ನಕ್ಸಲ್ ಚಳುವಳಿ ಹುಟ್ಟಿದ್ದು, ಅಂತ್ಯ ಕಂಡಿದ್ದು ಚಿಕ್ಕಮಗಳೂರಿನಲ್ಲೇ!
ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ 1998-99ರ ಸಮಯದಲ್ಲಿ ಸ್ಥಳೀಯ ಯುವಕ-ಯುವತಿಯರ ಗುಂಪು ಹುಟ್ಟಿಕೊಂಡಿತು. ಕೆಲವೇ ವರ್ಷಗಳಲ್ಲಿ ಇದು ನಕ್ಸಲ್ ಚಳವಳಿಯಾಯಿತು. ಈಗ 25 ವರ್ಷ ಬಳಿಕ ನಕ್ಸಲ್ ಚಳವಳಿ ಅಂತ್ಯಕಂಡಿದೆ.
ಆರ್. ತಾರಾನಾಥ್ ಅಟೋಕರ್
ಚಿಕ್ಕಮಗಳೂರು(ಜ.09): ಕುದುರೆಮುಖ ಗಣಿಗಾರಿಕೆ, ತುಂಗಾ ಭದ್ರಾ ನದಿ ಮಾಲಿನ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ, ಆದಿವಾಸಿಗಳ ಸ್ಥಳಾಂತರ ಆತಂಕ... ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ 1998-99ರ ಸಮಯದಲ್ಲಿ ಸ್ಥಳೀಯ ಯುವಕ-ಯುವತಿಯರ ಗುಂಪು ಹುಟ್ಟಿಕೊಂಡಿತು. ಕೆಲವೇ ವರ್ಷಗಳಲ್ಲಿ ಇದು ನಕ್ಸಲ್ ಚಳವಳಿಯಾಯಿತು. ಈಗ 25 ವರ್ಷ ಬಳಿಕ ನಕ್ಸಲ್ ಚಳವಳಿ ಅಂತ್ಯ ಕಾಣುವ ಸುದ್ದಿ ಹೊರ ಬಿದ್ದಿದೆ.
ನಕ್ಸಲ್ ಚಳವಳಿ ಮೂಲ ಇಲ್ಲಿನ ಜ್ವಲಂತ ಸಮಸ್ಯೆ. ಈ ಸಮಸ್ಯೆ ಮುಂದಿಟ್ಟು ಯುವ ಜನರಲ್ಲಿ ಹೊಸ ಹೋರಾಟದ ಕಿಚ್ಚು ಹಚ್ಚಲಾಯಿತು. ಇದರ ನೇತೃತ್ವ ಸಾಕೇತ್ ರಾಜನ್ ವಹಿಸಿಕೊಂಡಿದ್ದರು. ಕೊಪ್ಪ ತಾಲೂಕಿನ ಮೆಣಸಿನಹಾಡ್ಯದಲ್ಲಿ 2002ರಲ್ಲಿ ಬಂದೂಕು ತರಬೇತಿ ವೇಳೆ ಚೀರಮ್ಮ ಕಾಲಿಗೆ ಗುಂಡು ತಗಲಿತು. ಇದರೊಂದಿಗೆ ನಕ್ಸಲ್ ಚಳವಳಿ ಹುಟ್ಟಿದ ವಿಷಯ ಹೊರಬಿತ್ತು. ಕಾರ್ಕಳದ ಈದು ಗ್ರಾಮದಲ್ಲಿ ಪೊಲೀಸರು ಗುಂಡಿನ ದಾಳಿ ನಡೆಸಿದಾಗ ಪಾರ್ವತಿ ಹಾಗೂ ಫಾತಿಮಾ ಬಲಿಯಾದರು. ನಕ್ಸಲ್ ಚಳವಳಿಯಲ್ಲಿ ಹಲವರ ಹತ್ಯೆಯಾಗಿದೆ, ಈ ಹಿಂದೆ 13 ಮತ್ತು ಈಗ 6 ಮಂದಿ ಸೇರಿ 19 ಮಂದಿ ಶರಣಾಗಿದ್ದಾರೆ.
ನಕ್ಸಲ್ ಶರಣಾಗತಿ ಪ್ಯಾಕೇಜ್ ಸಮಾಜವನ್ನು ಬೆಚ್ಚಿಬೀಳಿಸಿದೆ: ಸುನೀಲ್ ಕುಮಾರ್
ಮುಖ್ಯವಾಹಿನಿಗೆ ಬಂದವರು:
ಹಾಗಲಗಂಜಿ ವೆಂಕಟೇಶ್, ಮಲ್ಲಿಕಾ, ಕೋಮಲಾ, ಹೊರಲೆ ಜಯ, ಸಿರಿಮನೆ ನಾಗರಾಜ್, ನೂರ್‌ಶ್ರೀಧರ್, ನಿಲಗುಳಿ ಪದ್ಮನಾಭ್, ಭಾರತಿ, ರಿಜ್ವಾನ್ ಬೇಗಂ, ಕನ್ಯಾಕುಮಾರಿ, ಶಿವು, ಚನ್ನಮ್ಮ, ಪರಶುರಾಮ್, ಮಾರಪ್ಪ, ಮುಂಡಗಾರು ಲತಾ, ಸುಂದರಿ, ಜೀಶಾ, ಕೆ. ವಸಂತ, ವನಜಾಕ್ಷಿ.
ನಕ್ಸಲರ ಶರಣಾಗತಿ ಕೊನೆ ಕ್ಷಣದಲ್ಲಿ ಬೆಂಗಳೂರಿಗೆ ಶಿಫ್ಟ್
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾಡಳಿತದ ಎದುರು ಬುಧವಾರ ಬೆಳಗ್ಗೆ ಆರು ಮಂದಿ ನಕ್ಸಲರು ಶರಣಾಗುತ್ತಾರೆಂಬ ಸುದ್ದಿ ಇಡೀ ರಾಜ್ಯದ ಜನರನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು. ಕೊಪ್ಪದ ಕಾಡಿಂದ ಹೊರಟು ಚಿಕ್ಕಮಗ ಳೂರು ತಲುಪಿ ಇನ್ನೇನು ಶರಣಾಗುತ್ತಾ ರೆನ್ನುವ ವೇಳೆ ದಿಢೀರ್ ಬೆಳವಣಿಗೆಯಲ್ಲಿ ಸಿಎಂ ಕಚೇರಿ ಫೋನ್ ಕರೆ ಬೆಂಗಳೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖ ದಲ್ಲಿ ಶರಣಾಗತಿಗೆ ಸೂಚಿಸಿದ್ದರಿಂದ ಇಡೀ ಪ್ರಕ್ರಿಯೆ ಕ್ಷಣಮಾತ್ರದಲ್ಲಿ ಬೆಂಗಳೂರಿಗೆ ಸ್ಥಳಾಂತರವಾಯಿತು.
ರಾಜ್ಯದ ಮುಂಡಗಾರು ಲತಾ, ಸುಂದರಿ ಕುಟ್ಟೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ತಮಿಳುನಾಡಿನ ಕೆ. ವಸಂತ, ಕೇರಳದ ಟಿ. ಎನ್.ಜೀಶ್ ಅಲಿಯಾಸ್ ಜಯಣ್ಣ ಶರಣಾಗತಿಗೆ ಮುಹೂರ್ತ ನಿಗದಿ ಮಾಡಲಾಗಿತ್ತು. ನಕ್ಸಲೀಯರ ಕುಟುಂಬಸ್ಥರು, ಶಾಂತಿಗಾಗಿ ನಾಗರಿಕ ವೇದಿಕೆಯ ಬಿ.ಟಿ ಲಲಿತಾ ನಾಯಕ್, ಕೆ.ಎಲ್. ಅಶೋಕ್ ಪ್ರವಾಸಿ ಮಂದಿರದಲ್ಲಿ ಕಾದು ಕುಳಿತಿದ್ದರು.
ಶರಣಾದ ನಕ್ಸಲರ ಕುಟುಂಬಗಳಲ್ಲೀಗ ಸಂತಸ: ಕುಟುಂಬಸ್ಥರಲ್ಲಿ ಚಿಗುರೊಡೆದ ಹೊಸ ಕನಸು!
ಶರಣಾಗತಿ ನೇತೃತ್ವ ವಹಿಸಿದ್ದ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರಾದ ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್, ಜನದನಿ ಸಂಘಟನೆ ಮುಖಂಡರಾದ ನೂರ್ ಶ್ರೀಧರ್ ಇತರರು ಬೆಳಗ್ಗೆ 8ಕ್ಕೆ ಕೊಪ್ಪ ತಾಲೂಕಿನ ಮೇಗೂರು ಗ್ರಾಮದ ಬಳಿಯಿಂದ ನಕ್ಸಲರೊಂದಿಗೆ ಚಿಕ್ಕಮಗಳೂರಿನತ್ತ ಪ್ರಯಾಣ ಬೆಳೆಸಿದರು.
ಶರಣಾಗತಿ ಪ್ರಕ್ರಿಯೆ ನಡೆಸಲು ಬಿಗಿ ಭದ್ರತೆಯೊಂದಿಗೆ ಪಶ್ಚಿಮವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ಡಾ. ವಿಕ್ರಂ ಅಮಟೆ ಕಾಯ್ದು ಕುಳಿತಿದ್ದರು. ಆದರೆ ದಿಢೀರ್ ಬೆಳವಣಿಗೆಯಲ್ಲಿ ಇಡೀ ಪ್ರಕ್ರಿಯೆ ಬೆಂಗಳೂರಿಗೆ ಶಿಫ್ಟ್ ಆಯಿತು.