂಪೇಶ್‌ನನ್ನು ಬುಧವಾರ ಸಂಜೆ ಮಡಿಕೇರಿಗೆ ಕರೆ ತಂದು ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರಿಸಲಾಗಿತ್ತು. ಗುರುವಾರ ಬೆಳಗ್ಗೆ ಶಸ್ತ್ರಸಜ್ಜಿತ ಕೊಡಗು ಕಮಾಂಡೋ ಮತ್ತು ಕೇರಳ ಥಂಡರ್ ಬೋಲ್ಟ್ ಕಮಾಂಡೋಗಳ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ನ್ಯಾಯಾಲಯವು ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.