ಬೆಂಗಳೂರು [ನ.30]:  ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ‘ವಿಐಪಿ ಹನಿಟ್ರ್ಯಾಪ್‌’ ಜಾಲದಲ್ಲಿ ಶಾಸಕರು ಹಾಗೂ ಉದ್ಯಮಿಗಳು ಸೇರಿದಂತೆ ಸುಮಾರು 20 ಮಂದಿ ಸಿಲುಕಿದ್ದು, ‘ಸಂತ್ರಸ್ತ’ ಗಣ್ಯರ ಹಿಂಜರಿಕೆಯಿಂದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ದ ತನಿಖೆಗೆ ಹಿನ್ನಡೆಯಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಮರ್ಯಾದೆಗೆ ಹೆದರಿ ಕೆಲವು ಉದ್ಯಮಿಗಳು, ಹನಿಟ್ರ್ಯಾಪ್‌ ದಂಧೆಯ ಸೂತ್ರಧಾರ ರಾಘವೇಂದ್ರನಿಗೆ ಹಣ ಕೊಟ್ಟು ವಿವಾದ ಬಗೆಹರಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇದುವರೆಗೆ ಹನಿಟ್ರ್ಯಾಪ್‌ ಸಂಬಂಧ ಉತ್ತರ ಕರ್ನಾಟಕ ಭಾಗದ ಶಾಸಕರೊಬ್ಬರು ನೀಡಿದ ದೂರಿನ ಮೇರೆಗೆ ಒಂದು ಎಫ್‌ಐಆರ್‌ ಮಾತ್ರ ದಾಖಲಾಗಿದೆ. ಆದರೆ ಈ ಜಾಲದ ವಿರುದ್ಧ ಕಾನೂನಾತ್ಮಕ ಹೋರಾಟ ಮುಂದುವರೆಸಿದರೆ ತಮ್ಮ ಬಣ್ಣ ಬಯಲಾಗುತ್ತದೆ ಎಂದು ಭೀತಿಗೊಂಡಿರುವ ‘ಸಂತ್ರಸ್ತ’ ಗಣ್ಯರು, ಬ್ಲ್ಯಾಕ್‌ಮೇಲ್‌ ಬಗ್ಗೆ ಅಧಿಕೃತವಾಗಿ ಪೊಲೀಸರಿಗೆ ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿಂಜರಿಕೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಒಂದೇ ಎಫ್‌ಐಆರ್‌ನಡಿ ಪ್ರಕರಣಕ್ಕೆ ಇತಿಶ್ರೀ ಹಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಯಾಧುನಿಕ ಕ್ಯಾಮೆರಾ ಖರೀದಿ:

ಹಲವು ವರ್ಷಗಳಿಂದ ವೇಶ್ಯಾವಾಟಿಕೆ ದಂಧೆಕೋರರ ಜತೆ ಸಂಪರ್ಕ ಹೊಂದಿದ್ದ ರಾಘವೇಂದ್ರ, ಆ ಜಾಲ ಬಳಸಿಕೊಂಡು ಸುಲಭವಾಗಿ ಹಣ ಸಂಪಾದನೆಗಿಳಿದಿದ್ದ. ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿದಂತೆ ಗಣ್ಯರ ದೌರ್ಬಲ್ಯವನ್ನೇ ತನ್ನ ಲಾಭಕ್ಕೆ ಬಳಸಿಕೊಂಡ ರಾಘವೇಂದ್ರ, ಲೈಂಗಿಕ ಆಸಕ್ತಿ ಹೊಂದಿರುವ ಗಣ್ಯರಿಗೆ ಮಹಿಳೆಯರನ್ನು ಪರಿಚಯಿಸಿ ಬಳಿಕ ಹನಿಟ್ರ್ಯಾಪ್‌ ಬಲೆಗೆ ಬೀಳಿಸುತ್ತಿದ್ದ. ಇದಕ್ಕಾಗಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಆತ ಖರೀದಿಸಿದ್ದ ಎಂದು ಮೂಲಗಳು ತಿಳಿಸಿವೆ.

ಈಗ ಲೈಂಗಿಕ ವಿವಾದದ ಸುಳಿಗೆ ಸಿಲುಕಿರುವ ಉತ್ತರ ಕರ್ನಾಟಕ ಭಾಗದ ಸಂತ್ರಸ್ತ ಶಾಸಕನನ್ನು ಖೆಡ್ಡಾಕ್ಕೆ ಬೀಳಿಸಲು ರಾಘವೇಂದ್ರ ತಂಡ ಆರು ತಿಂಗಳ ಹಿಂದೆಯೇ ಸಂಚು ರೂಪಿಸಿತ್ತು. ಶಾಸಕರ ಭವನದಲ್ಲಿ ಶಾಸಕರ ಗಾಳ ಹಾಕಿದ ಬಳಿಕ ರಾಘವೇಂದ್ರ, ಆ ಶಾಸಕನ ಸರಸ ಸಲ್ಲಾಪದ ಕ್ಷಣಗಳನ್ನು ಗುಪ್ತವಾಗಿ ಚಿತ್ರೀಕರಿಸುವ ಸಲುವಾಗಿ ವ್ಯಾನಿಟಿ ಬ್ಯಾಗ್‌ ಮತ್ತು ಕನ್ನಡಕದಲ್ಲಿ ಅಡಗಿಸಿಡುವ ಕ್ಯಾಮೆರಾಗಳನ್ನು ಖರೀದಿಸಿದ್ದ. ಇವುಗಳನ್ನು ಉಪಯೋಗಿಸಿಯೇ ಕೊನೆಗೆ ಆ ಶಾಸಕನ 45 ನಿಮಿಷಗಳ ವಿಡಿಯೋ ಚಿತ್ರೀಕರಿಸಿಕೊಂಡಿದ್ದರು ಎಂದು ಸಿಸಿಬಿ ಮೂಲಗಳು ಹೇಳಿವೆ.

ಈಗ ರಾಘವೇಂದ್ರನ ಬಳಿ ಪತ್ತೆಯಾಗಿರುವ ವಿಡಿಯೋಗಳ ಕುರಿತು ತನಿಖೆ ನಡೆದಿದೆ. ಯಾವ ಸಂದರ್ಭದಲ್ಲಿ ಆ ಗಣ್ಯರ ಪರಿಚಯವಾಗಿದೆ, ಎಲ್ಲಿ ಕೃತ್ಯ ನಡೆದಿದೆ, ಹಣಕಾಸು ವ್ಯವಹಾರ ಹೇಗೆ ನಡೆದಿದೆ ಹೀಗೆ ಪ್ರತಿಯೊಂದರ ಮಾಹಿತಿಯನ್ನು ಹೆಕ್ಕಲಾಗುತ್ತಿದೆ. ಆದರೆ ಸಂತ್ರಸ್ತ ಗಣ್ಯರೇ ದೂರು ನೀಡಲು ಮುಂದು ಬರುತ್ತಿಲ್ಲ ಎಂದು ಅಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಸಿಮ್‌ ಬಳಕೆ:

ಹನಿಟ್ರ್ಯಾಪ್‌ ವಿಡಿಯೋಗಳನ್ನು ಮುಂದಿಟ್ಟು ತಮ್ಮ ಬಲೆಗೆ ಬಿದ್ದಿರುವ ವ್ಯಕ್ತಿಗಳಿಂದ ಕೋಟ್ಯಂತರ ಹಣ ಸುಲಿಗೆಗೆ ಸಂಚು ರೂಪಿಸಿದ್ದ ರಾಘವೇಂದ್ರನ ತಂಡವು, ಪ್ರತಿಯೊಬ್ಬರ ಜತೆ ವ್ಯವಹಾರಕ್ಕೆ ಪ್ರತ್ಯೇಕ ಸಿಮ್‌ ಬಳಸಿತ್ತು ಎಂದು ಸಿಸಿಬಿ ಮೂಲಗಳು ಹೇಳಿವೆ.

ಉತ್ತರ ಕರ್ನಾಟಕ ಭಾಗದ ಶಾಸಕರ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಸಿಸಿಬಿ, ದಾವಣಗೆರೆ ಹಾಗೂ ಬೆಂಗಳೂರಿನ ಪರಪ್ಪನ ಅಗ್ರಹಾರ ಸಮೀಪದ ರಾಘವೇಂದ್ರನ ಮನೆ, ಗಿರಿನಗರದ ಪುಪ್ಪಾ ನಿವಾಸ ಸೇರಿದಂತೆ ಕೆಲವು ಕಡೆ ದಾಳಿ ನಡೆಸಿತ್ತು. ಈ ವೇಳೆ ಹನಿಟ್ರ್ಯಾಪ್‌ ಬಲೆಗೆ ಬಿದ್ದಿದ್ದವರ ವಿಡಿಯೋಗಳು ಪೊಲೀಸರಿಗೆ ಸಿಕ್ಕಿವೆ. ಇವುಗಳನ್ನು ಪರಿಶೀಲಿಸಿದ ಪೊಲೀಸರು, ವಿಚಾರಣೆ ವೇಳೆ ಆರೋಪಿಗಳಿಂದ ಕೃತ್ಯಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಕೃತ್ಯಕ್ಕಾಗಿಯೇ ರಾಘವೇಂದ್ರ 7 ಮೊಬೈಲ್‌ ಹಾಗೂ 13ಕ್ಕೂ ಹೆಚ್ಚು ಸಿಮ್‌ಗಳನ್ನು ಬಳಸುತ್ತಿದ್ದ. ತನ್ನ ಸುಳಿವು ಸಿಗದಂತೆ ಎಚ್ಚರಿಕೆ ವಹಿಸಿದ್ದ ಆತ, ಪ್ರತಿ ವ್ಯವಹಾರ ಮುಗಿದ ಬಳಿಕ ಸಿಮ್‌ಗಳನ್ನು ನಾಶ ಮಾಡುತ್ತಿದ್ದ. ಹೀಗಾಗಿ ದಂಧೆಕೋರರ ಹಿಂದಿನ ಕೃತ್ಯಗಳ ಕುರಿತು ಪುರಾವೆಗಳು ಅಲಭ್ಯವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೈಬರ್‌ ಕ್ರೈಂ ಪೊಲೀಸ್‌ ಠಾಣೆಗೆ ಹನಿಟ್ರ್ಯಾಪ್‌ ಬಗ್ಗೆ ಶಾಸಕರೊಬ್ಬರು ದೂರು ನೀಡಿದ್ದರು. ಈಗಾಗಲೇ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಬಂಧನವಾಗಿದೆ. ಆದರೆ ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಆ ಕುರಿತು ಹೆಚ್ಚಿನ ಮಾಹಿತಿ ನೀಡಲ್ಲ.

- ಭಾಸ್ಕರ್‌ ರಾವ್‌, ಪೊಲೀಸ್‌ ಆಯುಕ್ತರು, ಬೆಂಗಳೂರು ನಗರ