ಬೆಂಗಳೂರು(ಮೇ.29): ಲಾಕ್‌ಡೌನ್‌ ಸಮಯದಲ್ಲಿ ಬಡವರು, ಕೂಲಿ ಕಾರ್ಮಿಕರು ಹಾಗೂ ತೊಂದರೆಗೆ ಒಳಗಾದವರಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ‘ಫುಡ್‌ ಡೆಲಿವರಿ ಡ್ರೈವ್‌’ ಅಭಿಯಾನದ ಮೂಲಕ ಸುಮಾರು 24 ಕೋಟಿ ಮೌಲ್ಯಕ್ಕಿಂತ ಹೆಚ್ಚು ಉಚಿತ ಆಹಾರ ಮತ್ತು ದಿನಸಿ ಕಿಟ್‌ಗಳನ್ನು ವಿತರಿಸಿದೆ.

"

ನಗರದಾದ್ಯಂತ ದೈನಂದಿನ ಕೂಲಿ ಮಾಡುವವರ ಕುಟುಂಬಗಳಿಗೆ ಬೆಂಬಲವನ್ನು ಒದಗಿಸಲು ಆಹಾರ ಪ್ಯಾಕೆಟ್‌ ಮತ್ತು ದಿನಸಿ ಕಿಟ್‌ಗಳನ್ನು ನೀಡಲು ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳೊಂದಿಗೆ ‘ಫುಡ್‌ ಡೆಲಿವರಿ ಡ್ರೈವ್‌’ ಅಭಿಯಾನ ಪ್ರಾರಂಭಿಸಿತ್ತು. ಈ ಅಭಿಯಾನದಲ್ಲಿ ಒಟ್ಟಾರೆ 24 ಕೋಟಿ ಮೌಲ್ಯದ ಆಹಾರ ಪ್ಯಾಕೆಟ್‌ ಮತ್ತು ದಿನಸಿ ಕಿಟ್‌ (ಎರಡು ವಾರಗಳವರೆಗೆ ಒಂದು ಕುಟುಂಬದ 4-5 ಸದಸ್ಯರಿಗೆ ಸಾಕಾಗುವಷ್ಟು ಪ್ರತಿ ಕಿಟ್‌) ಗಳನ್ನು 4.5 ಲಕ್ಷ ಜನರಿಗೆ ವಿತರಿಸಲಾಗಿದೆ.

510 ದಿನಗೂಲಿ ಕಾರ್ಮಿಕ ಕುಟುಂಬಕ್ಕೆ ದಿನಸಿ ಕಿಟ್ ವಿತರಣೆ

ಲಾಕ್‌ಡೌನ್‌ ಬಿಕ್ಕಟ್ಟಿನ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿರುವ ಅತ್ಯಂತ ದುರ್ಬಲ ಸಮುದಾಯಗಳಿಗೆ ಸಹಾಯ ಮಾಡಲು ‘ನಮ್ಮ ಬೆಂಗಳೂರು ಪ್ರತಿಷ್ಠಾನ’ದೊಂದಿಗೆ ಆಟ್ರಿಯಾ ಫೌಂಡೇಶನ್‌, ಜೈನ್‌ ಇಂಟರ್‌ ನ್ಯಾಷನಲ್‌ ಟ್ರೇಡ್‌ ಆರ್ಗನೈಸೇಶನ್‌ (ಜಿಐಟಿಒ), ಸತ್ಸಂಗ್‌ ಫೌಂಡೇಶನ್‌, ಗಾಡ್ವಾಡ್‌ ಭವನ, ಎವಿಎಎಸ್‌(ಆವಾಸ್‌), ಗಿಲ್ಗಲ್‌ ಚಾರಿಟೇಬಲ್‌ ಟ್ರಸ್ವ್‌ ಮತ್ತು ಕೆಲವು ಸ್ವತಂತ್ರ ದಾನಿಗಳು ದೇಣಿಗೆ ನೀಡುವ ಮೂಲಕ ಕೈಜೋಡಿಸಿದ್ದರು. ಆಹಾರ ಮತ್ತು ದಿನಸಿ ಪದಾರ್ಥಗಳ ಕಿಟ್‌ಗಳೊಂದಿಗೆ ಆರೋಗ್ಯ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಸಹ ನೀಡಲಾಗಿದೆ. ಜತೆಗೆ ಮುಂಚೂಣಿಯ ಆರೈಕೆದಾರರಿಗೆ ಸ್ವಯಂ-ಕ್ವಾರಂಟೈನ್‌ ಅನ್ನು ಥ್ರೀ ಸ್ಟಾರ್‌ ಹೋಟೆಲ್‌ಗಳಲ್ಲಿ ಒದಗಿಸಲಾಗಿದೆ.

ದಿನಗೂಲಿ ಕಾರ್ಮಿಕರು, ಬಡವರು ಮತ್ತು ವಲಸಿರಿಗೆ ಬೆಂಬಲವಾಗಿ ‘ಫುಡ್‌ ಡೆಲಿವರಿ ಡ್ರೈವ್‌’ ಅಭಿಯಾನ ಮುಂದುವರೆಯಲಿದ್ದು, ಆಸಕ್ತರು ದೇಣಿಗೆ ನೀಡಿ ಸಹಾಯಹಸ್ತ ಚಾಚಬಹುದು. ಈ ಅಭಿಯಾನದಲ್ಲಿ ಕೈಜೋಡಿಸಿದ ಸ್ವಯಂಸೇವಕರು, ಸಂಘ ಸಂಸ್ಥೆಗಳು, ಸಾರಿಗೆ ವ್ಯವಸ್ಥೆ ಕಲ್ಪಿಸಿದ ಲಾಜಿಸ್ಟಿಕ್‌ ಸಂಸ್ಥೆಗಳಿಗೆ ಪ್ರತಿಷ್ಠಾನವು ಕೃತಜ್ಞತೆ ಸಲ್ಲಿಸಿದೆ.