ವಿಧಾನಸಭೆ (ಡಿ.10):  ರಾಜ್ಯದಲ್ಲಿ 2018-19ರ ಅವಧಿಯಲ್ಲಿ ಆರೋಗ್ಯ ಇಲಾಖೆ, ನರಗಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 2,809 ಕೋಟಿ ರು. ನಷ್ಟಉಂಟಾಗಿದೆ ಎಂದು 2019ನೇ ಸಾಲಿನ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿಯಲ್ಲಿ ತಿಳಿಸಿದೆ.

ಅಲ್ಲದೆ, ‘ಆರೋಗ್ಯ ಕವಚ-108’ ಆ್ಯಂಬುಲೆನ್ಸ್‌ ಸೇವೆಯಲ್ಲಿ ತೀವ್ರ ಲೋಪಗಳು ಉಂಟಾಗಿವೆ. ತುರ್ತು ಪರಿಸ್ಥಿತಿಯಲ್ಲಿ ಶೇ.28 ಪ್ರಕರಣಗಳಲ್ಲಿ ನಿರ್ದಿಷ್ಟಸಮಯಕ್ಕೆ ಆ್ಯಂಬುಲೆನ್ಸ್‌ ಸೇವೆ ತಲುಪಿಲ್ಲ. ಇನ್ನು ಹೃದಯ ಸಮಸ್ಯೆ, ಪಾಶ್ರ್ವವಾಯು, ಅಪಘಾತ ಪ್ರಕರಣಗಳಲ್ಲಿ ಸುಧಾರಿತ ಜೀವರಕ್ಷಕ ವ್ಯವಸ್ಥೆಯಿರುವ ಆ್ಯಂಬುಲೆನ್ಸ್‌ ಕಳುಹಿಸಬೇಕಿದ್ದರೂ, ಶೇ.75 ಪ್ರಕರಣಗಳಲ್ಲಿ ಸಾಮಾನ್ಯ ಆ್ಯಂಬುಲೆನ್ಸ್‌ ಕಳುಹಿಸಲಾಗಿದೆ.

ಇಷ್ಟೆಲ್ಲಾ ನಿಯಮ ಉಲ್ಲಂಘನೆಯಾದರೂ ಸರ್ಕಾರ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಎಂಒಯು ಒಪ್ಪಂದ ಕಡಿದುಕೊಂಡಿಲ್ಲ. ಇನ್ನು ಮುಂದಾದರೂ ಒಪ್ಪಂದ ಮಾಡಿಕೊಳ್ಳುವಾಗ ಕಠಿಣ ಷರತ್ತುಗಳನ್ನು ವಿಧಿಸಬೇಕು ಎಂದು ಶಿಫಾರಸು ಮಾಡಿದೆ.

ಭೂ ಸುಧಾರಣಾ ಕಾಯ್ದೆ ಅಂಗೀಕಾರ: ಕೈ ಸಭಾತ್ಯಾಗ, ತೆಪ್ಪಗೆ ಕುಳಿತ್ತಿದ್ದ ಜೆಡಿಎಸ್‌ ಸದಸ್ಯರು ..

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ಸಾಮಾನ್ಯ ಮತ್ತು ಸಾಮಾಜಿಕ ವಲಯ’ ಕುರಿತು 2019ರ ಮಾಚ್‌ರ್‍ಗೆ ಕೊನೆಗೊಂಡ 2018-19ನೇ ಸಾಲಿನ ಸಿಎಜಿ ವರದಿಯನ್ನು ಬುಧವಾರ ಸದನದಲ್ಲಿ ಮಂಡಿಸಿದರು.

ವರದಿಯಲ್ಲಿ ಸಿಎಜಿ ಲೆಕ್ಕ ಪರಿಶೋಧನೆ ನಡೆಸಿರುವ ವಿವಿಧ ಇಲಾಖೆಗಳಲ್ಲಿ ಶಂಕಿತ ಮೋಸ, ಹೆಚ್ಚುವರಿ ಪಾವತಿ ಮಾಡಿರುವುದು, ಅನಗತ್ಯ ದುಂದುವೆಚ್ಚ, ಹಂಚಿಕೆಯಲ್ಲಿ ಅಕ್ರಮ, ಆಂತರಿಕ ನಿಯಂತ್ರಣದ ಕೊರತೆ, ನಿಯಮಗಳ ಅನುಷ್ಠಾನದ ಕೊರತೆ ಸೇರಿ ವಿವಿಧ ಕಾರಣಗಳಿಂದ 2,809 ಕೋಟಿ ರು. ಬೊಕ್ಕಸಕ್ಕೆ ನಷ್ಟಉಂಟಾಗಿರುವುದು ಪತ್ತೆಯಾಗಿದೆ ಎಂದು ಹೇಳಿದೆ.

ಆರೋಗ್ಯ ಕವಚ- 108 ಸೇವೆ ನ್ಯೂನತೆಗಳು:

108 ಸೇವೆಯಲ್ಲಿ ಶೇ.99ರಷ್ಟುವೈದ್ಯಕೀಯ ತುರ್ತು ಕರೆಗಳು ಬಂದಿವೆ. ಯೋಜನೆಯಡಿ ಆ್ಯಂಬುಲೆನ್ಸ್‌ ಸೇವೆಯು ರೋಗಿಯು ನಗರ ಪ್ರದೇಶದಲ್ಲಿದ್ದರೆ 20 ನಿಮಿಷ, ಗ್ರಾಮೀಣ ಭಾಗದಲ್ಲಾದರೆ 30 ನಿಮಿಷದ ಒಳಗಾಗಿ ತಲುಪಬೇಕು ಎಂಬ ನಿಯಮವಿದೆ. ಆದರೆ, ಎಂಇಎಸ್‌ ವ್ಯವಸ್ಥೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ವರ್ಗೀಕರಣದ ಮಾಹಿತಿಯೇ ಇಲ್ಲ. ಇನ್ನು ಒಟ್ಟು ಪ್ರಕರಣಗಳನ್ನು ಪರಿಶೀಲಿಸಿದರೆ ಶೇ.72 ರಷ್ಟುಪ್ರಕರಣಗಳಲ್ಲಿ ಮಾತ್ರ 30 ನಿಮಿಷಗಳಲ್ಲಿ ಆ್ಯಂಬುಲೆನ್ಸ್‌ ತಲುಪಿದೆ.

ಹೃದಯ ಸಂಬಂಧಿ, ಉಸಿರಾಟ, ಪಾಶ್ರ್ವವಾಯುವಿನಂತಹ ಗಂಭೀರ ಪ್ರಕರಣಗಳಲ್ಲಿ 10 ನಿಮಿಷದ ಒಳಗಾಗಿ ಆ್ಯಂಬುಲೆನ್ಸ್‌ ಸ್ಪಂದಿಸಬೇಕು. ಶೇ.63 ಪ್ರಕರಣಗಳಲ್ಲಿ 10 ನಿಮಿಷಕ್ಕಿಂತ ವಿಳಂಬವಾಗಿದೆ. ಆ್ಯಂಬುಲೆನ್ಸ್‌ಗಳು ಜನನಿಬಿಡ ಅಥವಾ ಅಗತ್ಯವಿರುವ ಪ್ರದೇಶದಲ್ಲಿ ನಿಲ್ಲಿಸದೆ ಎಲ್ಲಾ ಆ್ಯಂಬುಲೆನ್ಸ್‌ಗಳನ್ನು ಆಸ್ಪತ್ರೆಯಲ್ಲೇ ನಿಲ್ಲಿಸಿಕೊಂಡಿರುವುದು ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟಿದೆ.

ಸಿಬ್ಬಂದಿ ಕೊರತೆ:  ಆ್ಯಂಬುಲೆನ್ಸ್‌ ಚಾಲಕರು, ತುರ್ತು ಪರಿಸ್ಥಿತಿ ನಿರ್ವಹಣಾ ತಂತ್ರಜ್ಞರ ಹುದ್ದೆಗಳಲ್ಲಿ ಶೇ.20 ಹಾಗೂ ಶೇ.21 ರಷ್ಟುಹುದ್ದೆ ಖಾಲಿ ಇದ್ದವು. ನೂರಾರು ಆ್ಯಂಬುಲೆನ್ಸ್‌ಗಳು ಸೇವೆ ನೀಡದೆ ನಿಲ್ಲುವಂತಾಗಿತ್ತು. ಸೇವೆಗಳಲ್ಲಿನ ನ್ಯೂನ್ಯತೆಗಳನ್ನು ಉಲ್ಲೇಖಿಸಿ 10 ವರ್ಷಗಳ ಅವಧಿಗೆ ಮೊದಲೇ ಒಪ್ಪಂದ ರದ್ದುಪಡಿಸಿಕೊಳ್ಳಲು ಎಂಒಯುನಲ್ಲಿ ಅವಕಾಶವಿದೆ. ಆದರೂ, ಕಂಪನಿಯನ್ನು ಬದಲಿಸಲು ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ಉಪಕರಣ ಖರೀದಿಯಲ್ಲಿ ಅಕ್ರಮ:  ಇನ್ನು ಖರೀದಿ ಮಾಡದ ಉಪಕರಣಗಳಿಗೂ ಹಣ ನೀಡುವ ಮೂಲಕ ಅಕ್ರಮ ಮಾಡಲಾಗಿದೆ. ಉದಾ: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ತೆಯ ನಿರ್ದೇಶಕರು ಎಸ್‌ಸಿಪಿ,ಟಿಎಸ್‌ಪಿ ನಿಧಿಯಿಂದ ಇಂಪ್ಲಾಂಟ್‌ ಉಪಕರಣ ಖರೀದಿಗೆ 64 ಲಕ್ಷ ರು. ಮೌಲ್ಯದ ಚೆಕ್‌ ನೀಡಿದ್ದರು. ಇದಕ್ಕೆ ಯಾರೂ ಬೇಡಿಕೆ ಸಲ್ಲಿಸಿರಲಿಲ್ಲ ಹಾಗೂ ಅಂತಹ ಯಾವುದೇ ಉಪಕರಣ ಸರಬರಾಜೂ ಆಗಿಲ್ಲ.

ಬಿಡಿಎನಲ್ಲಿ ವ್ಯಾಪಕ ಅಕ್ರಮ:

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಿಯಮ ಬಾಹಿರವಾಗಿ ಪರ್ಯಾಯ ನಿವೇಶನ ಹಂಚಿಕೆ ಮಾಡುವ ಮೂಲಕ 10.24 ಕೋಟಿ ರು. ಅಕ್ರಮ ಎಸಗಿದ್ದಾರೆ. ಇನ್ನು ಬಿಡಿಎ 307 ಒ್ರಕರಣಗಳಲ್ಲಿ ಒಟ್ಟು 8.55 ಕೋಟಿ ರು. ಪಾವತಿಸಬೇಕಿರುವ ಮೊತ್ತವನ್ನು ಎರಡು ಬಾರಿ ಪಾವತಿಸಲಾಗಿದೆ. ಇದರಲ್ಲಿ 12.11 ಲಕ್ಷ ರು. ಹೊರತುಪಡಿಸಿ ಉಳಿದೆಲ್ಲವನ್ನೂ ವಸೂಲಿ ಮಾಡಿದ್ದೇವೆ ಎಂದು ಬಿಡಿಎ ವಾದಿಸಿದರೂ 1.14 ಕೋಟಿ ರು.ಗೆ ಲೆಕ್ಕ ನೀಡಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

ಮೇವು ಖರೀದಿಯಲ್ಲಿ ಹಗರಣ?

2018-19ನೇ ಸಾಲಿನಲ್ಲಿ ರಾಜ್ಯದಲ್ಲಿ ಮೇವು ಖರೀದಿಯಲ್ಲಿ ಹಗರಣ ನಡೆದಿದೆಯೇ ಎಂಬ ಪ್ರಶ್ನೆಯನ್ನು ಸಿಎಜಿ ವರದಿ ಹುಟ್ಟು ಹಾಕಿದೆ.

ಸಿಎಜಿ ಪ್ರಕಾರ, ಅಧಿಕಾರಿಗಳು ಮೇವು ಸಾಗಣೆಗೆ ಬಳಸಿರುವುದಾಗಿ ನೀಡಿರುವ ವಾಹನಗಳ ಸಂಖ್ಯೆಯ ವಾಹನಗಳು ಇ-ನೋಂದಣಿಯಲ್ಲಿ ಕಂಡುಬಂದಿಲ್ಲ. ಇನ್ನು ಸರಕು ಸಾಗಣೆ ವಾಹನಗಳಲ್ಲದ ವಾಹನಗಳ ಸಂಖ್ಯೆಯನ್ನೂ ನೀಡಲಾಗಿದೆ. ಹೀಗಾಗಿ 9.38 ಲಕ್ಷ ರು. ಸಾರಿಗೆ ವೆಚ್ಚದಲ್ಲಿ ಸಂಶಯಾಸ್ಪದ ವಂಚನೆ ಕಂಡುಬಂದಿದೆ ಎಂದು ಸಿಎಜಿ ಹೇಳಿದೆ. ಇದರಿಂದ ಮೇವು ಖರೀದಿಯಲ್ಲೂ ಅಕ್ರಮದ ವಾಸನೆ ಕಂಡು ಬಂದಿದೆ.

ಇನ್ನು ಕೊಳ್ಳೆಗಾಲದ ತಹಸೀಲ್ದಾರ್‌ ಮೇವು ಖರೀದಿಗೆ ತಪ್ಪು ದರ ಅಳವಡಿಸಿಕೊಂಡು 77.51 ಲಕ್ಷ ರು. ಹೆಚ್ಚು ಪಾವತಿಸಿದ್ದಾರೆ ಎಂದು ಸಿಎಜಿ ಹೇಳಿದೆ.