ವಿಜಯಪುರದಲ್ಲೂ ಮೈಸೂರು ಸ್ಯಾಂಡಲ್ ಸೋಪ್ ಘಟಕ ಸ್ಥಾಪನೆ; ಎಷ್ಟು ಮಂದಿಗೆ ಉದ್ಯೋಗ ಸಿಗುತ್ತೆ ಗೊತ್ತಾ?
ವಿಜಯಪುರ ಜಿಲ್ಲೆಯಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿಯ ಘಟಕ ಸ್ಥಾಪನೆಯಾಗಲಿದ್ದು, ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಈ ಯೋಜನೆಯನ್ನು ಘೋಷಿಸಿದ್ದಾರೆ.
ವಿಜಯಪುರ (ಜ.12): ಶ್ರೀಗಂಧದ ನಾಡು ನಮ್ಮ ಕರ್ನಾಟಕದಿಂದ ಉತ್ಪಾದನೆಯಾಗಿ ಜಾಗತಿಕ ಮಟ್ಟದಲ್ಲಿ ಮಾರಾಟವಾಗುವ ಮೈಸೂರು ಸ್ಯಾಂಡಲ್ ಸೋಪಿನ ಫ್ಯಾಕ್ಟರಿಯ ಘಟಕವನ್ನು ವಿಜಯಪುರ ಜಿಲ್ಲೆಯಲ್ಲಿಯೂ ಸ್ಥಾಪಿಸಲಾಗುತ್ತಿದೆ. ಇದರಿಂದ ವಿಜಯಪುರ ಜಿಲ್ಲೆಯ ಸ್ಥಳೀಯ ಜನರಿಗೆ ಭಾರೀ ಉದ್ಯೋಗವಕಾಶಗಳು ಲಭ್ಯವಾಗಲಿವೆ.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಅವರ ಕೊಡುಗೆಯಾಗಿರುವ ಮೈಸೂರು ಸ್ಯಾಂಡಲ್ ಸೋಪು ಮತ್ತು ಗಂಧದ ಎಣ್ಣೆ ಕಾರ್ಖಾನೆಯಲ್ಲಿ ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಂಡು ನಿರ್ವಹಣೆ ಮಾಡುತ್ತಿದೆ. ಇದೀಗ ರಾಜ್ಯ ಸರ್ಕಾರದ ಕೈಗಾರಿಕಾ ಇಲಾಖೆ ಅಡಿಯಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ನಿಗಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನು ಕೆಎಸ್‌ಡಿಎಲ್ ಕೈಗಾರಿಕಾ ಸಚಿವರ ಆಡಳಿತ ವ್ಯಾಪ್ತಿಗೆ ಬರಲಿದ್ದು, ಇತ್ತೀಚೆಗೆ ಭಾರೀ ಆದಾಯ ಗಳಿಸುವತ್ತ ಮುನ್ನುಗ್ಗುತ್ತಿದೆ. ಇದಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಕೂಡ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಈ ಹಿಂದಿನ ಎಲ್ಲ ಕೈಗಾರಿಕಾ ಸಚಿವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಲೋಚನೆ ಮಾಡಿರುವ ಹಾಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು, ಸರ್ಕಾರದ ಕೈಗಾರಿಕೋದ್ಯಮವನ್ನು ಮತ್ತಷ್ಟು ವಿಸ್ತರಣೆ ಮಾಡುವುದಕ್ಕೆ ಮುಂದಾಗಿದ್ದಾರೆ. ಹೀಗಾಗಿ, ಕೆಎಸ್‌ಡಿಎಲ್‌ನ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕವನ್ನು ವಿಜಯಪುರ ಜಿಲ್ಲೆಗೂ ವಿಸ್ತರಣೆ ಮಾಡಲು ಯೋಜನೆ ರೂಪಿಸಿದ್ದಾರೆ. ವಿಜಯಪುರದ ಹೊರವಲಯದ ಇಟ್ಟಂಗಿಹಾಳ ಬಳಿ 10 ಎಕರೆ ಜಾಗದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆ ಘಟಕ ಆರಂಭಿಸಲಾಗುತ್ತಿದೆ ಎಂಬ ಘೋಷಣೆ ಮಾಡಿದ್ದಾರೆ.
ಕೆಎಸ್‌ಡಿಎಲ್ ವತಿಯಿಂದ ವಿಜಯಪುರದಲ್ಲಿ ಆಯೋಜನೆ ಮಾಡಲಾಗಿದ್ದ ಸಾಬೂನು ಮೇಳದಲ್ಲಿ ಪಾಲ್ಗೊಂಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರಿಗೆ ನಾಗಠಾಣ ಶಾಸಕ ವಿಠಲ ಕಟಕದೊಂಡ ಅವರು ವಿಜಯಪುರದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕಾ ಘಟಕ ಆರಂಭಿಸಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕೂಡಲೇ ಸ್ಪಂದಿಸಿದ ಸಚಿವ ಎಂ.ಬಿ. ಪಾಟೀಲ ಅವರು ಇಟ್ಟಂಗಿಹಾಳದ ಬಳಿ ಮೈಸೂರು ಸ್ಯಾಂಡಲ್ ಸೋಪಿನ ತಯಾರಿಕಾ ಉಪಘಟಕ ಆರಂಭಿಸಲು ಯೋಜನೆ ರೂಪಿಸಲಾಗುದೆ ಎಂದು ತಮ್ಮ ಹೊಸ ಯೋಜನೆಯನ್ನು ಪ್ರಕಟಿಸಿದರು. ಈ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಸಚಿವರ ಉಪಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ತುಮಕೂರು ಸಿದ್ದಗಂಗಾ ಮಠದ ₹70 ಲಕ್ಷ ವಿದ್ಯುತ್ ಬಿಲ್ ಮನ್ನಾ ಮಾಡಿದ ಸರ್ಕಾರ!
400 ಮಂದಿಗೆ ಉದ್ಯೋಗಾವಕಾಶ: ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಾತನಾಡಿ, ವಿಜಯಪುರದ ಬಳಿ ಸ್ಥಾಪಿಸಲಾಗುವ ಮೈಸೂರು ಸ್ಯಾಂಡಲ್ ಸೋಪು ಘಟಕದಿಂದ ಉತ್ತರ ಕರ್ನಾಟಕಕ್ಕೆ ಮಾತ್ರವಲ್ಲದೆ, ಮಹಾರಾಷ್ಟ್ರಕ್ಕೂ ಇಲ್ಲಿಂದಲೇ ಸಾಬೂನುಗಳನ್ನು ಸರಬರಾಜು ಮಾಡುವ ಕೆಲಸ ಮಾಡಲಾಗುವುದು. ಇದರಿಂದ ಮೈಸೂರು ಸ್ಯಾಂಡಲ್ ಸೋಪಿನ ಮಾರುಕಟ್ಟೆಯನ್ನು ವಿಸ್ತರಣೆ ಮಾಡಲು ಅನುಕೂಲ ಆಗಲಿದೆ. ಜೊತೆಗೆ, ಇಲ್ಲಿ ಘಟನೆ ಆರಂಭಿಸುವುದರಿಂದ ಸ್ಥಳೀಯ ಅರ್ಹ ಯುವ ಜನರಿಗೆ ಉದ್ಯೋಗ ಕೂಡ ಲಭಿಸುತ್ತದೆ. ಒಟ್ಟು 400 ಉದ್ಯೋಗಗಳು ಸ್ಥಳೀಯ ಯುವಜನರಿಗೆ ಲಭಿಸಲಿವೆ ಎಂದು ತಿಳಿಸಿದರು.
ಕೆಎಸ್‌ಡಿಎಲ್ ಮೊದಲು ನಷ್ಟದಲ್ಲಿತ್ತು. ಈಗ 3 ಪಾಳಿಯಲ್ಲಿ ಕೆಲಸ ನಡೆಯುತ್ತಿದ್ದು, ಸಂಸ್ಥೆಯು ಲಾಭದ ಹಳಿಗೆ ಬಂದಿದೆ. ಜೊತೆಗೆ ತಾವು ಸಚಿವರಾದ ಮೇಲೆ ಗುಣಮಟ್ಟದ 20 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯ ಗತವೈಭವ ಮರುಕಳಿಸುವಂತೆ ಮಾಡಲಾಗುವುದು. ಕಿರಾಣಿ ಅಂಗಡಿ, ವಿಮಾನ ನಿಲ್ದಾಣ, ವಿದೇಶಗಳ ಮಳಿಗೆ ಹೀಗೆ ಎಲ್ಲ ಕಡೆಯೂ ಮೈಸೂರು ಸ್ಯಾಂಡಲ್ ಸೋಪ್ ಮತ್ತು ಸಂಸ್ಥೆಯ ಇತರ ಉತ್ಪನ್ನಗಳು ದೊರೆಯುವಂತೆ ಮಾಡಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜ್ಯದ ವಿಶಿಷ್ಟ ಉತ್ಪನ್ನಗಳ ಮಾರಾಟಕ್ಕೆಂದೇ ಕಲಾಲೋಕ ಮಳಿಗೆ ಸ್ಥಾಪಿಸಲಾಗಿದೆ. ಸಂಸ್ಥೆಯ ಅಧ್ಯಕ್ಷ ಸಿ ಎಸ್ ನಾಡಗೌಡ ಕೂಡ ಸಂಸ್ಥೆಯ ಏಳ್ಗೆಗೆ ಶ್ರಮಿಸುತ್ತಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ ಹೇಳಿದರು.
ಇದನ್ನೂ ಓದಿ: ವಿಜಯಪುರ ನಗರಕ್ಕೆ ₹52 ಕೋಟಿ ವೆಚ್ಚದಲ್ಲಿ ಹೊಸ ಕೊಳವೆ ಮಾರ್ಗ; ಎಂ.ಬಿ. ಪಾಟೀಲ