ದುರಸ್ತಿಗೆ ಅನುದಾನವೂ ಇಲ್ಲ, ಚಾಲಕರಿಗೆ ಸಂಬಳವೂ ಇಲ್ಲ, ಚಿರನಿದ್ರೆಗೆ ಜಾರಿದ ಶ್ರದ್ಧಾಂಜಲಿ ವಾಹನ!
108 ತುರ್ತು ಸೇವಾ ವಾಹನಗಳ ಪೈಕಿ ಸೇವೆಯಿಂದ ಹಿಂತಿರುಗಿಸಲಾಗದ 108 ವಾಹನಗಳನ್ನು ಶ್ರದ್ಧಾಂಜಲಿ ವಾಹನಗಳು ಎಂದು ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿತ್ತು. ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಿಸಲಾಗಿತ್ತು. ಸಂಪೂರ್ಣ ಕಪ್ಪು ಬಣ್ಣ ಬಳಿದು ಮೃತದೇಹವನ್ನು ಆಸ್ಪತ್ರೆಗಳಿಂದ ಅವರ ಊರುಗಳಿಗೆ ಕೊಂಡೊಯ್ಯಲು ಅನು ಕೂಲವಾಗುವಂತೆ ಪರಿವರ್ತಿಸಲಾಗಿತ್ತು.
ಎಚ್.ಕೆ.ಅಶ್ವಥ್ ಹಳುವಾಡಿ
ಮಂಡ್ಯ (ಆ.13): ಬಡವರಿಗೆ ಶವ ಸಾಗಿಸುವುದಕ್ಕೆ ಅನುಕೂಲವಾಗುವಂತೆ ನೀಡಲಾಗಿದ್ದ ಶ್ರದ್ಧಾಂಜಲಿ ವಾಹನಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಸ್ಥಿತಿ ಎದುರಾಗಿದೆ. ದುರಸ್ತಿಪಡಿಸಲಾಗದಷ್ಟು ರೀತಿಯಲ್ಲಿ ಕೆಟ್ಟು ನಿಂತಿರುವ ವಾಹನವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲೆಗೆ ತಳ್ಳಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದ ಮರದ ನೆರಳಿನಲ್ಲಿ ಅನಾಥ ಸ್ಥಿತಿಯಲ್ಲಿ ಶ್ರದ್ಧಾಂಜಲಿ ವಾಹನ ನಿಂತಿದೆ. ಹಲವಾರು ತಿಂಗಳ ಹಿಂದೆಯೇ ಕೆಟ್ಟು ಹೋಗಿರುವ ಈ ವಾಹನವನ್ನು ದುರಸ್ತಿಪಡಿಸುವ ಗೋಜಿಗೆ ಹೋಗದೆ ಸಂಚಾರದಿಂದ ದೂರವಿಡಲಾಗಿದೆ.
ಟಿಬಿ ಡ್ಯಾಂ ದುರಂತ ಬಳಿಕ ಹೈ ಅಲರ್ಟ್, ಬಸವಸಾಗರ ಜಲಾಶಯದಲ್ಲಿ 2006ರ ದುರ್ಘಟನೆ ಮರುಕಳಿಸದಂತೆ ಎಚ್ಚರಿಕೆ!
108 ತುರ್ತು ಸೇವಾ ವಾಹನಗಳ ಪರಿವರ್ತನೆ: 108 ತುರ್ತು ಸೇವಾ ವಾಹನಗಳ ಪೈಕಿ ಸೇವೆಯಿಂದ ಹಿಂತಿರುಗಿಸಲಾಗದ 108 ವಾಹನಗಳನ್ನು ಶ್ರದ್ಧಾಂಜಲಿ ವಾಹನಗಳು ಎಂದು ಮಾರ್ಪಾಡು ಮಾಡಿದ ರಾಜ್ಯ ಸರ್ಕಾರ ಪ್ರತಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿತ್ತು. ಜೊತೆಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲಕರನ್ನು ನೇಮಿಸಲಾಗಿತ್ತು. ಸಂಪೂರ್ಣ ಕಪ್ಪು ಬಣ್ಣ ಬಳಿದು ಮೃತದೇಹವನ್ನು ಆಸ್ಪತ್ರೆಗಳಿಂದ ಅವರ ಊರುಗಳಿಗೆ ಕೊಂಡೊಯ್ಯಲು ಅನು ಕೂಲವಾಗುವಂತೆ ಪರಿವರ್ತಿಸಲಾಗಿತ್ತು. ೨೦೧೮ರಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ಮಹತ್ವಾಕಾಂಕ್ಷಿ ಶ್ರದ್ಧಾಂಜಲಿ ಸೇವೆ ನಿರೀಕ್ಷೆಯಂತೆ ಯಶಸ್ಸು ಕಾಣಲಿಲ್ಲ. ಈ ವಾಹನಗಳು ಸುಸ್ಥಿತಿಯಲ್ಲಿ ಇಲ್ಲದೆ ಪ್ರತಿ ತಿಂಗಳು ಚಾಲಕರ ಸಂಬಳವೂ ಪಾವತಿಯಾಗದೆ, ಶ್ರದ್ಧಾಂಜಲಿ ವಾಹನಗಳು ಶಯನಾವಸ್ಥೆಗೆ ತಲುಪಿವೆ.
ಪದೇ ಪದೇ ರಿಪೇರಿ: ಹಳೆಯ ವಾಹನಗಳು ರಸ್ತೆಗೆ ಇಳಿದಿದ್ದರಿಂದ ಶ್ರದ್ಧಾಂಜಲಿ ವಾಹನ ಪದೇ ಪದೇ ಕೈ ಕೊಡುವುದು ಸಾಮಾನ್ಯವಾಗಿತ್ತು. ದಿನ ಕಳೆದಂತೆ ದುರಸ್ತಿ ಆಗದಷ್ಟು ಕೆಟ್ಟು ಮೂಲೆ ಸೇರಿತು. ಆರಂಭದಲ್ಲಿ ವಾಹನಕ್ಕೆ ಸಾವಿರಾರು ರು.ಹಣ ಖರ್ಚು ಮಾಡಿ ದುರಸ್ತಿಗೊಳಿಸಲಾಯಿತು. ಆದರೆ, ಒಂದೆರಡು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ವಾಹನ ಕೆಟ್ಟು ನಿಲ್ಲುವುದು ಸಾಮಾನ್ಯವಾಯಿತು. ದುರಸ್ತಿ ಮಾಡಿಸಿ ಸುಸ್ತಾದ ಜಿಲ್ಲಾ ಆರೋಗ್ಯಾಧಿಕಾರಿಗಳು ವಾಹನಕ್ಕೆ ನಿಜ ಅರ್ಥದಲ್ಲಿ ಶ್ರದ್ಧಾಂಜಲಿಯನ್ನೇ ಸಲ್ಲಿಸಿಬಿಟ್ಟಿದ್ದಾರೆ.
ವಾಹನ ಆರೇಳು ತಿಂಗಳಿಂದ ದುರಸ್ತಿ ಕಂಡಿಲ್ಲ. ದುರಸ್ತಿಪಡಿಸಿದರೂ ಕೆಲವೇ ದಿನಗಳಲ್ಲಿ ಕೆಟ್ಟು ನಿಲ್ಲುತ್ತಿರುವುದು ಆರೋಗ್ಯಾಧಿಕಾರಿಗಳಿಗೂ ತಲೆಬಿಸಿಯನ್ನು ಉಂಟುಮಾಡಿತ್ತು. ಇದಕ್ಕೆ ಖರ್ಚು ಮಾಡುವ ಹಣದಲ್ಲಿ ಹೊಸ ವಾಹನವನ್ನೇ ಕೊಂಡುಕೊಳ್ಳಬಹುದೆಂಬ ಮಾತುಗಳೂ ಅಧಿಕಾರಿಗಳಿಂದ ಕೇಳಿಬಂದಿದೆ.
ಸಣ್ಣ ವಯಸ್ಸಲ್ಲೇ ಧ್ವನಿ ನಿಲ್ಲಿಸಿದ ಪೋಕೆಮಾನ್ ತಾರೆ, ಕ್ಯಾನ್ಸರ್ ವಿರುದ್ಧ ಹೋರಾಡಿ ಸೋತ ನಟಿ ರಾಚೆಲ್!
ದುರಸ್ತಿಗಿಲ್ಲ ಅನುದಾನ: ಯೋಜನೆ ಆರಂಭದಲ್ಲಿ ಪ್ರತಿ ವಾಹನಕ್ಕೆ ೫ ಲಕ್ಷ ರು. ಅನುದಾನ ತೆಗೆದಿರಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಂತರ ಅನುದಾನ ಒದಗಿಸಲಿಲ್ಲ. ಉಚಿತ ಸೇವೆ ನೀಡಬೇಕಾದ ಶ್ರದ್ಧಾಂಜಲಿ ವಾಹನಗಳು ಮೂಲೆ ಸೇರಿದ್ದರಿಂದ ಬಡವರು ಶವ ಸಾಗಿಸಲು ಸಾವಿರಾರು ರು. ಖರ್ಚು ಮಾಡಬೇಕಾಗಿದೆ. ಕೆಲ ಬಾಡಿಗೆ ವಾಹನಗಳ ಮಾಲೀಕರು ಶವ ಸಾಗಿಸಲು ಹಿಂದೇಟು ಹಾಕುತ್ತಿದ್ದರೆ, ಕೆಲವರು ದುಪ್ಪಟ್ಟು ಹಣ ಕೇಳುತ್ತಿದ್ದಾರೆ. ೫೦ ಕಿ.ಮೀ. ವರೆಗೂ ಶವ ಸಾಗಿಸಲು ಕನಿಷ್ಠ ೩ ರಿಂದ ೪ ಸಾವಿರ ರು. ನೀಡಬೇಕಿರುವುದು ಅನಿವಾರ್ಯವಾಗಿದೆ.
ಚಾಲಕರಿಗಿಲ್ಲ ಸರಿಯಾದ ಸಂಬಳ: ಶ್ರದ್ಧಾಂಜಲಿ ವಾಹನ ಚಾಲಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆ ಪ್ರತಿಯೊಬ್ಬ ಚಾಲಕನಿಗೆ ಸಂಬಳ ನೀಡಬೇಕು. ಇದರಲ್ಲಿ ಪಿಎಫ್, ಇಎಸ್‌ಐ, ಜಿಎಸ್‌ಟಿ ಹೀಗೆ ನಾನಾ ಕಾರಣಗಳನ್ನು ನೀಡಿ ೫ ರಿಂದ ೬ ಸಾವಿರ ರು. ಕಡಿತ ಮಾಡಿಕೊಂಡು ನೀಡಲಾಗುತ್ತಿದೆ. ಇನ್ನು ಕೆಲ ಗುತ್ತಿಗೆ ಸಂಸ್ಥೆಗಳು ಪಿಎಫ್, ಇಎಸ್‌ಐ ಯಾವುದನ್ನೂ ನೀಡದೇ ಕೇವಲ ೮ ರಿಂದ ೧೦ ಸಾವಿರ ರು. ವೇತನ ನೀಡಿ ಕೈ ತೊಳೆದುಕೊಳ್ಳುತ್ತಿವೆ.
ಹೀಗಾಗಿ ಶ್ರದ್ಧಾಂಜಲಿ ವಾಹನಗಳು ಜನರಿಗೆ ಹತ್ತಿರವಾಗುವ ಮುನ್ನವೇ ದೂರವಾಗಿವೆ. ಮಂಡ್ಯದ ಶ್ರದ್ಧಾಂಜಲಿ ವಾಹನ ಬಿಸಿಲು, ಗಾಳಿ, ಮಳೆಗೆ ಮೈಯ್ಯೊಡ್ಡಿ ನಿಂತಿದ್ದು ದಿನೇ ದಿನೇ ತುಕ್ಕು ಹಿಡಿಯಲಾರಂಭಿಸಿದೆ. ಮತ್ತೆ ಅದು ಸಂಚಾರಕ್ಕೆ ಮುಕ್ತವಾಗಿಸುವ ಯಾವುದೇ ಲಕ್ಷಣಗಳಿಲ್ಲ. ಹಾಗಾಗಿ ವಾಹನ ಚಿರನಿದ್ರೆಗೆ ಜಾರಿದೆ.
ಶ್ರದ್ಧಾಂಜಲಿ ವಾಹನ ಕೆಟ್ಟು ಹಲವಾರು ತಿಂಗಳಾಗಿದೆ. ವಾಹನದ ಕಂಡೀಷನ್ ಸರಿಯಾಗಿಲ್ಲ. ಪದೇ ಪದೇ ಕೆಟ್ಟು ನಿಲ್ಲುವುದು ಸಾಮಾನ್ಯವಾಗಿದೆ. ಸುಮ್ಮನೆ ಹಣ ವೆಚ್ಚವಾಗುತ್ತಿತ್ತು. ಈ ವಿಷಯವಾಗಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿದ್ದು ಹೊಸ ವಾಹನ ನೀಡುವುದಾಗಿ ತಿಳಿಸಿದೆ. ಬಡವರಿಗೆ ತೊಂದರೆಯಾಗದಂತೆ ಉಚಿತವಾಗಿ ಶವ ಸಾಗಿಸುವುದಕ್ಕೆ ಆಂಬ್ಯುಲೆನ್ಸ್‌ಗಳನ್ನೇ ಉಚಿತವಾಗಿ ಕಳುಹಿಸಿಕೊಡುತ್ತಿದ್ದೇವೆ.
- ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ, ಮಂಡ್ಯ