Asianet Suvarna News Asianet Suvarna News

ಸಾಯಿ ಮಿನರಲ್ಸ್‌ ಕೇಸಲ್ಲಿ ನನ್ನ ಸಹಿ ಫೋರ್ಜರಿ: ಎಚ್‌.ಡಿ.ಕುಮಾರಸ್ವಾಮಿ

ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ ಮತ್ತು ಅವರು ಗಣಿಗಾರಿಕೆಯನ್ನೂ ಮಾಡಿಲ್ಲ. ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿರುವಾಗ ಎಸ್ಐಟಿ ರಾಜ್ಯಪಾಲರಿಂದ ಅಭಿಯೋಜನೆಗೆ ಹೇಗೆ ಅನುಮತಿ ಕೋರುತ್ತದೆ? ಎಂದು ಕಿಡಿಕಾರಿದ ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ 
 

My signature is forgery in Sai Minerals case says union minister hd kumaraswamy grg
Author
First Published Aug 22, 2024, 5:30 AM IST | Last Updated Aug 22, 2024, 5:30 AM IST

ಬೆಂಗಳೂರು(ಆ.22): ರಾಜ್ಯ ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ. ನನ್ನ ಸಹಿ ಇಲ್ಲದ, ಫೋರ್ಜರಿ ಸಹಿಯ ಪ್ರಕರಣವನ್ನಿಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬುಧವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧ ರಾಜ್ಯಪಾಲರಿಗೆ ಅಭಿಯೋಜನೆಗಾಗಿ ಎಸ್‌ಐಟಿ ಸಲ್ಲಿಸಿರುವ ಮನವಿ ಮತ್ತು ಕಾಂಗ್ರೆಸ್‌ ಮಾಡಿರುವ ಆರೋಪಗಳಿಗೆ ತಿರುಗೇಟು ನೀಡಿದರು. ಸಾಯಿ ವೆಂಕಟೇಶ್ವರ ಮಿನರಲ್ಸ್ ಕಂಪನಿಗೆ ಸೂಜಿ ಮೊನೆಯಷ್ಟು ಜಾಗವನ್ನೂ ನೀಡಿಲ್ಲ ಮತ್ತು ಅವರು ಗಣಿಗಾರಿಕೆಯನ್ನೂ ಮಾಡಿಲ್ಲ. ರಾಜ್ಯದ ಬೊಕ್ಕಸಕ್ಕೆ ನಯಾಪೈಸೆ ನಷ್ಟವೂ ಆಗಿಲ್ಲ. ವಿಷಯ ಹೀಗಿರುವಾಗ ಎಸ್ಐಟಿ ರಾಜ್ಯಪಾಲರಿಂದ ಅಭಿಯೋಜನೆಗೆ ಹೇಗೆ ಅನುಮತಿ ಕೋರುತ್ತದೆ? ಎಂದು ಕಿಡಿಕಾರಿದರು.

ಚನ್ನಪಟ್ಟಣದಲ್ಲಿ ಈ ಸಲ ಡಿಕೆಶಿ ಧ್ವಜಾರೋಹಣ: ಎಚ್‌ಡಿಕೆಗೆ ಟಕ್ಕರ್ ಕೊಡುವ ತಂತ್ರ..!

ರಾಜ್ಯ ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ಹೂಡಿರುವ ಷಡ್ಯಂತ್ರಕ್ಕೆ ಹೆದರಿ ಓಡುವ ಜಾಯಮಾನ ನನ್ನದಲ್ಲ. ನಾನು ಕೂಡ ಸಾಯಿ ವೆಂಕಟೇಶ್ವರ ಮಿನರಲ್ಸ್ ವಿಚಾರದಲ್ಲಿ ಕಾನೂನಾತ್ಮಕವಾಗಿಯೇ ಹೋರಾಟ ಮಾಡುತ್ತೇನೆ. ಇಂತಹ ಪರಿಸ್ಥಿತಿಗಳಲ್ಲಿ ಕಾನೂನು ಮೊರೆ ಹೋಗಲೇಬೇಕಿದ್ದು, ನೆಲದ ಕಾನೂನಿಗೆ ತಲೆಬಾಗಲೇಬೇಕು. ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ಈಗ ಎಚ್ಚೆತ್ತುಕೊಂಡಿದೆ. ನಾನು ಕೇಂದ್ರ ಸಚಿವನಾಗಿರುವುದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಲೋಕಾಯುಕ್ತ ವಿಶೇಷ ತನಿಖಾ ತಂಡಕ್ಕೆ ತನಿಖೆ ಮಾಡಲು ಎಷ್ಟು ದಿನ ಬೇಕು? 2014ರಲ್ಲಿ ನಾನು ನ್ಯಾಯಾಲಯಕ್ಕೆ ಹೋಗಿದ್ದೆ. ಇವರಿಗೆ ತನಿಖೆ ಮಾಡಲು ಇಷ್ಟು ದಿನ ಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಐಟಿ ಮನವಿಯನ್ನು ರಾಜ್ಯಪಾಲರು ಮರುಪರಿಶೀಲಿಸಲು ಕಳಿಸಿದ್ದಾರೆ. ಸಾಯಿ ವೆಂಕಟೇಶ್ವರ ದಾಖಲೆಯಲ್ಲಿರುವುದು ನನ್ನ ಸಹಿಯೇ ಅಲ್ಲ ಮತ್ತು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಮೋಸ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ ಮತ್ತು ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಬಹುದು ಎಂದು ಸವಾಲು ಹಾಕಿದರು.

ಸಾಯಿ ವೆಂಕಟೇಶ್ವರ ಕಡತಕ್ಕೆ ಸಹಿ ಹಾಕಿದ್ದೇನೆ ಎಂಬುದಾಗಿ ಯಾರೋ ಹೇಳಿಕೊಂಡು ಓಡಾಡುತ್ತಿದ್ದಾರೆ. ನಾನು ಸಹಿ ಹಾಕಿದ್ದು ಯಾವುದು ಅಂತ ತನಿಖೆ ಮಾಡಲಾಗಿದೆಯಾ? ಎಸ್‌ಐಟಿ ಏನಾದರೂ ತನಿಖೆ ಮಾಡಿದೆಯಾ? ಅಧಿಕಾರಿಯೊಬ್ಬನ ಮಗನ ಬ್ಯಾಂಕ್ ಖಾತೆಗೆ 20 ಲಕ್ಷ ರು. ಹೋಗಿದ್ದನ್ನು ಪತ್ತೆ ಹಚ್ಚಿದ್ದು ಎಸ್‌ಐಟಿಯಾಗಲಿ, ಪೊಲೀಸರಾಗಲಿ ಅಲ್ಲ. ನಾನು ಅದನ್ನು ಪತ್ತೆ ಹಚ್ಚಿರುವುದು ಎಂದರು.

Latest Videos
Follow Us:
Download App:
  • android
  • ios