Muruga Sree case: ಜೈಲು ಸೇರಿದ ಸೌಭಾಗ್ಯ ಬಗ್ಗೆ ಒಡನಾಡಿ ಸ್ಟ್ಯಾನ್ಲಿ ಬರೆದ ಪತ್ರ ವೈರಲ್

ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲೆ ಪೋಕ್ದೋ ಪ್ರಕರಣ ದಾಖಲಿಸಲು ಸಂಚು ರೂಪಿಸಿದ ಆರೋಪ ಹೊತ್ತು ಸೌಭಾಗ್ಯ ಬಸವರಾಜನ್ ಜೈಲಿನಲ್ಲಿದ್ದಾರೆ. ಆದರೆ, ಈ ಸೌಭಾಗ್ಯ ಅವರ ಬಗ್ಗೆ ಮೈಸೂರು ಒಡನಾಡಿ ಸಂಸ್ಥೆ ಸ್ಟಾನ್ಲಿ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Muruga Shri case Saubhagya joins in Jail Odanadi Stanley written letter viral sat

ಚಿತ್ರದುರ್ಗ (ಡಿ.20): ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಮೇಲೆ ಪೋಕ್ದೋ ಪ್ರಕರಣ ದಾಖಲಿಸಲು ಸಂಚು ರೂಪಿಸಿದ ಆರೋಪ ಹೊತ್ತು ಸೌಭಾಗ್ಯ ಬಸವರಾಜನ್ ಜೈಲಿನಲ್ಲಿದ್ದಾರೆ. ಆದರೆ, ಈ ಸೌಭಾಗ್ಯ ಅವರ ಬಗ್ಗೆ ಮೈಸೂರು ಒಡನಾಡಿ ಸಂಸ್ಥೆ ಸ್ಟಾನ್ಲಿ ಅವರು ಬರೆದಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೌಭಾಗ್ಯ ಅವರ ಬಗ್ಗೆ ಸ್ಟಾನ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಧೀರವನಿತೆ ಸೌಭಾಗ್ಯ ಬಸವರಾಜನ್‌ ಎಂದು ತಲೆಬರಹ ಕೊಟ್ಟಿದ್ದಾರೆ. ಇನ್ನು ಅವರು ಬರೆದುಕೊಂಡಿರುವ ಲೇಖನದ ಸಂಪೂರ್ಣ ವಿವರ ಇಲ್ಲಿದೆ ನೋಡಿ.. 

ಧೀರ ವನಿತೆ ಸೌಭಾಗ್ಯ ಬಸವರಾಜನ್....

ಮುರುಘಾ ಮಠದ ಲೈಂಗಿಕ ಹಗರಣ ಬಯಲಿಗೆ ಬಂದು ನಾಲ್ಕು ತಿಂಗಳಾಗುತ್ತಾ ಬಂತು. ಬಲಿಷ್ಟ ಶಿಶು ಪೀಡಕರ ವಿರುದ್ಧ, ಮಾನವೀಯ ಮನಸ್ಸುಗಳು ಸಮಷ್ಠಿ ಪ್ರಜ್ಞೆಯೊಡನೆ ನಡೆಸಿದ ಸತತ ನೂರಾ ಇಪ್ಪತ್ತು ಹಗಲು ರಾತ್ರಿಗಳ ಸಾತ್ವಿಕ  ಹೋರಾಟವಿದು. ನೈಜ ಸಂಘ - ಸಂಸ್ಥೆ- ಸಂಘಟನೆಗಳ ಹೋರಾಟಗಾರರು,  ಸನ್ಮಾರ್ಗದ ಧಾರ್ಮಿಕರು, ಪತ್ರಕರ್ತರು, ಶರಣರು,  ರಾಜಕಾರಣಿಗಳು,ವಿದ್ಯಾರ್ಥಿಗಳು, ಪ್ರಾದ್ಯಾಪಕರು, ವಕೀಲರು,  ಕಲಾವಿದರು, ಲೇಖಕರು, ಆಬಾಲವೃದ್ಧರಾದಿಯಾಗಿ ಈ ಹೋರಾಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ತಮ್ಮೆಲ್ಲಾ ಬದ್ಧತೆ, ಕಿಚ್ಚು, ರೋಷದೊಡನೆ  ಮಕ್ಕಳನ್ನು, ಧರ್ಮವನ್ನುಕಿಸುವ, ಸತ್ಯವನ್ನು ಪ್ರತಿಪಾದಿಸುವ, ಶೋಷಣೆಯನ್ನು ಹತ್ತಿಕ್ಕುವ ಪ್ರಖರವಾದ ಹಂಬಲದೊಡನೆ ಕಾಣಿಸಿಕೊಂಡರು. ಇವರೆಲ್ಲರ ನಡುವೆ ಚಿತ್ರದುರ್ಗದ ಸೌಭಾಗ್ಯ ಬಸವರಾಜನ್ ಹಾಗೂ ಅವರು ಕಾಪಾಡಿ ಕರೆ ತಂದಿದ್ದ ಬಾಲೆಯರು ನನ್ನನ್ನು  ಬಹುವಾಗಿ ಕಾಡುವ ಧೀರೆಯರೆಂದರೆ ತಪ್ಪಲ್ಲ. ಪಂದ್ಯದಲ್ಲಿ ಗೋಲು ಹೊಡೆಯುವವರು ಕಾಣಿಸಿಕೊಳ್ಳುತ್ತಾರೆ. ಆದರೆ ಚೆಂಡನ್ನು ಪಾಸ್ ನೀಡಿದ, ಎದುರಾಳಿ ಹೊಡೆವ ಚೆಂಡನ್ನು ತಡೆಯುವ ಗೋಲ್ ಕೀಪರ್‌ನನ್ನು ನೆನೆಯದಿದ್ದರೆ ನನ್ನ ಮನಸ್ಸು ನನ್ನನ್ನೇ ಕ್ಷಮಿಸದೇ ಹೋದೀತು.

ಒಡನಾಡಿ ಏನಾದರೂ ಈ ಮಕ್ಕಳ ಪರವಾಗಿ ಒಂದು ಚಳುವಳಿಯನ್ನು ರೂಪಿಸಿದ್ದರೆ ಅದಕ್ಕೆ ಕಾರಣ ಸೌಭಾಗ್ಯರವರ ಅಸಾಮಾನ್ಯ ಬದ್ಧತೆ, ಪ್ರಬುದ್ಧತೆ ಹಾಗೂ ಸ್ಪಷ್ಟತೆ. ಇಲ್ಲಿ ಆದ್ಯ ವಂದಿತರು ಅವರೇ ಆಗಿರಬೇಕು.  'ಮಾಡು ಇಲ್ಲವೇ ಮಡಿ' ಎಂಬ ನಿರ್ಧಾರಿತ ಹೆಜ್ಜೆಗೆ ಅವರು ತೋರಿದ ಗಟ್ಟಿತನ ಅಂತಿಂಥದ್ದಲ್ಲ. ಮೂಲಭೂತವಾಗಿ ಅವರೆದೆಯಲ್ಲಿ ಆ  ಕಿಚ್ಚು, ಧೈರ್ಯ, ಛಲ ಇರದಿದ್ದಲ್ಲಿ ಇಲ್ಲಿಯವರೆಗೆ ಅವರು ಖಂಡಿತಾ ಹೋರಾಟದಲ್ಲಿ ಉಳಿಯುತ್ತಿರಲಿಲ್ಲ . "ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ" ಎಂಬುದನ್ನು ನಡೆಯಲ್ಲಿ ತೋರಿದವರು ಶ್ರೀಮತಿ ಸೌಭಾಗ್ಯ ಬಸವರಾಜನ್ ಅವರಾಗಿದ್ದಾರೆ.

ಸರ್ವ ಸಮಾನತೆಯನ್ನು ಸಾಧಿಸಲು ಹೊರಟಿದ್ದ ಅಣ್ಣ ಬಸವಣ್ಣನವರ ಪ್ರಕಾರ ಸಮಾಜದ ಮೂಲ ಘಟಕವಾದ 'ಶರಣ'ನೆಂಬ ಒಬ್ಬ ವ್ಯಕ್ತಿ ಜಪ, ಸ್ತೋತ್ರ, ಪೂಜೆಗಳಲ್ಲಿ ಕಳೆದು ಹೋಗಬಹುದಾದ ಭಕ್ತನಲ್ಲ. ಒಂದು ಧರ್ಮಕ್ಕೆ, ಅದರ ನಿರ್ದಿಷ್ಟ ಆಚರಣೆಗಳಿಗೆ ಶರಣಾದವನೂ ಅಲ್ಲ. ಬದಲಾಗಿ ಶರಣನೆಂದರೆ ಜವಾಬ್ದಾರಿಯುಳ್ಳ ಸಾಮಾಜಿಕ ಸದಸ್ಯ ಅಥವಾ ಅತ್ಯುತ್ತಮ ನಾಗರಿಕನಾಗಿ  ಲಿಂಗದ ಚೈತನ್ಯವನ್ನು ತನ್ನಲ್ಲಿ ಕಂಡುಕೊಂಡು, ಲಿಂಗ ಸ್ವರೂಪಿಯಾದ ಸಮಾಜಕ್ಕೆ, ಸಮಷ್ಠಿಗೆ ಬದ್ಧನಾದವನು ಎಂದು ಸಾರಿದ್ದರು.  ವಿವಿಧ ಹಿನ್ನೆಲೆಗಳಿಂದ ಬಂದಿದ್ದ ಅಸಂಖ್ಯಾತ ಶರಣರು ಸಂಸಾರಿಗಳಾಗಿದ್ದರೂ ಜಂಜಾಟದಿಂದ ಮುಕ್ತರಾಗಿ ಬದುಕಲು ಸಾಧ್ಯವಾಗಿದ್ದು ಸೌಭಾಗ್ಯ ಬಸವರಾಜನ್ ರಂತೆ ಛಲ ಹೊಂದಿದ್ದರಿಂದಾಗಿಯೇ. ಮಾನವ ಶರಣನಾಗುವ ಹಾದಿಯೇ ಇದು. ಶರಣನ ವ್ಯಕ್ತಿತ್ವ ಪೂರ್ಣವಾಗುವ ಮಾರ್ಗವೂ ಇದೇ. 

'ಅರಿದೊಡೆ ಶರಣ, ಮರೆದೊಡೆ ಮಾನವ'ನೆಂದ ಗುರು ಬಸವಣ್ಣ ಅಂದು ನೋವುಂಡಂತೆ, ತನ್ನನ್ನು 'ಅಮ್ಮಾ' ಎಂದು ಕರೆದ ದಲಿತ ಮಕ್ಕಳ ಪರವಾಗಿ ತನ್ನ ವಿವೇಕ, ವಿವೇಚನೆಯೊಡನೆ ಅಚಲವಾಗಿ ನಿಂತು, ಸಾಮಾಜಿಕ ಹಾಗೂ ಅನುಶಾಸನಬದ್ಧ ನ್ಯಾಯಕ್ಕಾಗಿ ಸರಿಯಾದ ಸೆಲೆಯನ್ನರಸುತ್ತಾ, ನಂಬಿಕೆ ಇಟ್ಟು ಒಡನಾಡಿಯ ಬಾಗಿಲಿಗೆ ಬಂದವರು. ಇಂದು ಧರ್ಮ ಮತ್ತು ಮಠದ ಘನತೆಯನ್ನುಳಿಸಿದ, ನೊಂದ ಬಾಲೆಯರಿಗೆ ಸತ್ಯವನ್ನರುಹಲು ಸತ್ಪ್ರೇರಣೆಯಾದ ಸಲುವಾಗಿ ಸೆರೆಮನೆಗೆ ಸಿಲುಕಿರುವುದು ಧಾರ್ಮಿಕರೂ ಯೋಚಿಸಬೇಕಾದ ಸಂಗತಿ.

ಯಾವುದೇ ಅಸ್ತಿತ್ವವಿರದ  ಸಂತ್ರಸ್ಥ ಮಕ್ಕಳ ಪರವಾಗಿ ನಿಂತ ಸೌಭಾಗ್ಯ ಅವರು ಎದುರು ಹಾಕಿಕೊಳ್ಳಬೇಕಾಗಿ ಬಂದದ್ದು ಸರ್ಕಾರ ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದ ಪ್ರಬಲವಾದ ತನ್ನ ಸಮುದಾಯವನ್ನು. ತಾನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ, 750 ವರ್ಷಗಳ ಗುರು ಪರಂಪರೆ ಹೊಂದಿದ್ದ ಬ್ರಹನ್ಮಠ ಹಾಗೂ ಮಠದ ಮೇಲೆ ಬಲವಾದ ನಂಬಿಕೆ ಹೊಂದಿದ್ದ ಲಕ್ಷಾಂತರ ಭಕ್ತರ ವಿನೀತ ಭಾವನೆಯನ್ನು.  ಜೊತೆಗೆ ಹಣ, ಅಧಿಕಾರ, ಪ್ರಗತಿಪರ ಸಾಕ್ಷರ ಲೋಕವನ್ನು ಗುರಾಣಿ ಮಾಡಿಕೊಂಡಿದ್ದ ಒಬ್ಬ ಚಾಣಕ್ಷಮತಿಯ ಗೋಮುಖ ವ್ಯಾಘ್ರನನ್ನು. ನಮ್ಮಲ್ಲಿ ಬರುವ ಮುನ್ನ ಆಕೆ ತನ್ನ ಆತ್ಮೀಯರೊಂದಿಗೆ ಹೇಳಿಕೊಂಡಿದ್ದರಂತೆ. 'ನೋಡಮ್ಮಾ... ನಾವು ಕಾಲಿಟ್ಟಿರುವುದು ಧರ್ಮಯುದ್ಧದ ರಣರಂಗದೊಳಗೆ.  ಏನು ಬೇಕಾದರೂ ಸಂಭವಿಸಬಹುದು. ಮುಂದಿಟ್ಟ ಹೆಜ್ಜೆ ಹಿಂದೆ ಇಡಬಾರದಷ್ಟೇ!' ಎಂದಿದ್ದರಂತೆ.

ನಮಗೆ ಈಗ ಅನಿಸುತ್ತೆ. ಇರುವುದಾದರೆ ಸೌಭಾಗ್ಯ ಬಸವರಾಜನ್ ಅಂಥವರು  ರಾಜಕಾರಣದಲ್ಲಿ, ಚಳುವಳಿಗಳಲ್ಲಿ, ಧರ್ಮಗಳಲ್ಲಿರಬೇಕೆಂದು. ನಮ್ಮ ಪ್ರಾಮಾಣಿಕತೆಯನ್ನು ಮೆರೆಸುವ ಭರದಲ್ಲಿ, ರಾಜಕಾರಣದಲ್ಲಿದ್ದವರೆಂಬ ಒಂದೇ ಕಾರಣಕ್ಕಾಗಿ ನಾವು ಅವರನ್ನು ಆರಂಭದಲ್ಲಿ ಅನುಮಾನಿಸಿದ್ದುದರ ಬಗ್ಗೆ ಅತೀವ ಮುಜುಗರವಿದೆ. ತಪ್ಪಿತಸ್ಥ ಭಾವನೆ ಹಾಗೂ ವಿಷಾದವಿದೆ. ಬಂದ ದಿನವೇ ತಿಳಿದರಿಯದಿದ್ದ ಅವರನ್ನು ನಮ್ಮ ಸಂಸ್ಥೆಯ ಹೊರಗೆ ಇರಿಸಿದ್ದೆವು. ಬೆದರಿದ ಹರಿಣಗಳಂತಾಗಿ ಆತ್ಮಹತ್ಯೆಗೆ ಶರಣಾಗಲಿಚ್ಚಿಸಿದ್ದ ಮಕ್ಕಳನ್ನು  ಮನವೊಲಿಸಿ, ಕಾಪಾಡಿ, ತಾಯಿಯ ಸ್ಥಾನದಲ್ಲಿ ನಿಂತು ಕರೆ ತಂದಿದ್ದ ಮಹಿಳೆಯನ್ನು ಮಕ್ಕಳ ಕಲ್ಯಾಣ ಸಮಿತಿಯಲ್ಲೂ ಅನಿವಾರ್ಯವಾಗಿ ಹೊರಗಿರಿಸಲಾಗಿತ್ತು. ಛೆ! 

ನೀವು ಏನೇ ಹೇಳಿ.  ರಾಜಕಾರಣಿ ಎಂಬುವುದಾದರೆ ನಿಜಾರ್ಥದಲ್ಲಿ ರಾಜಕಾರಣದ  ಘನತೆ ಎತ್ತಿಹಿಡಿದ  ಮೌಲ್ಯಯುತ ವ್ಯಕ್ತಿಯಾಕೆ.  ಓಟಿಗಾಗಿ ಹಲ್ಲು ಗಿಂಚುವ ಜೊಳ್ಳು ರಾಜಕಾರಣಿಗಳಂತಿದ್ದಿದ್ದರೆ ಒಂದು ಹಂತದ ನಂತರ ರಾಜಿ ಮಾಡಿಕೊಂಡು ಮೋರಿಯ ನೀರಿನಲ್ಲಿ ತೇಲಿ ಹೋಗುತ್ತಿದ್ದರೇನೋ. ಹಾಗಾಗಲಿಲ್ಲ. ಧರ್ಮದ ನೆಲೆಗಟ್ಟಿನಲ್ಲಿ ನೋಡುವುದಾದರೆ ಧಾರ್ಮಿಕರೆಲ್ಲರೂ ಅಹುದಹುದು ಎನ್ನಲೇಬೇಕಾದ,  ಬಸವಮಾರ್ಗಿ ಮತ್ತು ಬಸವ ತತ್ವಾರಾಧಕಿ. ಅಳುವಿನ ಕಡಲಲ್ಲಿ ಮುಳುಗಿದ್ದ ತಳ ವರ್ಗದ ಎಳೆಯ ಬಾಲೆಯರಲ್ಲಿ ತನ್ನ ಕಳೆದು ಹೋದ ಕರುಳ ಬಳ್ಳಿಯನ್ನು ಕಂಡುಕೊಂಡ ವಾತ್ಸಲ್ಯಮಯಿ ತಾಯಿಯಾಕೆ!  ದಿಟ್ಟ ನಿಲುವಿನೊಡನೆ ಹಲವು ದಶಕಗಳಿಂದ ನಡೆದಿದ್ದ ಲೈಂಗಿಕ ಶೋಷಣೆಯ ಹಗರಣವನ್ನು ಬಯಲಿಗೆ ತರುವಲ್ಲಿ ಕೊಂಡಿಯಾಗಿ  ಮಹಿಳಾ ವರ್ಗಕ್ಕೊಂದು ಮಕುಟ ಮಣಿಯಾದವರು ಶ್ರೀಮತಿ ಸೌಭಾಗ್ಯ ಬಸವರಾಜನ್.

ಈ ನಾಲ್ಕು ತಿಂಗಳ ಹೋರಾಟದ ಅವಧಿಯಲ್ಲಿ ಒದಗಿದ ಎಲ್ಲಾ ಸಂದಿಗ್ದತೆಗಳ ಸಂದರ್ಭಗಳಲ್ಲೂ  ಆಕೆಯ ತೂಕದ ವ್ಯಕ್ತಿತ್ವವನ್ನಷ್ಟೇ ನಾನು ನೋಡಿದ್ದೇನೆ. ಷಡ್ಯಂತ್ರಗಾರ್ತಿಯನ್ನಲ್ಲ.  ನಾಡು ಕಂಡ ಅತ್ಯಂತ ಕ್ರೂರ ಹಾಗೂ ಹೀನಾತಿಹೀನ ಶೋಷಣೆಯ ಸ್ವರೂಪವೊಂದನ್ನು ಬಯಲಿಗೆಳೆಯಲು, ಮಕ್ಕಳ ಹಾಗೂ ಮಹಿಳೆಯರ ಘನತೆಯನ್ನು ಉಳಿಸಲು ಅಪಾಯಗಳನ್ನು ಲೆಕ್ಕಿಸದೆ ಬೀದಿಗಿಳಿದು ಬಂದು, ಇಂದು ಕಾನೂನನ್ನು ಎದುರಿಸುತ್ತಿರುವ ವಾತ್ಸಲ್ಯಮಯಿ ವ್ಯಕ್ತಿ ಸೌಭಾಗ್ಯ ಬಸವರಾಜನ್ ರವರನ್ನು ಉತ್ತರ ಕರ್ನಾಟಕದ ಜನ ಮರೆಯಲಾರರು, ಜಾತಿ ಮತ ಪಂಥಪಕ್ಷಗಳ ಗಡಿ ದಾಟಿ ಅವರ ಪರ ನಿಲ್ಲುವರು ಎಂಬ ನಂಬಿಕೆ ನನ್ನದು. ಮರೆಯಲೂಬಾರದು ಎಂಬ ಆಶಯವು ಎಲ್ಲಾ ಮಾನವೀಯ ಮನಸುಗಳದ್ದಾಗಬೇಕಾಗಿದೆ.

                                                                           -------- ಒಡನಾಡಿ ಸ್ಟ್ಯಾನ್ಲಿ----------

Latest Videos
Follow Us:
Download App:
  • android
  • ios