ಸೈನಿಕರ ಅನುಕೂಲಕ್ಕಾಗಿ ಘಟಪ್ರಭಾ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಸಂಸದ ಈರಣ್ಣ ಕಡಾಡಿ ಮನವಿ ಸಲ್ಲಿಸಿದ್ದಾರೆ. ಹಾಗೆಯೇ, ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲನ್ನು ಕರಾವಳಿ ಜಿಲ್ಲೆಗಳಿಗೆ ವಿಸ್ತರಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳಿಗೆ ಸೇರಿದ ನೂರಾರು ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೈನಿಕರು ರಜೆ ಸಂದರ್ಭಗಳಲ್ಲಿ ತಮ್ಮ ಸ್ವಗ್ರಾಮಗಳಿಗೆ ಆಗಮಿಸಲು ಹಾಗೂ ಸೇವಾ ಸ್ಥಳಗಳಿಗೆ ಮರಳಲು ರೈಲು ಪ್ರಯಾಣವೇ ಪ್ರಮುಖ ಅವಲಂಬನೆಯಾಗಿದೆ. ಆದರೆ, ಈ ಭಾಗದ ಸೈನಿಕರಿಗೆ ಅನುಕೂಲವಾಗುವಂತೆ ಘಟಪ್ರಭಾ ರೈಲು ನಿಲ್ದಾಣದಲ್ಲಿ ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಇಲ್ಲದಿರುವುದು ದೀರ್ಘಕಾಲದ ಸಮಸ್ಯೆಯಾಗಿ ಉಳಿದಿದೆ.
ಈ ಹಿನ್ನೆಲೆಯಲ್ಲಿ, ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿಯಾಗಿ, ಸೈನಿಕರ ಪ್ರಯಾಣ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಘಟಪ್ರಭಾ ರೈಲು ನಿಲ್ದಾಣದಲ್ಲಿ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವಂತೆ ಮನವಿ ಸಲ್ಲಿಸಿದರು. ಈ ಐದು ತಾಲೂಕುಗಳ ಬಹುತೇಕ ಸೈನಿಕರು ರೈಲಿನ ಮೂಲಕವೇ ಪ್ರಯಾಣಿಸುತ್ತಾರೆ. ಹಲವು ದೀರ್ಘದೂರದ ರೈಲುಗಳು ಘಟಪ್ರಭಾ ಮಾರ್ಗವಾಗಿ ಸಂಚರಿಸುತ್ತಿದ್ದರೂ, ನಿಲುಗಡೆ ಇಲ್ಲದ ಕಾರಣ ಸೈನಿಕರು ಬೆಳಗಾವಿ ಅಥವಾ ಮೀರಜ್ ರೈಲು ನಿಲ್ದಾಣಗಳಿಗೆ ತೆರಳಿ ಅಲ್ಲಿಂದ ಪ್ರಯಾಣ ಆರಂಭಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದು ಸಮಯ, ವೆಚ್ಚ ಮತ್ತು ದೈಹಿಕ ತೊಂದರೆಗಳಿಗೆ ಕಾರಣವಾಗುತ್ತಿದೆ ಎಂದು ಸಂಸದರು ಸಚಿವರ ಗಮನಕ್ಕೆ ತಂದರು.
ಸೈನಿಕರ ಅನುಕೂಲಕ್ಕಾಗಿ ಕೆಳಕಂಡ ಎಕ್ಸ್‌ಪ್ರೆಸ್ ರೈಲುಗಳಿಗೆ ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ:
- ಚಂಡೀಗಢ–ಯಶವಂತಪುರ ಎಕ್ಸ್‌ಪ್ರೆಸ್,
- ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (22685/86),
- ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12629/30),
- ಹಜರತ್ ನಿಜಾಮುದ್ದೀನ್–ಮೈಸೂರು ಸ್ವರ್ಣ ಜಯಂತಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ (12781/87),
- ಕೆ.ಎಸ್.ಆರ್ ಬೆಂಗಳೂರು–ಜೋಧಪುರ ಎಕ್ಸ್‌ಪ್ರೆಸ್ (16533/34),
- ಕೆ.ಎಸ್.ಆರ್ ಬೆಂಗಳೂರು–ಅಜ್ಮೀರ್ ಗರೀಬ್ ನವಾಜ್ ಎಕ್ಸ್‌ಪ್ರೆಸ್ (16531/32),
- ಕೆ.ಎಸ್.ಆರ್ ಬೆಂಗಳೂರು–ಗಾಂಧಿಧಾಮ್ ಎಕ್ಸ್‌ಪ್ರೆಸ್ (16505/06),
- ಅಜ್ಮೀರ್–ಮೈಸೂರು / ಮೈಸೂರು–ಅಜ್ಮೀರ್ ಎಕ್ಸ್‌ಪ್ರೆಸ್ (16209/10),
- ಪ್ಯಾಲೇಸ್ ಕ್ವೀನ್ ಹಮ್ಸಫರ್ ಎಕ್ಸ್‌ಪ್ರೆಸ್ (19667/68),
- ತಿರುಚ್ಚಿರಾಪಳ್ಳಿ–ಗಂಗಾನಗರ ಹಮ್ಸಫರ್ ಎಕ್ಸ್‌ಪ್ರೆಸ್ (22497/98).
ಈ ಮನವಿಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರಾವಳಿ ಜಿಲ್ಲೆಗಳಿಗೆ ‘ವಂದೇ ಭಾರತ್’ ರೈಲು ವಿಸ್ತರಣೆಗಾಗಿ ಸಂಸದ ಕೋಟ ಮನವಿ
ಉಡುಪಿ: ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳವರೆಗೆ ವಿಸ್ತರಿಸಬೇಕು ಎಂದು ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಪ್ರತಿದಿನ ಉತ್ತರ ಕನ್ನಡ, ಕುಂದಾಪುರ, ಉಡುಪಿ ಹಾಗೂ ಮಂಗಳೂರು ಭಾಗಗಳಿಂದ 600ಕ್ಕೂ ಅಧಿಕ ಬಸ್‌ಗಳು ಮತ್ತು ಅನೇಕ ಖಾಸಗಿ ವಾಹನಗಳು ರಾಜಧಾನಿ ಬೆಂಗಳೂರು ತಲುಪುತ್ತಿದ್ದು, ಇದರಿಂದ ರಸ್ತೆ ಸಂಚಾರದ ಒತ್ತಡ ಹೆಚ್ಚುತ್ತಿದೆ. ನಿತ್ಯ ಪ್ರಯಾಣಿಕರ ಅನುಕೂಲಕ್ಕಾಗಿ ಕರಾವಳಿ ಜಿಲ್ಲೆಗಳಿಗೆ ವಂದೇ ಭಾರತ್ ರೈಲು ಸೇವೆ ಆರಂಭಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಸಂಸದರು ಸಚಿವರ ಗಮನಕ್ಕೆ ತಂದರು. ಇದಲ್ಲದೆ, ಮಂಗಳೂರು–ಮುಂಬೈ ನಡುವಿನ 734 ಕಿಲೋಮೀಟರ್ ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ದ್ವಿಪಥಗೊಳಿಸುವ ಮೂಲಕ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲು ತ್ವರಿತವಾಗಿ ಸರ್ವೆ ನಡೆಸಿ ಅಗತ್ಯ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.
ಮಂಗಳೂರು–ಕಾರವಾರ ನಡುವಿನ ಕರಾವಳಿ ಜಿಲ್ಲೆಗಳ ರೈಲ್ವೆ ಪ್ರಯಾಣಿಕರಿಗೆ ಹಲವು ವರ್ಷಗಳಿಂದ ಉತ್ತಮ ರೈಲು ಸೇವೆಯ ಕೊರತೆ ಇದ್ದು, ಇತ್ತೀಚೆಗೆ ಕೇಂದ್ರ ಸರ್ಕಾರದ ಕ್ರಮಗಳಿಂದ ಕೆಲವು ಮಟ್ಟದ ಸುಧಾರಣೆ ಕಂಡು ಬಂದಿದ್ದರೂ, ಇನ್ನೂ ಹೊಸ ರೈಲುಗಳು ಮತ್ತು ಮೂಲಸೌಕರ್ಯಗಳ ಅಗತ್ಯವಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕರಾವಳಿ ಭಾಗದ ಜನರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಅವರು ರೈಲ್ವೆ ಸಚಿವರಲ್ಲಿ ಆಗ್ರಹಿಸಿದ್ದಾರೆ.


