ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯ ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು (ಜೂನ್.12): ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದ ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯ (Mysuru Bengaluru Expressway) ಟೋಲ್ ದರವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಸದ್ದಿಲ್ಲದೇ ಎಕ್ಸ್‌ಪ್ರೆಸ್‌ ಟೋಲ್ ದರ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶೇ.22ರಷ್ಟು ಟೋಲ್ ದರ ಏರಿಕೆ ಮಾಡಿದೆ. ಜೂನ್ 1ರಿಂದಲೇ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬಿದ್ದಿದೆ. ಫಾಸ್ಟ್ ಟ್ಯಾಗ್ ಇರೋ ಕಾರಣ ವಾಹನ ಸವಾರರ ಗಮನಕ್ಕೂ ಬಾರದೇ ಹಣ ವಸೂಲಿ ಮಾಡಲಾಗುತ್ತಿದೆ. ಈ ಹಿಂದೆ ಏ.1ರಂದೇ ದರ ಏರಿಕೆ ಮಾಡಿದ್ದ ಹೆದ್ದಾರಿ ಪ್ರಾಧಿಕಾರ. ಸಾರ್ವಜನಿಕ ಆಕ್ರೋಶ ಹಿನ್ನೆಲೆ ದರ ಹೆಚ್ಚಳ ವಾಪಸ್ಸ್ ಪಡೆದಿತ್ತು. ಇದೀಗ ಮತ್ತೆ ಟೋಲ್ ದರ ಏರಿಕೆ ಮಾಡಿದೆ.

ಕರ್ನಾಟಕದಲ್ಲಿ ಹಾದು ಹೋಗುವ ನೈರುತ್ಯ ರೈಲುಗಳ ವೇಳಾಪಟ್ಟಿ ಬದಲಾವಣೆ, ನಿಲುಗಡೆ ರದ್ದು

ಕಾರ್, ವ್ಯಾನ್‌, ಜೀಪ್‌ಗಳ ಏಕಮುಖ ಸಂಚಾರಕ್ಕೆ ₹135 ರಿಂದ ₹165ಕ್ಕೆ ಏರಿಕೆ (30 ರೂ ಹೆಚ್ಚಳ).
ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್‌ ₹220ರಿಂದ ₹270ಕ್ಕೆ ಏರಿಕೆ(50ರೂ ಹೆಚ್ಚಳ).
ಟ್ರಕ್‌, ಬಸ್, 2 ಆಕ್ಸೆಲ್‌ ವಾಹನಗಳ ಏಕಮುಖ ಸಂಚಾರಕ್ಕೆ ₹460 ರಿಂದ ₹565ಕ್ಕೆ ಏರಿಕೆ.(105 ಹೆಚ್ಚಳ).
3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ₹ 500 ರಿಂದ ₹615ಕ್ಕೆ ಏರಿಕೆ (115 ರೂ ಹೆಚ್ಚಳ).
ಭಾರಿ ವಾಹನಗಳ ಏಕಮುಖ ಸಂಚಾರ ₹ 720ರಿಂದ ₹885ಕ್ಕೆ ಏರಿಕೆ (165 ಹೆಚ್ಚಳ).
7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್‌ ವಾಹನಗಳ ಎಕಮುಖ ಸಂಚಾರ ₹880ರಿಂದ ₹1,080ಕ್ಕೆ ಏರಿಕೆ (₹200 ಹೆಚ್ಚಳ).

ಫಾಸ್ಟ್‌ಟ್ಯಾಗ್‌ನಲ್ಲಿ 10 ರೂಪಾಯಿ ಹೆಚ್ಚಿನ ಹಣ ಕಟ್‌, ಹೆದ್ದಾರಿ ಪ್ರಾಧಿಕಾರವನ್ನೇ ಕೋರ್ಟ್‌ಗೆ ಎಳೆದ ಬೆಂಗಳೂರಿಗ!

ಈ ಹಿಂದೆ ಏ. 1ರಿಂದ ಅನ್ವಯವಾಗುವಂತೆ ಮೈಸೂರು - ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯ ಶುಲ್ಕವನ್ನು ಕನಿಷ್ಟ 35 ರೂ.ಗಳಿಂದ ಗರಿಷ್ಠ 305 ರೂ.ಗಳಷ್ಟು ಹೆಚ್ಚಿಸಿ ಎನ್ಎಚ್ಎಐ ಆದೇಶ ಹೊರಡಿಸಿತ್ತು. ಮಾ. 14ರಿಂದ ಈ ಹೆದ್ದಾರಿಯಲ್ಲಿ ಶುಲ್ಕ ಸಂಗ್ರಹಿಸಲು ಆರಂಭಿಸಲಾಗಿದ್ದು, ಕೇವಲ 17 ದಿನಗಳಲ್ಲೇ ಶುಲ್ಕವನ್ನು ಪರಿಷ್ಕಕರಿಸಿದ್ದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಟೋಲ್ ಹೆಚ್ಚಳ ಆದೇಶವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಪಸ್ ತೆಗೆದುಕೊಂಡಿತ್ತು. ಆದರೆ ಈ ಆದೇಶವನ್ನು ಕೇವಲ 3 ತಿಂಗಳ ಅವಧಿಗೆ ಮಾತ್ರ ಹಿಂಪಡೆದು, ಮೂರು ತಿಂಗಳ ನಂತರ ಪುನಃ ಈ ಆದೇಶ ಜಾರಿ ಮಾಡಲು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ. ಆದರೆ ಮೂರು ತಿಂಗಳಿಗೆ ಮುನ್ನವೇ ಟೋಲ್ ದರ ಹೆಚ್ಚಳ ಮಾಡಲಾಗಿದೆ.