ಮುಡಾ ಹಗರಣ: ಸಿಎಂ ಸಿದ್ದರಾಮಯ್ಯನವರ ಬಂಧನಕ್ಕೆ ಆಗ್ರಹಿಸಿದ ಸ್ನೇಹಮಯಿ ಕೃಷ್ಣ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಬಂಧಿಸದಿದ್ದರೆ ತಮ್ಮ ಕುಟುಂಬದ ಮೇಲೆ ಹಲ್ಲೆಯಾಗುವ ಆತಂಕವಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು (ಅ.06): ರಾಜ್ಯದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) 14 ನಿವೇಶನಗಳನ್ನು ಅಕ್ರಮವಾಗಿ ಪಡೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡಲೇ ಬಂಧಿಸಬೇಕು. ಇಲ್ಲವಾದಲ್ಲಿ ಅವರ ಬೆಂಬಲಿಗರಿಂದ ನಮ್ಮ ಕುಟುಂಬದ ಮೇಲೆ ಹಲ್ಲೆಯಾಗುವ ಆತಂಕವಿದೆ ಎಂದು ಸಿಎಂ ವಿರುದ್ಧ ರಾಜ್ಯಪಾಲರು, ಲೋಕಾಯುಕ್ತಕ್ಕೆ ದೂರು ನೀಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.
ಮುಡಾ ಹಗರಣದ ಕುರಿತು ಭಾನುವಾರ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ರಾಜೀನಾಮೆಯಲ್ಲ, ಬಂಧಿಸಬೇಕು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ 14 ಸೈಟ್ ಪ್ರಕರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯ, ಹೋದ -ಬಂದೆಲ್ಲೆಲ್ಲಾ ಜನರನ್ನ ಪ್ರಚೋದನೆ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಈಗಾಗಲೇ ಕೋರ್ಟ್ ತನಿಖೆಗೆ ಆದೇಶ ಕೊಟ್ಟಿದೆ. ಆದರೂ, ನಾನು ರಾಜಕೀಯವಾಗಿ ಹೋರಾಟ ಮಾಡುತ್ತೇನೆ ಎಂದು ಜನರನ್ನ ಪ್ರಚೋದಿಸುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಸಿಎಂ ಪರ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಬ್ಯಾಟಿಂಗ್: ಕಳ್ಳರು ಕಳ್ಳರು ಒಂದಾಗಿದ್ದಾರೆ: ಸ್ನೇಹಮಯಿ ಕೃಷ್ಣ ವ್ಯಂಗ್ಯ
ಸಿದ್ದರಾಮಯ್ಯ ಅವರು ತಮ್ಮ ಪ್ರತಿ ಭಾಷಣದಲ್ಲೂ ಇದೇ ವಿಚಾರ ಮಾತನಾಡುತ್ತಾ ಜನರು ಬೆಂಬಲ ಕೊಡಬೇಕು ಎಂದು ಕೇಳುತ್ತಿದ್ದಾರೆ. ಈ ಮೂಲಕ ಅವರ ವಿರುದ್ಧ ದೂರು ನೀಡಿದ ನನ್ನ ಬಗ್ಗೆ ಕೆದಕುತ್ತಾ ಜನರನ್ನು ಕೆರಳಿಸುವಂತಾಗುತ್ತದೆ. ಇದರಿಂದ ನಮ್ಮ ಕುಟುಂಬದ ಮೇಲೆ ಹಲ್ಲೆ ಆಗುವ ಸಾಧ್ಯತೆಗಳು ಕೂಡ ಇದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನ ಕೂಡಲೇ ಬಂಧಿಸಬೇಕು ಎಂದು ಲೋಕಾಯುಕ್ತ ಎಸ್‌ಪಿ ಉದೇಶ್‌ಗೆ ವಾಟ್ಸ್ ಅಪ್ ಮೂಲಕ ಮನವಿ ಮಾಡಿದ್ದೇನೆ. ಆದರೆ, ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಿಳಿಸಿದರು.
ನನ್ನ ಕರೆ ಕೂಡ ಸ್ವೀಕಾರ ಮಾಡ್ತಿಲ್ಲ. ನನ್ನ ಮನವಿಗೆ ಸ್ಪಂದಿಸದ ಕಾರಣ ಲೋಕಾಯುಕ್ತರ ಬಳಿ ದೂರು ನೀಡುತ್ತೇನೆ. ನಾಳೆ ಬೆಂಗಳೂರಿಗೆ ತೆರಳಿ ಲೋಕಾಯುಕ್ತರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಂಧಿಸುವಂತೆ ಮನವಿ ಮಾಡುತ್ತೇನೆ. ಅದೇ ರೀತಿ ಮೈಸೂರು ಜಿಲ್ಲೆಯ ಲೋಕಾಯುಕ್ತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ವಿರುದ್ಧ ಕರ್ತವ್ಯ ಲೋಪದ ವಿರುದ್ಧ ದೂರು ನೀಡಲಿದ್ದೇನೆ ಎಂದು ಮಾಹಿತಿ ನೀಡಿದರು.