ಬೆಂಗಳೂರು ಮೆಟ್ರೋದ ಹಳದಿ ಮಾರ್ಗದ ವಿಳಂಬದಿಂದಾಗಿ BMTCಯ ನೈಸ್ ರಸ್ತೆ ಬಸ್‌ಗಳು ಭರ್ಜರಿ ಲಾಭ ಗಳಿಸುತ್ತಿವೆ. ಮಾದವಾರದಿಂದ ಎಲೆಕ್ಟ್ರಾನಿಕ್ ಸಿಟಿಗೆ ಸಂಚರಿಸುವ ಈ ಬಸ್‌ಗಳು ಪ್ರತಿದಿನ 13,000ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿವೆ. 

ಬೆಂಗಳೂರು (ಜೂ.24): ಬೆಂಗಳೂರಿನ ಬಹು ನಿರೀಕ್ಷಿತ ‘ನಮ್ಮ ಮೆಟ್ರೋ’ ಹಳದಿ ಮಾರ್ಗದ ಕಾಮಗಾರಿ ಮತ್ತೆ ವಿಳಂಬವಾಗಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ನಿರಾಸೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ವಿವಿಧ ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದ ಆರಂಭವನ್ನು ಬಿಎಂಆರ್‌ಸಿಎಲ್‌ ಕಳೆದ ಎರಡು ವರ್ಷಗಳಿಂದ ನಾನಾ ಕಾರಣಗಳನ್ನು ನೀಡಿ ಮುಂದೂಡುತ್ತಿದೆ. ಇದರಿಂದಾಗಿ, ಪ್ರತಿದಿನ ಸಾವಿರಾರು ಉದ್ಯೋಗಿಗಳು ಮತ್ತು ಪ್ರಯಾಣಿಕರು ಪರ್ಯಾಯ ಮಾರ್ಗವಾಗಿ BMTCಯ ನೈಸ್ ರಸ್ತೆ ಎಕ್ಸ್‌ಪ್ರೆಸ್ ಬಸ್‌ಗಳತ್ತ ಮುಖ ಮಾಡಿದ್ದಾರೆ.

BMTC ಭರ್ಜರಿ ಕಲೆಕ್ಷನ್:

BMTC ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಮಾದವಾರದಿಂದ ಎಲೆಕ್ಟ್ರಾನಿಕ್ ಸಿಟಿಗೆ ನೇರ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಈ ಮಾರ್ಗದಲ್ಲಿ ಪ್ರತಿದಿನ 13,000ಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, BMTCಗೆ ಭರ್ಜರಿ ಕಲೆಕ್ಷನ್ ದೊರೆಯುತ್ತಿದೆ. ಪ್ರಯಾಣಿಕರು ಮೆಟ್ರೋ ಮೂಲಕ ಮಾದವಾರಕ್ಕೆ ತಲುಪಿ, ಅಲ್ಲಿಂದ ಬಸ್ ಮೂಲಕ ಎಲೆಕ್ಟ್ರಾನಿಕ್ ಸಿಟಿಗೆ ಸುಲಭವಾಗಿ ತೆರಳುತ್ತಿದ್ದಾರೆ. ನೈಸ್ ರಸ್ತೆಯ ಮೂಲಕ ವೇಗದ ಸಂಪರ್ಕವನ್ನು ಕಲ್ಪಿಸಿರುವ BMTC, ಜನರಿಗೆ ಅನುಕೂಲವಾಗುವುದರ ಜೊತೆಗೆ ಗಣನೀಯ ಲಾಭವನ್ನೂ ಗಳಿಸುತ್ತಿದೆ.

ಹಳದಿ ಮಾರ್ಗದ ಕಾಮಗಾರಿ ಪೂರ್ಣ ಯಾವಾಗ?

ಆದರೆ, ಹಳದಿ ಮಾರ್ಗದ ವಿಳಂಬದಿಂದಾಗಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುವ ಲಕ್ಷಾಂತರ ಉದ್ಯೋಗಿಗಳು ನಿರಾಸೆಯಲ್ಲಿದ್ದಾರೆ. ಈ ಮಾರ್ಗವು ಆರಂಭವಾದರೆ ಸಂಚಾರ ದಟ್ಟಣೆ ಕಡಿಮೆಯಾಗಿ, ವೇಗವಾಗಿ ಮತ್ತು ಸೌಕರ್ಯವಾಗಿ ಪ್ರಯಾಣಿಸಬಹುದೆಂಬ ಭರವಸೆಯಲ್ಲಿದ್ದ ಜನರು, ಈಗ BMTC ಬಸ್‌ಗಳನ್ನೇ ಆಧರಿಸಿದ್ದಾರೆ. BMRCL ಶೀಘ್ರವೇ ಹಳದಿ ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ, ಜನರಿಗೆ ಅನುಕೂಲ ಕಲ್ಪಿಸಬೇಕೆಂದು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.