ಮೈಸೂರು ದಸರಾ ಮಹೋತ್ಸವದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲಿರುವ ಆನೆಯ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಈ ಬಾರಿ ದುಬಾರೆ ಶಿಬಿರದ 54 ವರ್ಷದ 'ಪ್ರಶಾಂತ' ಆನೆ ಅಂಬಾರಿ ಹೊರಲಿದ್ದು, ಇಂದು ಮಧ್ಯಾಹ್ನ ಅಧಿಕೃತ ಘೋಷಣೆಯಾಗಲಿದೆ. ಕಳೆದ 18 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿರುವ ಈ ಆನೆ ತನ್ನ ಶಿಸ್ತಿಗೆ ಹೆಸರಾಗಿದೆ.
ಮೈಸೂರು (ಅ.14): ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಚಿನ್ನದ ಅಂಬಾರಿ ಹೊರಲಿರುವ ಗಜಪಡೆಯ ನಾಯಕ (Captain) ಯಾರು ಎಂಬ ತಿಂಗಳುಗಳ ನಿರೀಕ್ಷೆ ಹಾಗೂ ಚರ್ಚೆಗಳಿಗೆ ಕೊನೆಗೂ ತೆರೆಬೀಳಲಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಜಗತ್ಪ್ರಸಿದ್ಧ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 'ಪ್ರಶಾಂತ' (Prashantha Elephant) ಆನೆ ಹೊತ್ತು ಸಾಗಲಿದೆ ಎಂದು ತಿಳಿದುಬಂದಿದೆ. ಈ ಕುರಿತು ಇಂದು ಮಧ್ಯಾಹ್ನ 3:30ಕ್ಕೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಮಧ್ಯಾಹ್ನ 3:30ಕ್ಕೆ ಅಧಿಕೃತ ಘೋಷಣೆ:
ಜಿಲ್ಲಾ ಉಸ್ತುವಾರಿ ಸಚಿವರು ಇಂದು ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ನಡೆಸಿ, ಈ ಬಾರಿಯ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿರುವ ಮುಂಚೂಣಿ ಆನೆಯ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಯಾರೀ ಗಜರಾಜ 'ಪ್ರಶಾಂತ'?
- ಆನೆ ಹೆಸರು: ಪ್ರಶಾಂತ (Prashantha)
- ಆನೆ ಶಿಬಿರ: ದುಬಾರೆ ಆನೆ ಶಿಬಿರ (Dubare Elephant Camp)
- ಲಿಂಗ: ಗಂಡು
- ವಯಸ್ಸು: 54 ವರ್ಷಗಳು
- ಶರೀರದ ಅಳತೆ: ಎತ್ತರ 2.61 ಮೀಟರ್, ಉದ್ದ 3.46 ಮೀಟರ್
- ಅಂದಾಜು ತೂಕ: 5100 ಕೆ.ಜಿ.
ಪ್ರಶಾಂತ ಆನೆಯ ಇತಿಹಾಸ ಮತ್ತು ಹಿನ್ನೆಲೆ:
ಈ ಗಜರಾಜನನ್ನು 1993ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾರೆಕೊಪ್ಪ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯು ಯಶಸ್ವಿಯಾಗಿ ಸೆರೆಹಿಡಿದಿತ್ತು. ಅತ್ಯಂತ ಪ್ರಬಲ ದೇಹದಾಢ್ರ್ಯ ಹಾಗೂ ಗಂಭೀರ ನಡವಳಿಕೆಯನ್ನು ಹೊಂದಿರುವ ಈ ಆನೆಯನ್ನು ಶೀಘ್ರದಲ್ಲೇ ಪಳಗಿಸಿ ವಿಶೇಷ ತರಬೇತಿಗೆ ಒಳಪಡಿಸಲಾಗಿತ್ತು. ಬಲಿಷ್ಠ ಹಾಗೂ ನಂಬಿಕಸ್ಥ ಆನೆಯಾಗಿ ಅರಣ್ಯ ಇಲಾಖೆಯ ವಿವಿಧ ವನ್ಯಜೀವಿ ಕಾರ್ಯಾಚರಣೆಗಳಲ್ಲಿ ಪ್ರಶಾಂತ ಮೌಲ್ಯಯುತ ಸೇವೆಯನ್ನು ಸಲ್ಲಿಸಿದೆ.
ಕಳೆದ 18 ವರ್ಷಗಳಿಂದ ಮೈಸೂರು ದಸರಾ ಮಹೋತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತ ಬಂದಿರುವ ಪ್ರಶಾಂತ, ಉತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ತನ್ನ ಶಿಸ್ತುಬದ್ಧ ನಡೆ, ಸತತ ಸೇವೆ ಹಾಗೂ ಮಾವುತರು-ಕಾಾವಟಿಗಳ ಆಜ್ಞೆಯನ್ನು ಚಚೂ ತಪ್ಪದೆ ಪಾಲಿಸುವ ಮೂಲಕ ದಸರಾ ಆನೆಗಳ ಪೈಕಿ ಅತ್ಯಂತ ನಂಬಿಕಸ್ಥ ಸದಸ್ಯನೆಂದು ಗುರುತಿಸಿಕೊಂಡಿದೆ. ಈ ಆನೆಯ ಗಂಭೀರ ಹಾಗೂ ಶಾಂತಿಯುತ ಸ್ವಭಾವವು ಮೆರವಣಿಗೆಯ ಭದ್ರತೆಗೆ ಅತ್ಯಂತ ಸಹಕಾರಿಯಾಗಿದೆ.
ಕಳೆದ ಬಾರಿಯ ದಸರಾದಲ್ಲಿ 'ಸಾಲ್ ಆನೆ'ಯಾಗಿ (Saal Elephant) ಅತ್ಯುತ್ತಮ ಸೇವೆ ಸಲ್ಲಿಸಿದ್ದ ಪ್ರಶಾಂತ, ಈಗ 3 ದಶಕಗಳ ಸುದೀರ್ಘ ಸೇವಾ ಪಯಣದೊಂದಿಗೆ ಮೈಸೂರು ದಸರಾ ಪರಂಪರೆಯ ಜೀವಂತ ಚಿಹ್ನೆಯಾಗಿ ಹೊರಹೊಮ್ಮಿದೆ. ಒಟ್ಟಿನಲ್ಲಿ, ಪ್ರಶಾಂತನ ಹೆಗಲೇರಲಿರುವ ಈ ಬಾರಿಯ ಅಂಬಾರಿ ಹೊರೆಯು ನಾಡಹಬ್ಬದ ಮೆರುಗನ್ನು ಮತ್ತಷ್ಟು ಹೆಚ್ಚಿಸಲಿದೆ.


