Covid Crisis: ರಾಜ್ಯದಲ್ಲಿ 230 ದಿನಗಳ ಗರಿಷ್ಠ ಕೇಸ್: ಪಾಸಿಟಿವಿಟಿ ಪ್ರಮಾಣ ಶೇ.15ಕ್ಕೆ ಏರಿಕೆ
ರಾಜ್ಯದಲ್ಲಿ ಶನಿವಾರ ಬರೋಬ್ಬರಿ 32,793 ಕೋವಿಡ್ ಪ್ರಕರಣಗಳು ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.15 ಮುಟ್ಟಿದೆ. ಏಳು ಮಂದಿ ಮೃತರಾಗಿದ್ದಾರೆ. 4273 ಮಂದಿ ಚೇತರಿಸಿಕೊಂಡಿದ್ದಾರೆ.
ಬೆಂಗಳೂರು (ಜ. 16): ರಾಜ್ಯದಲ್ಲಿ ಶನಿವಾರ ಬರೋಬ್ಬರಿ 32,793 ಕೋವಿಡ್ ಪ್ರಕರಣಗಳು (Covid19) ದಾಖಲಾಗಿದೆ. ರಾಜ್ಯದ ಪಾಸಿಟಿವಿಟಿ ದರ ಶೇ.15 ಮುಟ್ಟಿದೆ. ಏಳು ಮಂದಿ ಮೃತರಾಗಿದ್ದಾರೆ. 4273 ಮಂದಿ ಚೇತರಿಸಿಕೊಂಡಿದ್ದಾರೆ. ಜನವರಿ 1 ರಂದು 1,033 ಹೊಸ ಪ್ರಕರಣ ವರದಿಯಾಗಿದ್ದರೆ ಹದಿನೈದು ದಿನದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 32 ಸಾವಿರ ಮೀರಿದೆ.
ಹದಿನೈದು ದಿನದಲ್ಲಿ 9,386 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 1.69 ಲಕ್ಷಕ್ಕೆ ಜಿಗಿದಿದೆ. ಒಂದರೊಳಗೆ ಇದ್ದ ಪಾಸಿಟಿವಿಟಿ ದರ ಶೇ.15 ತಲುಪಿದೆ. ರಾಜ್ಯದಲ್ಲಿ 230 ದಿನಗಳ (7.5 ತಿಂಗಳ) ಗರಿಷ್ಠ ಪ್ರಕರಣ ದಾಖಲಾಗಿದೆ. ಮೇ 19 ರಂದು 34,281 ಪ್ರಕರಣ ದಾಖಲಾದ ಬಳಿಕದ ಗರಿಷ್ಠ ಪ್ರಕರಣ ಇದಾಗಿದೆ. ಅದೇ ರೀತಿ ಮೇ 28ರ ಬಳಿಕ ಮೊದಲ ಬಾರಿಗೆ ರಾಜ್ಯದ ಪಾಸಿಟಿವಿಟಿ ದರ ಶೇ.15 ಮುಟ್ಟಿದೆ.
ಬೆಂಗಳೂರು, ಇತರೆಡೆ ಭಾರೀ ಏರಿಕೆ: ಬೆಂಗಳೂರಿನಲ್ಲಿ 22,284 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು ಉಳಿದ ಹತ್ತು ಸಾವಿರಕ್ಕೂ ಹೆಚ್ಚು ಸೋಂಕಿತರು ರಾಜ್ಯದ ಬೇರೆ ಭಾಗಗಳಲ್ಲಿ ಪತ್ತೆಯಾಗಿದ್ದಾರೆ. ರಾಜ್ಯದ ಶನಿವಾರದ ಪ್ರಕರಣದಲ್ಲಿ ಬೆಂಗಳೂರಿನ ಪಾಲು ಶೇ.68 ರಷ್ಟಾಗಿದ್ದಾರೆ, ಇತರ ಜಿಲ್ಲೆಗಳ ಪಾಲು ಶೇ. 32ಕ್ಕೆ ಏರಿದೆ. ಶುಕ್ರವಾರ ಬೆಂಗಳೂರಿನ ಪಾಲು ಶೇ.70 ಇತ್ತು. ಅದಕ್ಕೂ ಮೊದಲು ಶೇ.80ರಷ್ಟುಪ್ರಕರಣಗಳು ರಾಜ್ಯ ರಾಜಧಾನಿಯಲ್ಲೇ ದಾಖಲಾಗುತ್ತಿತ್ತು.
Covid Crisis: 236 ದಿನದ ಬಳಿಕ ಬೆಂಗ್ಳೂರಲ್ಲಿ 20 ಸಾವಿರ ಅಧಿಕ ಜನಕ್ಕೆ ವೈರಸ್
ತುಮಕೂರಲ್ಲಿ ಮೊದಲ ಬಾರಿ 1000+: ಮೂರನೇ ಅಲೆಯಲ್ಲಿ ಬೆಂಗಳೂರು ಹೊರತುಪಡಿಸಿದರೆ ಸಾವಿರಕ್ಕಿಂತ ಹೆಚ್ಚು ಪ್ರಕರಣ ಮೊದಲ ಬಾರಿಗೆ ತುಮಕೂರು ಜಿಲ್ಲೆಯಲ್ಲಿ ಪತ್ತೆಯಾಗಿದೆ. ತುಮಕೂರು (1,326), ಹಾಸನ (968), ದಕ್ಷಿಣ ಕನ್ನಡ (792), ಮೈಸೂರು (729), ಮಂಡ್ಯ (718), ಧಾರವಾಡ (648), ಉಡುಪಿ (607) ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ವರದಿಯಾಗಿದೆ. ಯಾದಗಿರಿ 13, ಹಾವೇರಿ 17, ವಿಜಯಪುರ 76, ಚಾಮರಾಜನಗರ 93 ಜಿಲ್ಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ನೂರಕ್ಕಿಂತ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ.
ಬೆಂಗಳೂರು ನಗರದಲ್ಲಿ ಐವರು, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೋಂಕಿನಿಂದ ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 31.80 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 29.77 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 38,418 ಮಂದಿ ಮರಣವನ್ನಪ್ಪಿದ್ದಾರೆ.
164 ಪೊಲೀಸರಿಗೆ ಸೋಂಕು ದೃಢ: ಬೆಂಗಳೂರು (Bengaluru) ನಗರ ಪೊಲೀಸ್ (Police) ವಿಭಾಗದಲ್ಲಿ ಕೊರೋನಾ ಸೋಂಕು ಸ್ಫೋಟಗೊಂಡಿದ್ದು, ಶುಕ್ರವಾರ ಒಂದೇ ದಿನ 164 ಪೊಲೀಸರಿಗೆ ಕೊರೋನಾ(Coronavirus) ಸೋಂಕು ದೃಢಪಟ್ಟಿದೆ. ಈ ಮೂಲಕ ಕಳೆದ ನವೆಂಬರ್‌ನಿಂದ ಈವರೆಗೆ (ಒಟ್ಟು 75 ದಿನಗಳಲ್ಲಿ) ಕೊರೋನಾ ಸೋಂಕಿಗೆ ತುತ್ತಾದ ಪೊಲೀಸರ ಒಟ್ಟು ಸಂಖ್ಯೆ 504ಕ್ಕೆ ಏರಿಕೆಯಾಗಿದೆ.
Corona Lockdown: ಲಾಕ್‌ಡೌನ್ ಪ್ರಸ್ತಾವನೆ ಇಲ್ಲ: ಗೃಹ ಸಚಿವ ಆರಗ ಸ್ಪಷ್ಟನೆ
ನಗರದಲ್ಲಿ ಕಳೆದೊಂದು ವಾರದಿಂದ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿವೆ. ಈ ನಡುವೆ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಶುಕ್ರವಾರ ಒಂದೇ ದಿನ ಪಶ್ಚಿಮ ವಿಭಾಗದಲ್ಲಿ 36 ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅದರಲ್ಲಿಯೂ ಎರಡು ಡೋಸ್ ಲಸಿಕೆ (Vaccine) ಪಡೆದಿರುವ ಪೊಲೀಸರಲ್ಲೇ ಸೋಂಕು ಕಾಣಿಸಿಕೊಂಡಿದೆ.
ಕಡಿಮೆ ಲಕ್ಷಣ ಇರುವ ಸೋಂಕಿತ ಪೊಲೀಸರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಗಂಭೀರ ಲಕ್ಷಣವಿದ್ದವರು ಪೊಲೀಸರಿಗಾಗಿಯೇ ನಿರ್ಮಿಸಿರುವ ಕೊರೋನಾ ಆರೈಕೆ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೊರೋನಾ ಮುಂಚೂಣಿ ಕಾರ್ಯಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮುನ್ನೆಚ್ಚರಿಕಾ ಡೋಸ್(ಬೂಸ್ಟರ್ ಡೋಸ್) ನೀಡಲಾಗುತ್ತಿದೆ. ಇದರ ನಡುವೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಪೊಲೀಸರಲ್ಲಿ ಆತಂಕ ಹೆಚ್ಚಿಸಿದೆ.