ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಕ್ಕೆ ಕೊಟ್ಟಿದ್ದ ₹70 ಲಕ್ಷ ವಿದ್ಯುತ್ ಬಿಲ್ ಮನ್ನಾ ಮಾಡಿದ ಸರ್ಕಾರ!
ಸಿದ್ಧಗಂಗಾ ಮಠಕ್ಕೆ ನೀಡಲಾಗಿದ್ದ 70.31 ಲಕ್ಷ ರೂ. ನೀರಾವರಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಘೋಷಿಸಿದ್ದಾರೆ. ಮಠವು ಕೆಐಎಡಿಬಿ ಪೂರೈಸುವ ನೀರನ್ನು ಬಳಸಿಕೊಂಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿ/ತುಮಕೂರು (ಡಿ.19): ವಿಶ್ವ ವಿಖ್ಯಾತ ಹಾಗೂ ತ್ರಿವಿಧ ದಾಸೋಹಿ ಸಿದ್ದಗಂಗಾ ಮಠಕ್ಕೆ ರಾಜ್ಯ ಸರ್ಕಾರದಿಂದ ನೀರಾವರಿ ವಿದ್ಯುತ್ ಬಿಲ್ 70.31 ಲಕ್ಷ ರೂ. ನೀಡುವಂತೆ ನೊಟೀಸ್ ಜಾರಿ ಮಾಡಲಾಗಿತ್ತು. ಇದೀಗ ಮಠಕ್ಕೆ ವಿದ್ಯುತ್ ಬಿಲ್ ಪಾವತಿಗೆ ಪತ್ರ ನೀಡಿದ್ದು ತಪ್ಪಾಗಿದೆ. ಮಠಕ್ಕೆ ನೀರು ಬಳಸಿದ್ದರೂ ತಪ್ಪೇನಿಲ್ಲ, ಇನ್ನು ಮುಂದೆಯೂ ಮಠಕ್ಕೆ ನೀರನ್ನು ಬಳಕೆ ಮಾಡಬಹುದು. ಈಗ ಬಂದಿರುವ ನೊಟೀಸಿನ ಹಣವನ್ನು ಸರ್ಕಾರದಿಂದ ಮನ್ನಾ ಮಾಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.
ಈ ಕುರಿತು ಬೆಳಗಾವಿಯ ಸುವರ್ಣ ಸೌಧದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂ.ಬಿ. ಪಾಟೀಲ ಅವರು, ತುಮಕೂರಿನ ಸಿದ್ಧಗಂಗಾ ಮಠವು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಪೂರೈಸುವ ನೀರನ್ನು ಬಳಸಿಕೊಂಡಿದ್ದರೆ ತಪ್ಪೇನೂ ಇಲ್ಲ. ಇದರ ಬಾಬ್ತು ಏನೇ ಇದ್ದರೂ ಅದನ್ನು ಮನ್ನಾ ಮಾಡಲಾಗುವುದು. ಈ ಸಂಬಂಧ ಈಗಾಗಲೇ ಕೆಐಎಡಿಬಿ ಸಿಇಒ ಮತ್ತು ಮುಖ್ಯ ಎಂಜಿನಿಯರ್ ಜತೆ ಮಾತನಾಡಲಾಗಿದೆ ಎಂದು ಹೇಳಿದರು.
ಸಿದ್ಧಗಂಗಾ ಮಠವು ಪ್ರತಿದಿನವೂ 10 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಅನ್ನ ದಾಸೋಹ ಶಿಕ್ಷಣ ನೀಡುತ್ತಾ ಬಂದಿದೆ. ಸರಕಾರ ಕೂಡ ಇದನ್ನು ಸಿಎಸ್ಆರ್ ರೀತಿಯಲ್ಲಿ ತನ್ನ ಸಾಮಾಜಿಕ ಜವಾಬ್ದಾರಿ ಎಂದು ಭಾವಿಸುತ್ತದೆ. ಮಠಕ್ಕೆ ನೋಟಿಸ್ ಕೊಟ್ಟಿದ್ದರೆ ಅದು ತಪ್ಪು. ಸಿದ್ಧಗಂಗಾ ಮಠವು ವಿಶ್ವದಲ್ಲೇ ಶ್ರೇಷ್ಠವಾದ ಮಠವಾಗಿದೆ. ಅಲ್ಲಿ ಜಾತ್ಯತೀತವಾಗಿ ಶಿಕ್ಷಣ ಕೊಡಲಾಗುತ್ತಿದೆ. ಮುಂದಿನ ದಿನಗಳಲ್ಲೂ ನೀರನ್ನು ಬಳಸಿಕೊಳ್ಳಲು ಮಠಕ್ಕೆ ಅನುಮತಿ ಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಭಿಯಂತರ ಅವರಿಂದ ಸಿದ್ದಗಂಗಾ ಮಠಕ್ಕೆ 70,31,438 ರೂ. ವಿದ್ಯುತ್ ಬಿಲ್ ಪಾವತಿಸುವಂತೆ ನೋಟೀಸ್ ನೀಡಲಾಗಿತ್ತು. ಅದರಲ್ಲಿ ಮಂಡಳಿಯ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿ ಇಲ್ಲದಿರುವುದರಿಂದ ಈ ವಿದ್ಯುತ್ ಬಿಲ್ ಅನ್ನು ನೀವು ಭರಿಸಲು ಕೋರಲಾಗಿದೆ ಎಂದು ಉಲ್ಲೇಖ ಮಾಡಲಾಗಿತ್ತು. ಈ ಪತ್ರವು ಕಳೆದ ಏಪ್ರಿಲ್ 6 ರಂದು ಕೆಐಎಡಿಬಿಯಿಂದ ಸಿದ್ದಗಂಗಾ ಮಠಕ್ಕೆ ಬಂದಿತ್ತು. ಆದರೆ, ಏಪ್ರಿಲ್ 15 ರಂದು ಕೆಐಎಡಿಬಿಗೆ ಸಿದ್ದಗಂಗಾ ಮಠದಿಂದ ಮರು ಪತ್ರ ರವಾನೆ ಮಾಡಲಾಗಿತ್ತು.
ಸಿದ್ದಗಂಗಾ ಮಠದ ಸ್ವಾಮೀಜಿ ಅವರು ಬರೆದ ಮರು ಪತ್ರ ಬರೆದು 8 ತಿಂಗಳಾದರೂ ಕೆಐಎಡಿಬಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ, ಪುನಃ ಕೆಐಎಡಿಬಿ ಅಧಿಕಾರಿಗಳು ಮೌಖಿಕವಾಗಿ ಬಿಲ್ ಕಟ್ಟುವಂತೆ ಮಠದ ಆಡಳಿತ ಮಂಡಳಿಯವರಿಗೆ ಸೂಚಿಸುತ್ತಿದ್ದರು.
ಸಿದ್ದಗಂಗಾ ಮಠದ ಸನಿಹದಲ್ಲೇ ಇರುವ ದೇವರಾಯಪಟ್ಟಣ ಕೆರೆಗೆ, ಕೆಐಎಡಿಬಿ ಪೈಪ್ ಲೈನ್ ಮೂಲಕ ಹೊನ್ನೆನಹಳ್ಳಿಯಿಂದ ಪ್ರಾಯೋಗಿಕವಾಗಿ ನೀರು ಹರಿಸಿದೆ. ಈ ಯೋಜನೆ ಪರಿಪೂರ್ಣವಾಗಿ ಜಾರಿಯಾದರೆ ಸಿದ್ದಗಂಗಾ ಮಠ ಸೇರಿದಂತೆ ದೇವರಾಯಪಟ್ಟಣ, ಮಾದನಾಯಕನ ಪಾಳ್ಯ, ಕುಂದೂರು ಗ್ರಾಮಕ್ಕೆ ನೀರು ಪೂರೈಕೆ ಆಗಲಿದೆ. ಇಲ್ಲಿವರೆಗೆ ಪ್ರಾಯೋಗಿಕವಾಗಿ ಅಷ್ಟೇ ನೀರು ಹರಿಸಲಾಗಿದೆ. ಈ ಗ್ರಾಮಗಳಿಗೆ ವಿತರಣೆ ಆಗುತ್ತಿಲ್ಲ. ಇದಕ್ಕೆ ವೆಚ್ಚವಾದ ವಿದ್ಯುತ್ ಬಿಲ್ ಅನ್ನು ಸಿದ್ದಗಂಗಾ ಮಠ ಪಾವತಿಸಬೇಕು ಎಂದು ಕೆಐಎಡಿಬಿ ಬರೆದಿರುವ ಪತ್ರ ಈಗ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಈ ವಿವಾದಕ್ಕೆ ಸ್ವತಃ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರ ಅಂತ್ಯ ಹಾಡಿದ್ದಾರೆ.
ಇದನ್ನೂ ಓದಿ: ಸುವರ್ಣ ಸೌಧದೊಳಗೆ ನುಗ್ಗಿ ಸಿ.ಟಿ. ರವಿ ಅರೆಸ್ಟ್ ಮಾಡಿ, ಎತ್ಹಾಕೊಂಡು ಹೋದ ಪೊಲೀಸರು!