Asianet Suvarna News Asianet Suvarna News

ಒಂದೇ ತಾಸಿನಲ್ಲಿ ಅಮ್ಮ, ಅಜ್ಜಿ ಸಾವು: ಮಕ್ಕಳಿಬ್ಬರು ಅನಾಥ!

ಒಂದೇ ತಾಸಿನಲ್ಲಿ ಅಮ್ಮ, ಅಜ್ಜಿ ಸಾವು: ಮಕ್ಕಳಿಬ್ಬರು ಅನಾಥ!| ಬೆಂಗಳೂರಿನಲ್ಲಿ ಕೋವಿಡ್‌ ಹೃದಯವಿದ್ರಾವಕ ಘಟನೆ| ಕಳೆದ ತಿಂಗಳಷ್ಟೇ ತಂದೆ ಕೂಡ ಸಾವನ್ನಪ್ಪಿದ್ದರು

Mother And Grany Dies Of Coronavirus Children Become Orphans In Bengaluru pod
Author
Bangalore, First Published Apr 17, 2021, 7:24 AM IST

ಬೆಂಗಳೂರು(ಎ.17): ಕೋವಿಡ್‌-19 ಸೋಂಕು ಭಾರೀ ಆಪತ್ತನ್ನೇ ಸೃಷ್ಟಿಸುತ್ತಿದೆ. ಸೋಂಕಿನಿಂದ ತಾಯಿ ಮತ್ತು ಅಜ್ಜಿಯನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಕಳೆದ ತಿಂಗಳಷ್ಟೇ ಇವರ ತಂದೆ ಕೂಡ ಸಾವನ್ನಪ್ಪಿದ್ದರು.

ಹೆಣ್ಣೂರು ಮುಖ್ಯರಸ್ತೆಯ ನಕ್ಷತ್ರ ಲೇಔಟ್‌ ನಿವಾಸಿ ಸುಗುಣಾ (49) ಅವರಿಗೆ ಕೋವಿಡ್‌ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಏ.9ರಂದು ದೇವನಹಳ್ಳಿಯ ಆಕಾಶ್‌ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಮರುದಿನವೇ ಅವರ ಅತ್ತೆ ರೆಜಿನಾ (75) ಅವರಿಗೆ ಉಸಿರಾಟದ ಸಮಸ್ಯೆ ಸೇರಿದಂತೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹಾಗಾಗಿ ಅವರನ್ನು ಕೂಡಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ರೆಜಿನಾ ಅವರು ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ಉಸಿರಾಟದ ಸಮಸ್ಯೆ ತೀವ್ರಗೊಂಡ ಕಾರಣ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಇದಾದ ಒಂದೇ ತಾಸಿನಲ್ಲಿ ಅವರ ಸೊಸೆ ಸುಗುಣಾ ಅವರು ಕೂಡಾ ಸೋಂಕು ಉಲ್ಬಣಗೊಂಡಿದ್ದರಿಂದ ಕೊನೆ ಉಸಿರೆಳೆದರು. ಹೀಗಾಗಿ ಒಂದೇ ಕುಟುಂಬದ ಇಬ್ಬರು ಹಿರಿಯ ಜೀವಗಳು ಮೃತಪಟ್ಟಿದ್ದರಿಂದ ಅವರನ್ನೇ ನಂಬಿಕೊಂಡಿದ್ದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

ತಿಂಗಳ ಹಿಂದಷ್ಟೇ ತಂದೆ ಕಳೆದುಕೊಂಡಿದ್ದರು:

ವಿಪರಾರ‍ಯಸವೆಂದರೆ ತಿಂಗಳ ಹಿಂದಷ್ಟೇ ಮಕ್ಕಳು ಅವರ ತಂದೆಯನ್ನು ಕಳೆದುಕೊಂಡಿದ್ದರು. ಹೃದಯಾಘಾತದಿಂದ ಪತಿ ಮೃತಪಟ್ಟಿದ್ದರಿಂದ ತಾಯಿ ಸುಗುಣಾ ಅವರು, ಇಬ್ಬರು ಮಕ್ಕಳು ಮತ್ತು ಅತ್ತೆ ರೆಜಿನಾ ಅವರನ್ನು ಪಾಲನೆ ಮಾಡಬೇಕಾದ ಪರಿಸ್ಥಿತಿ ಎದುರಿಸುವಂತಾಗಿತ್ತು.

ಪತಿಯೇ ಕುಟುಂಬದ ಜವಾಬ್ದಾರಿ ಹೊತ್ತಿದ್ದರಿಂದ ಸುಗುಣಾ ಅವರು ಮನೆ, ಮಕ್ಕಳು ಮತ್ತು ಅತ್ತೆಯನ್ನು ನೋಡಿಕೊಳ್ಳುವುದಕ್ಕೆ ಮೀಸಲಾಗಿದ್ದರು. ಏಕಾಏಕಿ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದರಿಂದ ಕುಟುಂಬಕ್ಕೆ ಸಿಡಿಲು ಬಡಿದಂತಾಗಿತ್ತು. ಆದರೂ ಬಡಕುಟುಂಬದ ಸುಗುಣ ಅವರು ಅತ್ತೆ ಮತ್ತು ಮಕ್ಕಳ ಪೋಷಣೆ ಜವಾಬ್ದಾರಿಯನ್ನು ತಮ್ಮ ಹೆಗಲಿಗೆ ಹಾಕಿಕೊಂಡಿದ್ದರು.

ಇದೀಗ ಕ್ರೂರ ವಿಧಿಯಾಟಕ್ಕೆ ಅತ್ತೆ ರೆಜಿನಾ ಮತ್ತು ಸೊಸೆ ಸುಗುಣ ಅವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ. ಮೃತರ ಶವಗಳಿಗೆ ಕ್ರಿಶ್ಚಿಯನ್‌ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದು, ಚಚ್‌ರ್‍ ವತಿಯಿಂದ ಅಂತ್ಯಸಂಸ್ಕಾರಕ್ಕೆ ಸ್ವಲ್ಪ ಮಟ್ಟಿನ ನೆರವು ನೀಡಲಾಗಿದೆ. ಅಂತ್ಯಸಂಸ್ಕಾರದ ಸಮಯಲ್ಲಿ ಎಲ್ಲರನ್ನೂ ಕಳೆದುಕೊಂಡು ಹದಿಹರೆಯದ ಮಕ್ಕಳ ಆರ್ತನಾದ ಕಲ್ಲು ಹೃದಯವನ್ನು ಕರಗಿಸುವಂತಿತ್ತು

Follow Us:
Download App:
  • android
  • ios