ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು(ಜ.01): ರಾಜ್ಯದಲ್ಲೂ ಬ್ರಿಟನ್‌ ರೂಪಾಂತರಿ ಸೋಂಕು ಹಬ್ಬಿರಬಹುದಾದ ಭೀತಿಯಿಂದ ಡಿ. 21ರ ನಂತರ ಸೋಂಕಿತರ ಪತ್ತೆಗೆ ಸರ್ಕಾರ ತಡಬಡಾಯಿಸುತ್ತಿದೆ. ಆದರೆ, ಇದಕ್ಕೂ ಮೊದಲೇ ಸೋಂಕು ರಾಜ್ಯದಲ್ಲಿ ವ್ಯಾಪಿಸಿರುವ ಆಶಂಕೆಯನ್ನು ಇದೀಗ ತಜ್ಞರು ವ್ಯಕ್ತಪಡಿಸಿದ್ದು, ಆತಂಕ ಮೂಡಿಸಿದೆ.

ಏಕೆಂದರೆ, ಬ್ರಿಟನ್‌ನಲ್ಲಿ ಸೆಪ್ಟೆಂಬರ್‌ನಲ್ಲೇ ರೂಪಾಂತರಿ ವೈರಸ್‌ ಪತ್ತೆಯಾಗಿತ್ತು. ಡಿಸೆಂಬರ್‌ ಮೊದಲ ವಾರದಲ್ಲಿ ವ್ಯಾಪಕವಾಗಿ ಹಬ್ಬಿತ್ತು. ಇದನ್ನು ಬ್ರಿಟನ್‌ ಸರ್ಕಾರ ಡಿ. 14ರಂದು ಘೋಷಿಸಿತ್ತು. ಸೆಪ್ಟಂಬರ್‌ ನಿಂದ ಡಿಸೆಂಬರ್‌ವರೆಗೆ ರಾಜ್ಯಕ್ಕೆ ಲಕ್ಷಾಂತರ ಮಂದಿ ಬ್ರಿಟನ್‌ ಹಾಗೂ ರಾಜ್ಯದ ನಡುವೆ ಸಂಚರಿಸಿದ್ದಾರೆ. ಈ ಪೈಕಿ ಹಲವು ಸಾವಿರ ಮಂದಿ ಸೋಂಕಿತರಾಗಿರುವ ಸಾಧ್ಯತೆಯಿದೆ. ಅವರು ರಾಜ್ಯಾದ್ಯಂತ ಸಂಚಾರ ನಡೆಸಿ ಸೋಂಕು ಹಬ್ಬಿಸಿರುವ ಸಂಭವವೂ ಇದೆ. ಹೀಗಾಗಿ, ಡಿ. 21ರ ನಂತರ ಬಂದವರನ್ನು ಮಾತ್ರ ಪತ್ತೆ ಹಚ್ಚಿ, ಕ್ವಾರಂಟೈನ್‌ ಮಾಡಿದರೆ ಸಾಕಾಗದು ಎಂದು ಹೇಳುತ್ತಾರೆ ತಜ್ಞರು.

ಭಿನ್ನ ಅನಿಸಿಕೆಯೂ ಉಂಟು:

ಆದರೆ ಬ್ರಿಟನ್‌ ಕೊರೋನಾ ಸೋಂಕು ಹರಡುವಿಕೆ ಬಗ್ಗೆ ಇನ್ನು ಕೆಲವು ತಜ್ಞರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತಜ್ಞರ ಸಮಿತಿಯ ಹಿರಿಯ ಸದಸ್ಯರೊಬ್ಬರ ಪ್ರಕಾರ, ರಾಜ್ಯಕ್ಕೆ ಈ ಮೊದಲು ಬಂದಿರುವವರಲ್ಲಿ ರೂಪಾಂತರಿ ವೈರಸ್‌ ಉಂಟಾಗಿರುವ ಸಾಧ್ಯತೆಗಳು ಹೆಚ್ಚಾಗಿವೆ. ಆದರೂ, ಶೇ.70 ರಷ್ಟುವೇಗವಾಗಿ ಹರಡುವ ಬ್ರಿಟನ್‌ ವೈರಸ್‌ ಬಂದಿದ್ದರೆ ಇಷ್ಟೊತ್ತಿಗೆ ಕೊರೋನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡಬೇಕಿತ್ತು. ಸದ್ಯ ಅಂತಹ ಸ್ಥಿತಿ ನಮ್ಮಲ್ಲಿ ಉಂಟಾಗಿಲ್ಲ. ಜೊತೆಗೆ ನಿತ್ಯ ಸರಾಸರಿ 1 ಸಾವಿರ ಮಂದಿಗೆ ಮಾತ್ರ ಸೋಂಕು ತಗುಲುತ್ತಿದೆ. ಇದು ಸಮಾಧಾನದ ವಿಷಯ.

ಪೇಜಾವರ ಶ್ರೀಗಳಿಗೆ ' ವೈ ' ಶ್ರೇಣಿ ಭದ್ರತೆ

ತಜ್ಞರ ಸಮಿತಿ ಮತ್ತೊಬ್ಬ ಸದಸ್ಯರ ಪ್ರಕಾರ, ಕೊರೋನಾ ಪ್ರಕರಣಗಳು ಹೆಚ್ಚಾಗಿ ಹರಡಿಲ್ಲ ಎಂಬ ಕಾರಣಕ್ಕೆ ರೂಪಾಂತರಿ ಕೊರೋನಾ ಕಾಲಿಟ್ಟಿಲ್ಲ ಎಂದು ಹೇಳಲಾಗದು. ಏಕೆಂದರೆ ಸೆರೊ ಸರ್ವೆ ಪ್ರಕಾರ ಈಗಾಗಲೇ ರಾಜ್ಯದ ಶೇ.50 ರಷ್ಟುಮಂದಿಗೆ ಕೊರೋನಾ ಸೋಂಕು ಉಂಟಾಗಿರುವ ಸಾಧ್ಯತೆ ಇದೆ. ಇವರಲ್ಲಿನ ಆ್ಯಂಟಿಬಾಡೀಸ್‌ನಿಂದಾಗಿ ಸೋಂಕು ಪ್ರಮಾಣ ಹೆಚ್ಚಾಗದೆ ಇರಬಹುದು. ಜೊತೆಗೆ ನಮ್ಮ ಜೀವನಶೈಲಿ, ವಾತಾವರಣ ಎಲ್ಲವೂ ಸಹ ಹೊಸ ಪ್ರಬೇಧದ ತೀವ್ರತೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ.

ಸೋಂಕಿತರ ಜೆನೆಟಿಕ್‌ ಸೀಕ್ವೆನ್ಸ್‌ ನಡೆಸಿ:

ಕಳೆದ ಮೂರು ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಪ್ರಯಾಣಿಕರ ಸಂಖ್ಯೆಯನ್ನು ಕೇಂದ್ರದ ನೆರವಿನಿಂದ ಪಡೆದು ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಬೇಕು. ಪಾಸಿಟಿವ್‌ ಬಂದವರಿಗೆ ಜೆನೆಟಿಕ್‌ ಸೀಕ್ವೆನ್ಸ್‌ ಪರೀಕ್ಷೆ ನಡೆಸಬೇಕು. ಮೊದಲು ಕಳೆದ ಒಂದು ತಿಂಗಳ ಅವಧಿ ಬಳಿಕ ಎರಡು ತಿಂಗಳ ಅವಧಿಯ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿ. ಇನ್ನು ಯಾವ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗಿ ವರದಿಯಾಗುತ್ತಿದೆಯೋ ಅಲ್ಲೂ ಜೆನೆಟಿಕ್‌ ಸೀಕ್ವೆನ್ಸ್‌ ಪರೀಕ್ಷೆ ನಡೆಸಿ ಎಂದು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿಯೇ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಕನ್ನಡಪ್ರಭಕ್ಕೆ ಉನ್ನತ ಮೂಲಗಳು ತಿಳಿಸಿವೆ.

ಜನವರಿ ಅಂತ್ಯಕ್ಕೆ ಸೋಂಕು ಹೆಚ್ಚಳ?

ಕೊರೋನಾ ಸೋಂಕಿನ ವಿರುದ್ಧದ ಪ್ರತಿಕಾಯ (ಆ್ಯಂಟಿಬಾಡೀಸ್‌) ರೂಪಾಂತರಿ ವಿರುದ್ಧವೂ ಕೆಲಸ ಮಾಡುತ್ತವೆ. ಈಗಾಗಲೇ ಸೋಂಕಿನಿಂದ ಗುಣ ಆದವರಲ್ಲಿನ ಪ್ರತಿಕಾಯಗಳು ಸದ್ಯದಲ್ಲೇ ಕ್ಷೀಣಿಸಬಹುದು. ಹೀಗಾಗಿ ರೂಪಾಂತರಿ ರಾಜ್ಯದಲ್ಲಿ ಹರಡಿರುವುದು ತಜ್ಞ ಹೇಳಿಕೆಯಂತೆ ಸತ್ಯವಾದರೆ ಜನವರಿ ಅಂತ್ಯದ ವೇಳೆಗೆ ವ್ಯಾಪಕವಾಗುವ ಸಾಧ್ಯತೆಯಿದೆ.