ಬೆಂಗಳೂರು(ಮೇ.04): ಲಾಕ್‌ಡೌನ್‌ ಜಾರಿಯಾಗಿ ಬರೋಬ್ಬರಿ 40 ದಿನಗಳ ನಂತರ ಕೊರೋನಾ ಕಂಟೈನ್ಮೆಂಟ್‌ ವಲಯ ಹೊರತು ಪಡಿಸಿ ರಾಜ್ಯಾದ್ಯಂತ ಸೋಮವಾರದಿಂದ ಮದ್ಯ ಮಾರಾಟ ಆರಂಭವಾಗಲಿದೆ.

ಎಲ್ಲ ಎಂಎಸ್‌ಐಎಲ್‌, ಎಂಆರ್‌ಪಿ ಮತ್ತು ಮದ್ಯದ ಅಂಗಡಿಗಳಲ್ಲಿ ಮಾರ್ಗಸೂಚಿ ನಿಯಮದ ಪ್ರಕಾರ ಮದ್ಯ ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಮದ್ಯದ ಅಂಗಡಿಗಳ ಮುಂದೆ ವೈಯಕ್ತಿಕ ಅಂತರ ಕಾಪಾಡಿಕೊಳ್ಳಲು ಗುರುತು ಮಾಡಲಾಗಿದೆ. ಕೆಲವು ಕಡೆ ಜನರು ಸಾಲಾಗಿ ಬರುವಂತೆ ಬ್ಯಾರಿಕೇಡ್‌ ಹಾಕಲಾಗುತ್ತಿದೆ. ಮದ್ಯಪ್ರಿಯರು ಹೆಚ್ಚು ಜನರು ಬರುವ ಸಾಧ್ಯತೆ ಇರುವುದರಿಂದ ಅವರನ್ನು ನಿಯಂತ್ರಿಸಲು ಅನೇಕ ಮದ್ಯದ ಅಂಗಡಿ ಮಾಲಿಕರು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದಾರೆ.

ಈ ಮಧ್ಯೆ, ಮದ್ಯಪ್ರಿಯರು ಬೆಳ್ಳಂಬೆಳಗ್ಗೆಯೇ ಅಂಗಡಿಗಳ ಮುಂದೆ ದಾಂಗುಡಿಯಿಡಲು ಸಜ್ಜಾಗಿದ್ದಾರೆ. ಪ್ರತಿ ಗ್ರಾಹಕರಿಗೆ ನಿರ್ದಿಷ್ಟಪ್ರಮಾಣದಲ್ಲಿ ಮದ್ಯ ಮಾರಾಟ ಮಾಡಲಾಗುವುದರಿಂದ ಜನರು ಹೆಚ್ಚು ಸಂಖ್ಯೆಯಲ್ಲಿ ಬರಲಿದ್ದಾರೆ.

ಅಬಕಾರಿ ಇಲಾಖೆ ಎಚ್ಚರಿಕೆ:

ಈ ನಡುವೆ, ಮಾರ್ಗಸೂಚಿ ನಿಯಮ ಉಲ್ಲಂಘಿಸಿದರೆ ಮಳಿಗೆಗಳ ಅನುಮತಿ ರದ್ದುಪಡಿಸಿ ಅಮಾನತಿನಲ್ಲಿ ಇಡಲಾಗುವುದು ಎಂದು ಅಬಕಾರಿ ಇಲಾಖೆ ಎಚ್ಚರಿಸಿದೆ.

ಮಾರ್ಗಸೂಚಿಯಂತೆ ಕಂಟೈನ್ಮೆಂಟ್‌ ವಲಯಗಳಲ್ಲಿರುವ ಯಾವುದೇ ರೀತಿಯ ಮದ್ಯದಂಗಡಿಗಳನ್ನು ತೆರೆಯಬಾರದು. ಉಳಿದ ಪ್ರದೇಶಗಳಲ್ಲಿರುವ ಸಿಎಲ್‌-2 (ವೈನ್‌ಶಾಪ್‌ಗಳು, ಎಂಆರ್‌ಪಿ ಔಟ್‌ಲೆಟ್‌ಗಳು) ಮತ್ತು ಸಿಎಲ್‌ 11ಸಿ (ಎಂಎಸ್‌ಐಎಲ್‌ ಮಳಿಗೆಗಳು) ಮದ್ಯ ಮಳಿಗೆಗಳಲ್ಲಿ ಮಾತ್ರ ಬೆಳಗ್ಗೆ 9ರಿಂದ ಸಂಜೆ 7 ಗಂಟೆವರೆಗೆ ಮದ್ಯ ಮಾರಾಟ ಮಾಡಬೇಕು. ಈ ಮಳಿಗೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಮದ್ಯ ಮಾರಾಟದಂಗಡಿಗಳಲ್ಲಿ ಮದ್ಯ ಮಾರಾಟ ಮಾಡಬಾರದು. ಸಿಸಿಟಿವಿ ಕ್ಯಾಮರಾ ಅಳವಡಿಕೆ ಕಡ್ಡಾಯವಾಗಿರುತ್ತದೆ.

ದಾವಣಗೆರೆಯಲ್ಲಿ 21 ಕೇಸ್‌ ಸ್ಫೋಟ: ರಾಜ್ಯದಲ್ಲಿ ಒಂದೇ ದಿನ 34 ಮಂದಿಗೆ ಸೋಂಕು!

ಮದ್ಯ ಮಾರಾಟದ ಅವಧಿಯಲ್ಲಿ ಮಳಿಗೆಗಳಲ್ಲಿ ಕೇವಲ ಐದು ಜನ ಗ್ರಾಹಕರು ಮಾತ್ರ ಇರಬೇಕು ಹಾಗೂ ಅವರೆಲ್ಲರೂ 6 ಅಡಿಗಳಿಗೆ ಕಡಿಮೆ ಇಲ್ಲದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮದ್ಯ ಮಾರಾಟದ ಮಳಿಗೆಗಳ ನೌಕರರು ಮತ್ತು ಮದ್ಯ ಖರೀದಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು ಮತ್ತು ಸ್ಥಳದಲ್ಲಿ ಸ್ಯಾನಿಟೈಸರ್‌ಗಳನ್ನು ಬಳಸಬೇಕು ಎಂದು ನಿಯಮ ಜಾರಿಗೆ ತರಲಾಗಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಮಾಡಲಾಗಿರುವ ಸೀಲ್‌ ನಡುವೆಯೂ ಅಕ್ರಮವಾಗಿ ಮದ್ಯ ಹೊರತೆಗೆದಿರುವ ಆರೋಪ ಕೇಳಿ ಬಂದಿರುವ ಎಲ್ಲ ಮಳಿಗೆಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಮೊದಲು ಪರಿಶೀಲನೆ ನಡೆಸಿ ನಂತರ ಮದ್ಯ ಮಾರಾಟಕ್ಕೆ ಅನುಮತಿ ನೀಡಲಿದ್ದಾರೆ. ಅಕ್ರಮವಾಗಿ ಮದ್ಯ ಹೊರತೆಗೆದಿರುವುದು ಕಂಡುಬಂದರೆ, ಅಂದರೆ ಅಂಗಡಿ ಸೀಲ್‌ ಮಾಡುವಾಗ ಇದ್ದ ದಾಸ್ತಾನಿಗಿಂತ ಕಡಿಮೆಯಾಗಿದ್ದರೆ, ಅಂತಹ ಮಳಿಗೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಬಕಾರಿ ಇಲಾಖೆ ಆಯುಕ್ತ ಡಾ.ಲೋಕೇಶ್‌ ತಿಳಿಸಿದ್ದಾರೆ.

ರಾಜ್ಯಗಳಲ್ಲಿ ಸೋಂಕು ಹರಡುವ ಹೊಸ ಆತಂಕ!

ಬಜೆಟ್‌ ಎಫೆಕ್ಟ್: ಮದ್ಯ ದರ ಶೇ.6ರಷ್ಟು ಹೆಚ್ಚಳ

ಸೋಮವಾರದಿಂದ ಮದ್ಯ ಸಿಗಲಿದೆ ಎಂದು ಸಂತಸದಿಂದ ಇರುವ ಮದ್ಯಪ್ರಿಯರು ಈ ಹಿಂದಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗುತ್ತದೆ.

ಕಳೆದ ಮಾಚ್‌ರ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಡಿಸಿದ ಆಯವ್ಯಯದಲ್ಲಿ ವಿವಿಧ ಮದ್ಯಗಳ ಮೇಲಿನ ತೆರಿಗೆಯನ್ನು ಶೇ.6ರಷ್ಟುಹೆಚ್ಚಳ ಮಾಡಿದ್ದರು. ಈ ದರ ಏಪ್ರಿಲ್‌ ಒಂದರಿಂದ ಅನ್ವಯವಾಗಲಿದೆ.

ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾ್ಯಬ್‌ಗಳ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ.6ರಷ್ಟುಹೆಚ್ಚಿಸಿರುವುದರಿಂದ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಪ್ರತಿ 180 ಎಂಎಲ್‌ ಮೇಲಿನ ದರವು ಕನಿಷ್ಠ 3 ರು.ನಿಂದ 30 ರು.ವರೆಗೂ ಹೆಚ್ಚಳವಾಗಿದ್ದು, ಮದ್ಯಪಾನ ಮಾಡುವವರ ಕಿಸೆಗೆ ಕತ್ತರಿ ಬೀಳಲಿದೆ. ಆದರೆ ಆಯವ್ಯಯದಲ್ಲಿ ಬಿಯರ್‌ ಮೇಲಿನ ತೆರಿಗೆಯನ್ನು ಹೆಚ್ಚಿಸಿಲ್ಲ. ಹೀಗಾಗಿ ಬಿಯರ್‌ ಪ್ರಿಯರು ಸ್ವಲ್ಪ ಖುಷಿಪಡಬಹುದು.