ದೇಶದಲ್ಲಿ ಏರ್‌ಪೋರ್‌್ಟಗಳು ಡಬಲ್: ಮೋದಿ 2014ಕ್ಕೆ ಮುನ್ನ ಇದ್ದ ವಿಮಾನ ನಿಲ್ದಾಣ ಈಗ 140ಕ್ಕೆ ಹೆಚ್ಚಳ, ಕೆಂಪೇಗೌಡ ಏರ್‌ಪೋರ್ಟ್‌ನ 2ನೇ ಟರ್ಮಿನಲ್ ಲೋಕಾರ್ಪಣೆ
ಬೆಂಗಳೂರು (ನ.12) : ದೇಶದಲ್ಲಿ 2014ಕ್ಕೆ ಮೊದಲು 70ರಷ್ಟಿದ್ದ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 140ಕ್ಕೆ ಹೆಚ್ಚಳ ಮಾಡುವ ಮೂಲಕ ದುಪ್ಪಟ್ಟು ಮಾಡಿದ್ದೇವೆ. ಇವುಗಳ ಜತೆಗೆ ಇನ್ನೂ ಹಲವು ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ವಿಮಾನ ನಿಲ್ದಾಣಗಳು ನಗರಗಳ ವ್ಯಾಪಾರ ಸಾಮರ್ಥ್ಯವನ್ನು ವೃದ್ಧಿಸುವ ಜತೆಗೆ ಯುವಕರಿಗೆ ಹೊಸ ಉದ್ಯೋಗವಕಾಶ ಸೃಷ್ಟಿಸಲು ಯಶಸ್ವಿಯಾಗುತ್ತಿವೆ. ಒಟ್ಟಾರೆ ಡಿಜಿಟಲ್ ಹಾಗೂ ಭೌತಿಕ ಮೂಲಸೌಕರ್ಯ ನಿರ್ಮಾಣದಲ್ಲಿ ನಮ್ಮ ದೇಶ ಬೇರೆ ಲೆವೆಲ್‌ನಲ್ಲಿ (ಹಂತ) ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಕೆಂಪೇಗೌಡರ ಪ್ರತಿಮೆ ಅನಾವರಣ, ಕಾಂಗ್ರೆಸ್ ಜೆಡಿಎಸ್ ಕೆಂಡಾಮಂಡಲ!
ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಎರಡನೇ ಟರ್ಮಿನಲ್‌ನ ಮೊದಲ ಹಂತವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದರು. ತನ್ಮೂಲಕ ಹಲವು ವೈಶಿಷ್ಟ್ಯಗಳ ಅತ್ಯಾಧುನಿಕ ಟರ್ಮಿನಲ್ ಅನ್ನು ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸಿದರು.
ಬಳಿಕ ಮಾತನಾಡಿದ ಅವರು, ವಿಮಾನ ನಿಲ್ದಾಣಗಳು ಉದ್ಯಮಗಳ ವಿಸ್ತರಣೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ದೇಶದಲ್ಲಿ ವಿಮಾನ ನಿಲ್ದಾಣಗಳು ಹೆಚ್ಚುತ್ತಿರುವ ಜತೆಗೆ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಭಾರತದ ಬೆಳವಣಿಗೆಯನ್ನು ತೋರಿಸುತ್ತದೆ ಎಂದರು.
ಟರ್ಮಿನಲ್-2 ಭವ್ಯವಾಗಿದೆ:
ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ನಿರ್ಮಿಸಿದ್ದು, ಬೆಂಗಳೂರು ಜನರ ಬಹುದಿನಗಳ ಬೇಡಿಕೆಯನ್ನು ನಮ್ಮ ಸರ್ಕಾರ ಪೂರೈಸಿದೆ. ಹೊಸ ಟರ್ಮಿನಲ್ ವಿಮಾನ ನಿಲ್ದಾಣದ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಪ್ರಯಾಣಿಕರಿಗೆ ಸಾಕಷ್ಟುಅನುಕೂಲ ಕಲ್ಪಿಸಲಿದೆ. ನೂತನ ಟರ್ಮಿನಲ್‌ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೆ. ಆದರೆ, ನೇರವಾಗಿ ನೋಡಿದಾಗ ಫೋಟೋಗಳಿಗಿಂತಲೂ ಅದ್ಭುತವಾಗಿ ಹಾಗೂ ಭ್ಯವವಾಗಿ ಕಾಣುತ್ತಿದೆ. ಇದು ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದೆ ಎಂದು ಕೊಂಡಾಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ನಗರವಾಗಿದ್ದು, ನಮ್ಮ ಪರಂಪರೆಯನ್ನು ಸಂರಕ್ಷಿಸುವ ಜತೆಗೆ ಆಧುನಿಕ ಮೂಲಸೌಕರ್ಯಗಳಿಂದ ಅದನ್ನು ಶ್ರೀಮಂತಗೊಳಿಸಬೇಕಾಗಿದೆ. ಇದೆಲ್ಲವೂ ‘ಸಬ್ ಕಾ ಪ್ರಯಾಸ್’ನಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಇದಕ್ಕೂ ಮೊದಲು ಅಧಿಕಾರಿಗಳಿಂದ ವಿಮಾನ ನಿಲ್ದಾಣದ ವೈಶಿಷ್ಟ್ಯಗಳ ಬಗ್ಗೆ ಮೋದಿ ಮಾಹಿತಿ ಪಡೆದರು.
ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು, ಗಣಿ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವರು ಹಾಜರಿದ್ದರು.
5ಜಿ ಪ್ಲಸ್ ನೆಟ್‌ವರ್ಕ್ ಪಡೆದ ಮೊದಲ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನೂತನ ಟರ್ಮಿನಲ್‌ನಲ್ಲಿ ಅಲ್ಟಾ್ರಫಾಸ್ಟ್ 5ಜಿ ನೆಟ್‌ವರ್ಕ್ ಸೇವೆ ಆರಂಭಗೊಂಡಿದೆ. ಏರ್‌ಟೆಲ್‌ನ 5ಜಿ ಪ್ಲಸ್ ಸೇವೆಯಿಂದ ಈ ಸೇವೆ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಏರ್‌ಪೋರ್ಟ್‌ನ ಸಾಮರ್ಥ್ಯ ಈಗ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳ
ಆವಿಷ್ಕಾರ, ಸುಸ್ಥಿರತೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ನೂತನ ಟರ್ಮಿನಲ್ ನಿರ್ಮಾಣದಿಂದ ನಮ್ಮ ವಿಮಾನ ನಿಲ್ದಾಣದ ಸಾಮರ್ಥ್ಯ ವರ್ಷಕ್ಕೆ 2.5 ಕೋಟಿ ಪ್ರಯಾಣಿಕರಿಗೆ ಹೆಚ್ಚಳವಾಗಿದೆ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಓ ಹರಿ ಮುರಾರ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
63 ಎಕರೆ ವಿಶಾಲ ವಿಸ್ತೀರ್ಣ
2ನೇ ಟರ್ಮಿನಲ್‌ನ ಮೊದಲ ಹಂತವು ಬರೋಬ್ಬರಿ 2,55,661 ಚದರ ಮೀಟರ್ (63 ಎಕರೆ) ಬೃಹತ್ ವಿಸ್ತೀರ್ಣ ಹೊಂದಿದೆ. ಹೊಸ ಟರ್ಮಿನಲ್ ಮೊದಲ ಟರ್ಮಿನಲ್‌ನ ಈಶಾನ್ಯ ದಿಕ್ಕಿನಲ್ಲಿದ್ದು, ನ್ಯೂಯಾರ್ಕ್ ಮೂಲದ ವಾಸ್ತು ಶಿಲ್ಪ ಕಂಪನಿಯು ಇದನ್ನು ವಿನ್ಯಾಸಗೊಳಿಸಿದೆ.
ಟರ್ಮಿನಲ್ ಅಲ್ಲ ಉದ್ಯಾನ!
2ನೇ ಟರ್ಮಿನಲ್ ಅನ್ನು ಟರ್ಮಿನಲ್ ರೀತಿಯಲ್ಲಿ ಅಲ್ಲದೆ ಉದ್ಯಾನದ ರೀತಿಯಲ್ಲಿ ನಿರ್ಮಿಸಿದ್ದಾರೆ. ಪ್ರಯಾಣಿಕರು ನಡೆದಷ್ಟೂಸುತ್ತಲೂ ಹಸಿರು ಆವರಿಸಿರುವಂತೆ ವಿನ್ಯಾಸಗೊಳಿಸಲಾಗಿದೆ. ಮುಖ್ಯ ರಸ್ತೆಯಿಂದ ಟಿ-2 ಪ್ರವೇಶಿಸುವವರೆಗೆ ಹಾಗೂ ಅಲ್ಲಿಂದ ವಿಮಾನ ಹತ್ತುವವರೆಗೆ ಸುತ್ತಲೂ ಹಸಿರು ಕಾಣುವಂತೆ ಮಾಡಲಾಗಿದೆ. ಟರ್ಮಿನಲ… ಸುತ್ತಲೂ 10,235 ಚದರ ಅಡಿಗಳಷ್ಟುಹಸಿರು ಗೋಡೆ (ವರ್ಟಿಕಲ್ ಗಾರ್ಡನ್), ಕಂಚಿನ ಪರದೆಗಳ ಮೂಲಕ ಟರ್ಮಿನಲ್‌ನ ತಾರಸಿಯಿಂದ ಜೋತು ಬೀಳುವ ಹಸಿರು ಗಿಡಗಳು, ಹಸಿರು ಕೊಳಗಳು ಮುದ ನೀಡುತ್ತವೆ.
620 ಸ್ಥಳೀಯ ಸಸ್ಯಗಳು, 3,600ಕ್ಕೂ ಹೆಚ್ಚು ಹೊಸ ಸಸ್ಯ ಪ್ರಭೇದಗಳು, 150ರಷ್ಟುತಾಳೆ ಪ್ರಭೇದ, 7,700ರಷ್ಟುಕಸಿ ಆದ ಮರ, 100 ವಿಧದ ಲಿಲ್ಲಿ, 96 ರೀತಿಯ ಕಮಲ, 180 ಅಪರೂಪದ ಸಸಿಗಳು ಇಲ್ಲಿವೆ.
ಇನ್ನು ಟರ್ಮಿನಲ್‌ನ ಒಳಾಂಗಣಗಳು ಬಿದಿರಿನಿಂದ ಸ್ಫೂರ್ತಿ ಪಡೆದಿದ್ದು, ಸಾಂಪ್ರದಾಯಿಕ ಬಿದಿರಿನ ನೇಯ್ಗೆ ಹೊಂದಿವೆ. ಇದು ಟರ್ಮಿನಲ್‌ಗೆ ಆಧುನಿಕತೆ ಜತೆ ಕ್ಲಾಸಿಕ್ ಸ್ಪರ್ಶ ನೀಡಿದೆ.
ಮುಖವೇ ಬೋರ್ಡಿಂಗ್ ಪಾಸ್!
‘ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್’ ತಂತ್ರಜ್ಞಾನದಿಂದ ಪ್ರಯಾಣಿಕರು ಯಾವುದೇ ಅಡೆತಡೆಗಳಿಲ್ಲದೆ ಸೆಕ್ಯುರಿಟಿ ಚೆಕ್‌ಗಳನ್ನು ದಾಟಿ ಹೋಗಲು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಪ್ರಯಾಣಿಕರ ಮುಖವನ್ನೇ ಬಯೋಮೆಟ್ರಿಕ್ ಟೋಕನ್‌ನಂತೆ ಪರಿಗಣಿಸಲಾಗುತ್ತದೆ. 90 ಕೌಂಟರ್‌ಗಳನ್ನು ಹೊಂದಿರುವ 2ನೇ ಟರ್ಮಿನಲ್ ವೇಗದ ಚೆಕ್-ಇನ್‌ಗಳು, ಸುರಕ್ಷತಾ ತಪಾಸಣೆ (ಸೆಕ್ಯುರಿಟಿ ಚೆಕ್) ಪ್ರದೇಶಗಳಿಂದ ವೇಗವಾಗಿ ಮುನ್ನಡೆಯಲು ಅನುವು ಮಾಡಿಕೊಡಲಿದೆ. ಜತೆಗೆ ಡಿಜಿ ಯಾತ್ರೆ, ಸೆಲ್‌್ಫ-ಬ್ಯಾಗೇಜ್ ಡ್ರಾಪ್ ವ್ಯವಸ್ಥೆ ಮೂಲಕ ತಡೆರಹಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟರ್ಮಿನಲ್‌ನಲ್ಲಿ ಕಲಾಕೃತಿಗಳ ಚಿತ್ತಾರ
ಟರ್ಮಿನಲ್‌ನಲ್ಲಿ ಕಲಾಕೃತಿ, ನಟನೆ ಸೇರಿದಂತೆ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡಲಾಗಿದೆ. ನಟನೆಯ ನವರಸಗಳನ್ನು ಬಿಂಬಿಸುವ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಜತೆಗೆ ಪ್ರಯಾಣಿಕರನ್ನು ತಡೆದು ನಿಲ್ಲಿಸುವಂತಹ ಕರ್ನಾಟಕದ ಪರಂಪರೆ, ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳನ್ನು ಪ್ರಯಾಣಿಕರ ಮುಂದಿಡಲಾಗಿದೆ. 43 ಕಲಾವಿದರ 60 ಆಯ್ದ ಕಲಾಕೃತಿಗಳು ಇಲ್ಲಿ ನೋಡಲು ಸಿಗುತ್ತವೆ.
ಅಗ್ನಿ ನಿರೋಧಕ ಬಿದಿರು ಬಳಕೆ
ಒಳಾಂಗಣಗಳನ್ನು ಬಿದಿರಿನಿಂದ ತಯಾರಿಸಲಾಗಿದೆ. ದಟ್ಟಹಸಿರಿನ ಭಾವನೆಯ ಜತೆಗೆ ಬಿದಿರು ನೋಟ ಹೊಸ ಅನುಭವ ನೀಡುತ್ತದೆ. ಆದರೆ, ಇದು ಅಗ್ನಿ ಅವಘಡಗಳಿಗೆ ದಾರಿ ಮಾಡಿಕೊಡದಂತೆ ಎಚ್ಚರ ವಹಿಸಿದ್ದು, ಎಂಜಿನಿಯರ್‌್ಡ ಬಿದಿರು ಬಳಸಿ ಅಗ್ನಿ ನಿರೋಧಕ ವ್ಯವಸ್ಥೆ ಮಾಡಲಾಗಿದೆ.
ಸುಸ್ಥಿರ ನಿಲ್ದಾಣ
ಸುಸ್ಥಿರತೆಗೆ ಆದ್ಯತೆ ನೀಡಿದ್ದು, ಉದ್ಯಾನವನಗಳು ನೈಸರ್ಗಿಕ ಗಾಳಿ ನೀಡುವಂತೆ ಮಾಡುವುದರ ಜತೆಗೆ ಸೌರ ಫಲಕಗಳಿಂದಾಗಿ ಶೇ.24.9 ರಷ್ಟುವಿದ್ಯುತ್ ಉಳಿತಾಯ ಮಾಡಲಾಗುತ್ತದೆ. ಜತೆಗೆ ಆರು ಮಳೆ ನೀರು ಕೊಯ್ಲು ವ್ಯವಸ್ಥೆಗಳಿಂದ 413 ದಶಲಕ್ಷ ಲೀಟರ್ ನೀರು ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ಜತೆಗೆ ಏಕೀಕೃತ ತ್ಯಾಜ್ಯ ನಿರ್ವಹಣೆ ಘಟಕ ಮಾಡಿದ್ದು, ಜೈವಿಕವಾಗಿ ವಿಘಟನೆಯಾಗಬಲ್ಲ ತ್ಯಾಜ್ಯದಿಂದ ಇಂಧನ ಹಾಗೂ ಗೊಬ್ಬರ ಉತ್ಪಾದನೆಗೂ ವ್ಯವಸ್ಥೆ ಮಾಡಿ ‘ಶೂನ್ಯ ತ್ಯಾಜ್ಯ’ ಪರಿಕಲ್ಪನೆ ಜಾರಿ ಮಾಡಲಾಗಿದೆ.
PM Modi in Bengaluru: ಕೊಪ್ಪಳದ ಕಿನ್ನಾಳದಿಂದ ಪ್ರಧಾನಿ ಮೋದಿಗೆ 'ಕಾಮಧೇನು' ಗಿಫ್ಟ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದೇಶದ ಎರಡನೇ ಅತಿ ದೊಡ್ಡ ಏರ್‌ಪೋರ್ಚ್ ಆಗಿ ಪರಿವರ್ತನೆ ಆಗಿದೆ. ಇದೀಗ ನರೇಂದ್ರ ಮೋದಿ ಅವರು 2ನೇ ಟರ್ಮಿನಲ್‌ಗೆ ಚಾಲನೆ ನೀಡಿರುವುದರಿಂದ ವಿಮಾನ ನಿಲ್ದಾಣದ ಸಾಮರ್ಥ್ಯ ಮತ್ತಷ್ಟುಹೆಚ್ಚಾಗಿದೆ. ಕೆಂಪೇಗೌಡರ ದೂರದೃಷ್ಟಿಯಿಂದ ವಿಶ್ವಮಾನ್ಯತೆ ಪಡೆದಿರುವ ಬೆಂಗಳೂರಿಗೆ ಇದು ಹೊಸ ಗರಿಯಾಗಿದೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
