Asianet Suvarna News Asianet Suvarna News

ಜೈಲಿನಿಂದಲೇ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಮುರುಘಾ ಶ್ರೀ ಅರ್ಜಿ

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿದೆ.

muraga swamiji plea seeking permission to sign the cheques high court expressed shock gvd
Author
First Published Sep 30, 2022, 9:23 AM IST

ಬೆಂಗಳೂರು (ಸೆ.30): ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಶುಕ್ರವಾರ (ಸೆ.30) ಪರಿಷ್ಕೃತ ಜ್ಞಾಪನಾ ಪತ್ರ (ಮೆಮೋ) ಸಲ್ಲಿಸುವಂತೆ ಸೂಚಿಸಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, 14 ಲಕ್ಷ, 30 ಲಕ್ಷದ ದೊಡ್ಡ ಮೊತ್ತದ ಚೆಕ್‌ಗಳಲ್ಲಿ ಸೆಲ್ಫ್ ಎಂದು ನಮೂದಿಸಲಾಗಿದೆ. ಇದು ಸರಿ ಕಾಣುತ್ತಿಲ್ಲ. 

ನೌಕರರಿಗೆ ಸಂಬಳ ನೀಡಬೇಕಾದ ಚೆಕ್‌ಗಳನ್ನು ಸೆಲ್ಫ್ ಎಂದು ತೋರಿಸಲಾಗಿದೆ. ಅರ್ಜಿದಾರರ ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲ. ಆದ್ದರಿಂದ ಸಂಪೂರ್ಣ ಮತ್ತು ಸ್ಪಷ್ಟಮಾಹಿತಿಯೊಂದಿಗೆ ಶುಕ್ರವಾರ ಹೊಸದಾಗಿ ಮೆಮೋ ಸಲ್ಲಿಸುವಂತೆ ಸೂಚಿಸಿತು. ಮಠವು ಸುಮಾರು 150 ವಿದ್ಯಾಸಂಸ್ಥೆಯನ್ನು ಹೊಂದಿದ್ದು, ಶಿವಮೂರ್ತಿ ಶರಣರು ಜೈಲಿನಲ್ಲಿರುವುದರಿಂದ ಸುಮಾರು 3,500 ಸಿಬ್ಬಂದಿ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಹಾಕಲು ಅಕ್ಟೋಬರ್‌ 1 ರಿಂದ ಅಕ್ಟೋಬರ್‌ 5ರ ಮಧ್ಯೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮುರುಘಾ ಶರಣರು ಕೋರಿದ್ದಾರೆ.

'ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ'

ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಹಾಗೂ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ದಾಖಲೆಗಳಿಗೆ ಜೈಲಿನಿಂದಲೇ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಶಿವಮೂರ್ತಿ ಶರಣರು ಮಾಡಿದ್ದ ಮನವಿಯನ್ನು ಚಿತ್ರದುರ್ಗ ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಬಿ.ಕೆ. ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಬಸವಕೇಂದ್ರ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ?: ಚಿತ್ರದುರ್ಗದ ಪ್ರತಿಷ್ಠಿತ ಬಸವ ಕೇಂದ್ರ ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ ಮಾಡಲು ಬುಧವಾರ ಇಲ್ಲಿನ ಎಸ್‌.ನಿಜಲಿಂಗಪ್ಪ ಸ್ಮಾರಕದ ಆವರಣದಲ್ಲಿ ನಡೆದ ವೀರಶೈವ ಲಿಂಗಾಯಿತ ಸಮಾಜದ ಸಭೆ ಒಕ್ಕೊರಲಿನ ನಿರ್ಣಯ ಅಂಗೀಕರಿಸಿತು. ಮಾಜಿ ಸಚಿವ ಎಚ್‌.ಏಕಾಂತಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿವಮೂರ್ತಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಹಿನ್ನೆಲೆ ಮುಂದಿನ ಬೆಳವಣಿಗೆ ಕುರಿತು ಕರೆಯಲಾಗಿದ್ದ ಸಭೆ ಪೂರ್ಣ ಪ್ರಮಾಣದಲ್ಲಿ ಶರಣರು ಪೀಠ ತ್ಯಾಗ ಮಾಡಬೇಕು, ನೂತನ ಉತ್ತರಾಧಿಕಾರಿಗಳು ನೇಮಕ ಮಾಡಬೇಕೆಂಬ ಅಂಶವನ್ನು ಪ್ರಧಾನವಾಗಿ ಬಿಂಬಿಸಿತು.

ಸಭೆಯ ಆರಂಭಲ್ಲಿ ದಿಕ್ಸೂಚಿ ಮಾತುಗಳನ್ನಾಡಿದ ಮಾಜಿ ಸಚಿವ ಏಕಾಂತಯ್ಯ, ಯಾವುದೇ ದುರುದ್ದೇಶ, ಸ್ಥಾನ ಮಾನದ ಆಸೆ ಇಟ್ಟುಕೊಂಡು ಈ ಸಭೆ ಕರೆದಿಲ್ಲ. ಯಾವ ಸ್ವ ಹಿತಾಸಕ್ತಿಯೂ ಇಲ್ಲವೆಂಬ ಸಂಗತಿ ಸ್ಪಷ್ಟಪಡಿಸಿದರು. ಮುರುಘಾಮಠ ಸಾರ್ವಜನಿಕ ಟ್ರಸ್ಟ್‌ ಆಗಿದ್ದು ಜನರು ಕೊಟ್ಟಕಾಣಿಕೆಯಿಂದ ಬೆಳೆದು ಬಂದಿದೆ. ಮಠದ ಗೌರವ, ಪ್ರತಿಷ್ಠೆಗಳ ಕಾಪಾಡಬೇಕಿದೆ. ಪೀಠಾಧಿಪತಿಗಳು ಅವರದೇ ಆದ ಕಾರಣದಿಂದ ಬಂಧನಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ನಾವುಗಳು ಒಂದಿಷ್ಟಾದರೂ ನಿಷ್ಟುರವಾಗಿ ನಡೆದುಕೊಳ್ಳುವುದ ಕಲಿಯಬೇಕು ಎಂದರು.

ಮಠದ ಕುರಿತು ಮುಂದೇನು ಎಂಬ ಪ್ರಸ್ತಾಪಗಳು ತಿಂಗಳಿನಿಂದಲೂ ನಡೆಯುತ್ತಿವೆ. ಜಾಮೀನು ಮುಂತಾದ ಕಾರಣಗಳಿಂದ ತಡವಾಗಿ ಸಭೆ ಕರೆಯಲಾಗಿದೆ. ಯಾರನ್ನೂ ದೂಷಿಸದೆ, ಅವಹೇಳನಾಕಾರಿ ಮಾತುಗಳನ್ನಾಡದೆ ಗೌರವಯುತವಾಗಿ ನಡೆದುಕೊಳ್ಳಬೇಕು. ತಮ್ಮ ಅಭಿಪ್ರಾಯಗಳ ಸಂಕ್ಷಿಪ್ತವಾಗಿ ತಿಳಿಸಬೇಕು. ನಂತರ ಒಟ್ಟಾರೆ ಅಭಿಪ್ರಾಯ ಕ್ರೋಡೀಕರಿಸಿ ಅಂತಿಮ ತೀರ್ಮಾನಕ್ಕ ಬರೋಣವೆಂದರು. ಮಠದಲ್ಲಿ ಬಹುವರ್ಷಗಳಿಂದ ಒಂದಿಷ್ಟುಮಂದಿ ಬೀಡು ಬಿಟ್ಟಿದ್ದು, ಅವರುಗಳ ಸ್ವ ಹಿತಾಸಕ್ತಿಗಾಗಿ ಇಡೀ ಮಠವನ್ನೇ ಬಲಿ ಕೊಡಲಾಗಿದೆ. ಹಾಗಾಗಿ ಅಂತಹವರ ಮೊದಲು ಅಲ್ಲಿಂದು ಹೊರ ಕಳಿಸಬೇಕೆಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂದವು. ಕತೃಗದ್ದುಗೆಯಲ್ಲಿ ಶರಣರ ಫೋಟೋ ಇದ್ದು ಅದನ್ನು ತೆರವುಗೊಳಿಸಬೇಕು. ಹಿಂದೆ ಇದ್ದ ಗಂಟೆ, ಜಾಗಟೆ, ಕರ್ಪೂರದ ಆರತಿ ವ್ಯವಸ್ಥೆ ಮಾಡಬೇಕೆಂದು ಭಕ್ತರೊಬ್ಬರು ಆಗ್ರಹಿಸಿದರು.

ಚಿತ್ರದುರ್ಗ ಮುರುಘಾ ಶ್ರೀಗೆ ಜೈಲೈ ಗತಿ, ಜಾಮೀನು ಅರ್ಜಿ ವಜಾ!

ಇನ್ನು ಮೇಲೆ ಶೂನ್ಯ ಪೀಠ ಎಂದು ಕರೆಯುವುದು ಬೇಡ. ವೀರಶೈವ ಲಿಂಗಾಯಿತರ ಮಠವೆನ್ನೋಣವೆಂಬ ಮತ್ತೊಂದು ಅಭಿಪ್ರಾಯಕ್ಕೆ ಮಾಜಿ ಶಾಸಕ ಪಿ. ರಮೇಶ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈಗ ಹಾಲಿ ಎದುರಾಗಿರುವ ಸಮಸ್ಯೆ ನಿವಾರಣೆ ಮಾಡಿಕೊಳ್ಳೋಣ. ವ್ಯವಸ್ಥೆ ಬದಲಾವಣೆ ಮಾತುಗಳು ಬೇಡ. ಬಸವಣ್ಣ, ಅಲ್ಲಮಪ್ರಭು ಪರಂಪರೆ ಇದಾಗಿದೆ. ಬಸವತತ್ವಗಳ ಹೇಳಿಕೊಂಡು ಸಾಗೋಣವೆಂದರು.

Follow Us:
Download App:
  • android
  • ios