Asianet Suvarna News Asianet Suvarna News

'ಜ್ಞಾನವ್ಯಾಪಿ ಮಸೀದಿ ಅತಿಕ್ರಮಿಸಲಾಗಿದೆ' ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್ ಪ್ರತಿಭಟನೆ

ಜ್ಞಾನವ್ಯಾಪಿ ಮಸೀದಿಯನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂಬ ವಿಷಯದ ಜೊತೆಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Muslim Jamaat protest in Madikeri against central government rav
Author
First Published Feb 15, 2024, 8:02 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ಫೆ.15) : ಜ್ಞಾನವ್ಯಾಪಿ ಮಸೀದಿಯನ್ನು ಅತಿಕ್ರಮಣ ಮಾಡಲಾಗುತ್ತಿದೆ ಎಂಬ ವಿಷಯದ ಜೊತೆಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಡಿಕೇರಿಯಲ್ಲಿ ಮುಸ್ಲಿಂ ಜಮಾಅತ್ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

 ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲಾ ವಕ್ಪ್ ಆಸ್ತಿಗಳನ್ನು ಸರ್ಕಾರ ಸಂರಕ್ಷಿಸಬೇಕು, places of worship act 1991 ಪಾಲನೆ ಮಾಡುವುದು. ಮುಸಲ್ಮಾನರ 2ಬಿ ಮೀಸಲಾತಿಯನ್ನು ಶೇಕಡ 8 ಕ್ಕೆ ಏರಿಸಿ ಜಾರಿಗೆ ತರುವುದು. ಬಜೆಟ್ ಅಧಿವೇಶನದಲ್ಲಿ ಮುಸಲ್ಮಾನರಿಗೆ ರೂ.10 ಸಾವಿರ ಕೋಟಿ ಮೀಸಲಿಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು.

 

ಮುಸ್ಲಿಮರಿಗೂ ತಿರುಪತಿ ದರ್ಶನಕ್ಕೆ ಅವಕಾಶದ ಬಗ್ಗೆ ಟಿಟಿಡಿ ಪರಿಶೀಲನೆ

 ಅಂಕಣಕಾರ ಹಾಗೂ ಸಾಮಾಜಿಕ ಹೋರಾಟಗಾರರಾದ ಶಿವ ಸುಂದರ್ ಅವರು ಪ್ತತಿಭಟನಾರರನ್ನು ಉದ್ದೇಶಿಸಿ ಮಾತನಾಡಿ ಈ ಹೋರಾಟ ಕೇವಲ ಮುಸ್ಲಿಂ ಜಮಾಅತ್ ಒಕ್ಕೂಟಗಳ ಹೋರಾಟ ಅಲ್ಲ. ಬದಲಾಗಿ ಇದು ಸಕಲ ಜನರ ಭಾರತೀಯರ ಹೋರಾಟ ಆಗಬೇಕಾಗಿದೆ. ಇಂದು ಮಸೀದಿಯನ್ನು ಹೊಡೆಯುವ ಮೂಲಕ ಭಾರತೀಯರನ್ನು ಹೊಡೆದಾಳುವ ನೀತಿಯನ್ನು ಅನುಸರಿಸಲಾಗುತ್ತಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತ ಕಂಡಿದ್ದ ಕನಸ್ಸನ್ನು ನುಚ್ಚು ನೂರು ಮಾಡಲಾಗುತ್ತಿದೆ. ಭಾರತವನ್ನು ಹೊಡೆಯುವುದಕ್ಕೆ ಬಿಜೆಪಿ ಹಲವು ಕ್ರಮಗಳನ್ನು ಅನುಸರಿಸುತ್ತಿದ್ದು ಅದರಲ್ಲಿ ಮಸೀದಿಗಳನ್ನು ಹೊಡೆಯುವುದು ಒಂದು ಭಾಗ ಎಂದರು. ಇಲ್ಲಿ ನಡೆಯುತ್ತಿರುವುದು ಧರ್ಮದ ವಿಷಯವೇ ಅಲ್ಲ, ದೇವಸ್ಥಾನಗಳನ್ನು ಕಟ್ಟುವುದು ಮೇಲ್ನೋಟಕ್ಕೆ ಧರ್ಮದ ವಿಷಯ ಅನ್ನಿಸಬಹುದು. ಆದರೆ ಮಸೀದಿ, ಜೈನ ಬಸದಿ, ಬೌದ್ಧ ಮಂದಿರಗಳನ್ನು ಕೆಡವಿ ಹಿಂದೂ ಧರ್ಮದ ಒಂದು ಸಮುದಾಯ ಭವ್ಯ ಮಂದಿರವನ್ನು ಕಟ್ಟುವುದು ಸರಿಯಲ್ಲ. ಇದನ್ನು ಯಾವುದೇ ಬಹುತೇಕ ಹಿಂದೂಗಳು ಒಪ್ಪಿಕೊಳ್ಳುವುದಿಲ್ಲ ಎಂದಿದ್ದಾರೆ. 

ರಾಮ ಮಂದಿರ ಉದ್ಘಾಟನೆ ವೇಳೆ ಪ್ರಧಾನಿ ಮೋದಿಯವರು ರಾಮನೇ ರಾಷ್ಟ್ರ, ದೇವನೇ ದೇಶ, ಇದು ದೇಶದ 140 ಕೋಟಿ ಜನರು ಅನುಸರಿಸಬೇಕು ಎಂದಿದ್ದಾರೆ. ಆದೇಶ ನಮ್ಮ ಸಂವಿಧಾನ ಹಾಗೆ ಹೇಳುವುದಿಲ್ಲ. ಜನರು ರಾಷ್ಟ್ರ ಎಂದು ನಮ್ಮ ಸಂಮಿಧಾನ ಹೇಳುತ್ತದೆ. ದೇವನೇ ದೇಶವಲ್ಲ ಸಂವಿಧಾನವೇ ದೇಶ ಎನ್ನುತ್ತದೆ. ಆದರೆ ಒಂದು ದೇವರನ್ನು ಇಡೀ ದೇಶದ ಎಲ್ಲಾ ಧರ್ಮದ ಎಲ್ಲಾ ಜನರ ಮೇಲೆ ಹೇರಲು ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜ್ಞಾನವಾಪಿಯಲ್ಲಿ ಪೂಜೆ ಖಂಡಿಸಿ ಮುಸ್ಲಿಮರಿಂದ ವಾರಾಣಸಿ ಬಂದ್‌

ರಾಮಮಂದಿರ ಟ್ರಸ್ಟ್ ಕಾರ್ಯದರ್ಶಿ ಸುದ್ದಿಗೋಷ್ಠಿ ನಡೆಸಿ ಇದು ಹಿಂದೂ ಧರ್ಮದ ಕೇವಲ ರಮಾನಂದ ಸಮುದಾಯದ ದೇವಾಲಯ ಅಂತ ಹೇಳುತ್ತಾರೆ. ಇನ್ನೊಂದುಕಡೆ ರಾಮ 140 ಕೋಟಿ ಜನರಿಗೆ ಸೇರಿದ್ದು ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಅಂದರೆ ನಮ್ಮಲ್ಲಿ ಸಹಜವಾಗಿ ಇರುವ ಹಿಂದೂ ಧರ್ಮದ ನಂಬಿಕೆಗಳನ್ನು ಬಳಸಿಕೊಂಡು ರಕ್ತ ರಾಜಕಾರಣ ಮಾಡಲಾಗುತ್ತಿದೆ. ಮತ್ತು ಇಡೀ ದೇಶವನ್ನು ಸಂವಿಧಾನಕ್ಕೆ ವಿರುದ್ಧವಾಗಿ ಒಂದು ಸಮುದಾಯ ಹಿಡಿತಕ್ಕೆ ಕೊಟ್ಟು ಉಳಿದವರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರವಿದೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಶಿವಸುಂದರ್ ಅವರು ಹೇಳಿದರು. 

ಪ್ರತಿಭಟನೆಯಲ್ಲಿ ಒಕ್ಕೂಟದ ಅಧ್ಯಕ್ಷ ನಝೀರ್ ಅಹಮದ್, ಪ್ರಧಾನ ಕಾರ್ಯದರ್ಶಿ  ಅಮೀನ್ ಮೊಹ್ಸಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಬಳಿಕ ಮನವಿ ಪತ್ರವನ್ನು ಸಲ್ಲಿಸಿದರು.

Follow Us:
Download App:
  • android
  • ios