ಮೈಸೂರು ಪ್ರಿನ್ಸೆಸ್ ರಸ್ತೆ ಹೆಸರಿನ ಹಿಂದೆ ಇಷ್ಟೊಂದು ದೊಡ್ಡ ಇತಿಹಾಸ ಇದೆಯೇ?

ಮೈಸೂರಿನ ಪ್ರಿನ್ಸೆಸ್ ರಸ್ತೆಯ ಐತಿಹಾಸಿಕ ಮಹತ್ವವನ್ನು ತಿಳಿಸಿಕೊಟ್ಟಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ರಸ್ತೆಯನ್ನು ಏಕೆ ಉಳಿಸಿಕೊಳ್ಳಬೇಕು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಇಲ್ಲಿದೆ ಪ್ರಿನ್ಸೆಸ್ ರಸ್ತೆಯ ಮಹತ್ವ...

MP Yaduveer Wodeyar explains importance of Mysuru Princess Road and demand to did not to rename sat

ಮೈಸೂರು (ಡಿ.26): ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದದಿಂದ ಕೆಆರ್‌ಎಸ್‌ಗೆ ತೆರಳುವ ಮಾರ್ಗವಾದ ಪ್ರಿನ್ಸೆಸ್ ರಸ್ತೆಗೆ ರಾಜ್ಯ ಸರ್ಕಾರದಿಂದ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಮರುನಾಮಕರಣ ಮಾಡದೇ ಪರಂಪರೆಯನ್ನು ಉಳಿಸಬೇಕು ಎಂದು ಮೈಸೂರು ಹಾಗೂ ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೈಸೂರಿನ ಪ್ರಿನ್ಸೆಸ್ ರಸ್ತೆಯ ಮಹತ್ವವನ್ನು ತಿಳಿಸಿದ್ದು, ಈ ರಸ್ತೆಗೆ ಯಾವುದೇ ಕಾರಣಕ್ಕೂ ಮರುನಾಮಕರಣ ಮಾಡಿ ಕೊಡುಗೆ ನೀಡಿದಂತಹ ದಾನಿಗಳಿಗೆ ಅಪಮಾನ ಮಾಡಬಾರದು. ಮೈಸೂರು ಪರಂಪರೆ ಉಳಿಸೋಣ ಎಂಬ ಸಂದೇಶದ ಮೂಲಕ ತಮ್ಮ ಪೋಸ್ಟ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. 

ಪ್ರಿನ್ಸೆಸ್ ರಸ್ತೆಯ ಐತಿಹಾಸಿಕ ಮಹತ್ವ:
ಕೆಆರ್‌ಎಸ್‌ ರಸ್ತೆ ಎಂದು ಜನಪ್ರಿಯವಾಗಿರುವ ರಾಜಕುಮಾರಿ(Princess) ರಸ್ತೆ ಕೇವಲ ರಸ್ತೆಯ ಹೆಸರಲ್ಲದೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಈ ರಸ್ತೆಗೆ ಇಬ್ಬರು ಪ್ರತಿಷ್ಠಿತ ರಾಜಕುಮಾರಿಯರ ಹೆಸರನ್ನು ಇಡಲಾಗಿದೆ. ರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರು ಮತ್ತು ರಾಜಕುಮಾರಿ ಚೆಲುವಾಜಮ್ಮಣ್ಣಿ ಅವರು, ಮಹಾರಾಜ ಚಾಮರಾಜ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಪುತ್ರಿಯರ ಸ್ಮರಣಾರ್ಥವಾಗಿ ಅವರ ಹೆಸರಿಡಲಾಗಿದೆ.
ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರ ಹೆಸರಿನಲ್ಲಿ ಸ್ಥಾಪಿಸಲಾದ ಪಿಕೆ ಸ್ಯಾನಿಟೋರಿಯಂ ಮೂಲಕ ಅವರ ಸ್ಮರಣೆಯು ಜೀವಂತವಾಗಿದೆ. ಮಹಾರಾಜಕುಮಾರಿ ಚೆಲುವಾಜಮ್ಮಣ್ಣಿ ಅವರ ನಿವಾಸ, ಚೆಲುವಾಂಬ ಮ್ಯಾನ್ಸನ್, ಈಗಿನ ಸಿಎಫ್ಟಿಆರ್‌ಐ ಬಂಗಲೆಯು ಸಹ ಇದೆ ರಸ್ತೆಯಲ್ಲಿದೆ.

ಇದನ್ನೂ ಓದಿ: ಮೈಸೂರಿನ ಕೆಆರ್‌ಎಸ್‌ ರಸ್ತೆಗೆ ಸಿದ್ದರಾಮಯ್ಯ ಹೆಸರು: ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ

ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಇತಿಹಾಸ: ಮಹಾರಾಜಕುಮಾರಿ ಕೃಷ್ಣಾಜಮ್ಮಣ್ಣಿ ಅವರ ಜೀವನವು ದುರಂತದ ಸಾವು ಮತ್ತು ಮೈಸೂರಿನ ಇತಿಹಾಸಕ್ಕೆ ಮಹತ್ವದ ಕೊಡುಗೆಗಳಿಂದ ಗುರುತಿಸಲ್ಪಟ್ಟಿದೆ. ಕರ್ನಲ್, ಜಾಗೀರ್ದಾರ್ ಶ್ರೀ ದೇಸರಾಜೇ ಅರಸ್ ಧರ್ಮಪತ್ನಿಯಾದ ಇವರು ಮತ್ತು ಇವರ ಮೂವರು ಹೆಣ್ಣುಮಕ್ಕಳು 1904 ಮತ್ತು 1913ರ ನಡುವೆ ಕ್ಷಯರೋಗಕ್ಕೆ ಬಲಿಯಾದರು. ಅವರ ಸ್ಮರಣೆಯನ್ನು ಗೌರವಿಸಲು, ರಾಜಕುಮಾರಿ ಕೃಷ್ಣಜಮ್ಮಣ್ಣಿ ಸ್ಯಾನಿಟೋರಿಯಂ (PKTB ಆಸ್ಪತ್ರೆ) ಸ್ಥಾಪಿಸಲು ಅವರ ಕುಟುಂಬ 100 ಎಕರೆ ಭೂಮಿಯನ್ನು ದಾನ ಮಾಡಿದೆ. ಆರೋಗ್ಯ ರಕ್ಷಣೆಗಾಗಿ ರಾಜಮನೆತನದ ದೃಷ್ಟಿಕೋನವು PK ಸ್ಯಾನಿಟೋರಿಯಂ ಸ್ಥಾಪನೆಗೆ ಕಾರಣವಾಯಿತು.

ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೊರವಲಯದಲ್ಲಿ 1918 ರಲ್ಲಿ ಸ್ಯಾನಿಟೋರಿಯಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಕರ್ನಲ್ ದೇಸ ರಾಜೇ ಅರಸ್ ಅದರ ನಿರ್ಮಾಣ ಮತ್ತು ಸೌಲಭ್ಯಗಳಿಗಾಗಿ ಆ ಸಮಯದಲ್ಲೇ ಗಮನಾರ್ಹ ಮೊತ್ತ 75,000 ರೂ. ನೀಡಿದರು. 1921 ರಲ್ಲಿ ತೆರೆಯಲಾದ ಈ ಆಸ್ಪತ್ರೆಯು ಕ್ಷಯರೋಗ ಚಿಕಿತ್ಸಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಜಯದೇವ ಹೃದ್ರೋಗ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್ ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಅನೇಕ ಸೌಲಭ್ಯಗಳಿಗೆ ಮುಂದುವರಿದಂತೆ ಈ ಜಾಗವು ವಿಸ್ತರಿಸಿಕೊಂಡಿದೆ.

ಇದನ್ನೂ ಓದಿ: ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವುದಕ್ಕೆ ಸಂಸದ ಯದುವೀರ್ ಒಡೆಯರ್ ವಿರೋಧ

ಪ್ರಿನ್ಸೆಸ್ ರೋಡ್ ಮೈಸೂರಿನ ಇತಿಹಾಸ ಮತ್ತು ಒಡೆಯರ್ ಕುಟುಂಬದ ಪರಂಪರೆಯನ್ನು ಒಳಗೊಂಡಿದೆ. ಇದನ್ನು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಮರುನಾಮಕರಣ ಮಾಡುವುದರಿಂದ ನಗರದ ಪರಂಪರೆಯ ಪ್ರಮುಖ ಸಂಬಂಧವನ್ನು ಅಳಿಸಿಹಾಕಿದಂತಾಗುತ್ತದೆ. ರಸ್ತೆಯು ರಾಜಕುಮಾರಿಯರು ಮತ್ತು ರಾಜಮನೆತನದ ಕೊಡುಗೆಗಳನ್ನು ಸ್ಮರಿಸುವ ಪ್ರಮುಖ ಮಾರ್ಗವಾಗಿದೆ. ಇದು ಭವಿಷ್ಯದ ಪೀಳಿಗೆಗೆ ಮೈಸೂರಿನ ಸಾಂಸ್ಕೃತಿಕ ಗುರುತಿಗೆ ಸಂಬಂಧಿಸಿದ ಐತಿಹಾಸಿಕ ಹೆಗ್ಗುರುತುಗಳನ್ನು ಸಂರಕ್ಷಿಸುವ ಮಹತ್ವವನ್ನು ನೆನಪಿಸುತ್ತದೆ.

ಸಾರ್ವಜನಿಕ ಹೆಗ್ಗುರುತುಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಮಾಡುವಾಗ ಮೈಸೂರು ಜನತೆಯ ಭಾವನೆಗಳನ್ನು ಮತ್ತು ಅವರ ಪರಂಪರೆಯನ್ನು ಗೌರವಿಸಬೇಕಾಗಿದೆ.

Latest Videos
Follow Us:
Download App:
  • android
  • ios