ಎಂ.ಜಿ.ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣ ಬಳಿ ಬಿರುಕು ಬಿಟ್ಟ ಪಿಲ್ಲರ್ ಬೀಮ್ ದುರಸ್ಥಿ ಕಾರ್ಯ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ.

ಬೆಂಗಳೂರು[ಡಿ.20]: ನಗರದ ಎಂ.ಜಿ.ರಸ್ತೆಯ ಟ್ರಿನಿಟಿ ಮೆಟ್ರೋ ನಿಲ್ದಾಣ ಬಳಿ ಬಿರುಕು ಬಿಟ್ಟ ಪಿಲ್ಲರ್ ಬೀಮ್(ವಯಾಡಕ್ಟ್) ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಡಿ.28ರಂದು ರಾತ್ರಿ 8ರಿಂದ ಡಿ.30ರವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ. ಅಂದು ಕೇಂದ್ರ ರೈಲ್ವೆ ಅಧಿಕಾರಿಗಳು ಮೆಟ್ರೋ ಪರಿಶೀಲನೆ ನಡೆಸಲಿದ್ದು, ದುರಸ್ತಿ ಕಾರ‌್ಯವೂ ನಡೆಯಲಿದೆ. ಈ ಕಾರಣದಿಂದ ಡಿ.28ರಂದು ರಾತ್ರಿ 8ರಿಂದ ಎಂ.ಜಿ.ರಸ್ತೆಯಿಂದ ಇಂದಿರಾನಗರದ ನಡುವಿನ ಮೆಟ್ರೋ ರೈಲು ಸಂಚಾರ ರದ್ದುಪಡಿಸಲಾಗಿದೆ.

ಡಿ.31ರಂದು ಎಂದಿನಂತೆ ನಮ್ಮ ಮೆಟ್ರೋ ರೈಲು ವಾಣಿಜ್ಯ ಸಂಚಾರ ನಡೆಸಲಿದೆ. ನೇರಳೆ ಮಾರ್ಗದಲ್ಲಿ ಮೈಸೂರು ರಸ್ತೆಯಿಂದ ಎಂ.ಜಿ.ರಸ್ತೆ ಮತ್ತು ಇಂದಿರಾ ನಗರದಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅಡ್ಡಿ ಇಲ್ಲ. ಆದರೆ ಮೆಟ್ರೋ ರೈಲು 6ರಿಂದ 14 ನಿಮಿಷಗಳಿಗೆ ಒಂದರಂತೆ ಸಂಚರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಚಿತ ಬಸ್ ಸೇವೆ: 

ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಡಿ.28ರಂದು ರಾತ್ರಿ 8ರಿಂದ 11ರವರೆಗೆ ಮತ್ತು ಡಿ.29 ಹಾಗೂ 30ರಂದು ಉಚಿತವಾಗಿ ಬಸ್ ಸೇವೆಗಳನ್ನು ಕಬ್ಬನ್‌ ಪಾರ್ಕ್‌ನಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ (ಎರಡೂ ದಿಕ್ಕುಗಳಲ್ಲಿ) ಒದಗಿಸಲಿದೆ. ಡಿ.31ರಂದು ಬೆಳಗ್ಗೆ 5ಕ್ಕೆ ನೇರಳೆ ಮಾರ್ಗದಲ್ಲಿ ಎಂದಿನಂತೆ ಮೆಟ್ರೋ ಸಂಚಾರ ಮುಂದುವರೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.