Asianet Suvarna News Asianet Suvarna News

ಅನ್‌ಲಾಕ್‌ ಬಳಿಕ ಜಂಗಲ್‌ ರೆಸಾರ್ಟ್‌ಗಳಿಗೆ ಮತ್ತೆ ಕಳೆ: 5 ಕೋಟಿ ವಹಿವಾಟು

ಕೊರೋನಾದಿಂದ ಕಳೆಗುಂದಿದ್ದ ರೆಸಾರ್ಟ್‌ಗಳಿಗೆ ಮರುಜೀವ| ರೆಸಾರ್ಟ್‌ಗಳು ಪುನಾರಂಭಗೊಂಡ ನಂತರ 7,962 ಮಂದಿ ಭೇಟಿ, 5 ಕೋಟಿ ವಹಿವಾಟು| ಕೊರೋನಾ ಹರಡದಂತೆ ಕ್ರಮ| ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ| 

More Than 5 Crore Rs Transaction in Jungle Resorts After Unlockgg
Author
Bengaluru, First Published Sep 16, 2020, 8:51 AM IST

ಬೆಂಗಳೂರು(ಸೆ.16): ಕೊರೋನಾ ಸೋಂಕು ಹರಡುವುದನ್ನು ನಿಲ್ಲಿಸುವ ಸಲುವಾಗಿ ಸ್ಥಗಿತಗೊಳಿಸಿದ್ದ ಅರಣ್ಯ ಇಲಾಖೆಯ ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ಗಳು (ಜೆಎಲ್‌ಆರ್‌) ಪುನಾರಂಭಗೊಂಡ ನಂತರ ಈವರೆಗೂ ಒಟ್ಟು 7,962 ಮಂದಿ ಭೇಟಿ ನೀಡಿದ್ದು, 5 ಕೋಟಿ ರು.ಗಳಿಗೂ ಹೆಚ್ಚು ವಹಿವಾಟು ನಡೆಸಿದೆ.

ಕೊರೋನಾ ಸೋಂಕು ಹರಡುತ್ತದೆ ಎಂಬ ಭೀತಿಯಿಂದ ಸರ್ಕಾರಿ ಸಂಸ್ಥೆಗಳು ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳನ್ನು ನಿಲ್ಲಿಸಲಾಗಿತ್ತು. ಅಲ್ಲದೆ, ಸಾವಿರಾರು ಕೋಟಿ ರು. ಮೌಲ್ಯದ ವಹಿವಾಟು ಸ್ಥಗಿತಗೊಂಡು ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಆದರೆ, ಕೊರೋನಾ ನಡುವೆ ಅರಣ್ಯ ಪ್ರದೇಶದ ಪರಿಸರ ಮತ್ತು ವನ್ಯಜೀವಿಗಳ ಜೊತೆ ದಿನ ಕಳೆಯಲು ಜನ ಹೆಚ್ಚು ಆಸಕ್ತಿ ತೋರಿದ್ದು, ಪರಿಸರ ಪ್ರವಾಸೋದ್ಯಮಕ್ಕೆ ನೆರವಾಗಿದೆ.

2020ರ ಮಾರ್ಚ್‌ 22 ರಿಂದ ಲಾಕ್‌ಡೌನ್‌ ಜಾರಿಯಿಂದ ಎಲ್ಲ ಜಂಗಲ್‌ ಲಾಡ್ಜ್‌ಗಳು ಸ್ಥಗಿತವಾಗಿದ್ದವು. ಬಳಿಕ ಏಪ್ರಿಲ್‌ ಮೊದಲ ವಾರದಿಂದ ಪುನರಾರಂಭವಾಗಿದ್ದು, ಈವರೆಗೂ ಒಟ್ಟು 5,04,35,942 ರು. ಹಣ ಸಂಗ್ರಹವಾಗಿದೆ. ಕಳೆದ ಆರ್ಥಿಕ ವರ್ಷದ ಸೆ.15ಕ್ಕೆ ಹೋಲಿಕೆ ಮಾಡಿದಲ್ಲಿ ಪ್ರಸಕ್ತ ವರ್ಷದಲ್ಲಿ ಪ್ರವಾಸಿಗರ ಭೇಟಿಯ ಪ್ರಮಾಣದಲ್ಲಿ ಶೇ.30 ರಷ್ಟು ಮಾತ್ರ ಕುಸಿದಿದೆ ಎಂದು ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ ಲಿಮಿಡೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಶರ್ಮಾ ವಿವರಿಸಿದರು.

ಪ್ರವಾಸಿಗರ ಸಂಖ್ಯೆ ವಿರಳ: ಇನ್ನೂ ತೆರೆಯದ ರೆಸ್ಟೋರೆಂಟ್‌, ಹೋಂಸ್ಟೇಗಳು

ಕೊರೋನಾ ಹರಡದಂತೆ ಕ್ರಮ:

ಕರ್ನಾಟಕ ರಾಜ್ಯ ಸೇರಿದಂತೆ ದೇಶದಾದ್ಯಂತ ಕೊರೋನಾ ಸೋಂಕು ಹರಡುತ್ತಿದೆ. ಆದರೆ, ಅರಣ್ಯ ಪ್ರದೇಶಗಳಲ್ಲಿನ ಜಂಗಲ್‌ ಲಾಡ್ಜ್‌ಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೊರೋನಾ ಲಕ್ಷಣಗಳು ಕಾಣಿಸಿಕೊಂಡವರನ್ನು ಪ್ರವಾಸಕ್ಕೆ ಅವಕಾಶ ನೀಡುತ್ತಿಲ್ಲ. ಜೊತೆಗೆ, ಪ್ರವಾಸಕ್ಕೆ ಬಂದವರ ಕುಟುಂಬಗಳನ್ನು ತಂಡಗಳನ್ನಾಗಿ ಪ್ರತ್ಯೇಕವಾಗಿರಿಸಲಾಗಿತ್ತು. ಈ ಎಲ್ಲ ಕ್ರಮಗಳಿಂದ ಕೊರೋನಾ ನಡುವೆ ಹೆಚ್ಚಿನ ಪ್ರಮಾಣದಲ್ಲಿ ಜನ ಪ್ರವಾಸಕ್ಕೆ ಬರಲು ಕಾರಣವಾಯಿತು ಎಂದು ಅವರು ವಿವರಿಸಿದರು.

ಮುಂಗಡ ಕಾಯ್ದಿರಿಸಿದ್ದ ಗ್ರಾಹಕರ ಬಿಡದ ಜೆಎಲ್‌ಆರ್‌:

ಲಾಕ್‌ಡೌನ್‌ ಜಾರಿಯಾಗುವುದಕ್ಕೂ ಮುನ್ನ ಕಬಿನಿ, ಬಂಡೀಪುರ, ನಾಗರಹೊಳೆ, ಬಿಳಿಗಿರಿರಂಗನ ಬೆಟ್ಟದ ಕೆ.ಗುಡಿ ಮತ್ತು ಭದ್ರಾ ಲಾಡ್ಜ್‌ಗಳಿಗೆ ಹೆಚ್ಚಿನ ಸಂಖ್ಯೆಯ ಜನ ಭೇಟಿ ನೀಡಲು ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಕೊರೋನಾ ಸೋಂಕು ಹರಡುತ್ತಿದ್ದಂತೆ ಅವುಗಳನ್ನು ರದ್ದು ಮಾಡಲು ಮುಂದಾಗಿದ್ದರು. ಅಂತಹ ಗ್ರಾಹಕರಿಗೆ ಮನವೊಲಿಸಿ ದಿನಾಂಕ ಮುಂದೂಡಲು ಸಲಹೆ ನೀಡಲಾಗಿತ್ತು ಎಂದರು.

ಕೊರೋನಾ ಲಾಕ್‌ಡೌನ್‌ನಿಂದ ಜನ ಮನೆಗಳಲ್ಲಿ ಉಳಿದಿದ್ದು ಬೇಸರಗೊಂಡಿದ್ದರು. ಪರಿಣಾಮ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯಗಳತ್ತ ಮುಖ ಮಾಡುತ್ತಿದ್ದಾರೆ. ಜೊತೆಗೆ, ಜಂಗಲ್‌ ಲಾಡ್ಜ್‌ಗಳಲ್ಲಿ ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿತ್ತು. ಪರಿಣಾಮ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರಲಾರಂಭಿಸಿದ್ದಾರೆ ಎಂದು ಜೆಎಲ್‌ಆರ್‌ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಶರ್ಮಾ ತಿಳಿಸಿದ್ದಾರೆ. 
 

Follow Us:
Download App:
  • android
  • ios