ಬೆಂಗಳೂರು, (ಡಿ.09): ವಿವಾದಿತ ಭೂ ಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಕೊನೆಗೂ ಸದನದಲ್ಲಿ ಇಂದು (ಬುಧವಾರ) ಒಪ್ಪಿಗೆ ದೊರೆಯಿತು. 

ಇದಕ್ಕೂ ಮುನ್ನ ಕಂದಾಯ ಸಚಿವ ಆರ್.ಅಶೋಕ್ ಮಂಡಿಸಿದ ಭೂ ಸುಧಾರಣೆ ತಿದ್ದುಪಡಿ ವಿಧೇಯಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿತು.  ಈ ವೇಳೆ ವಿಧೇಯಕ್ಕೆ ಬೆಂಬಲಿಸಿದ್ದ ಜೆಡಿಎಸ್ ನಾಯಕರುಗಳ ಸಹ ತೆಪ್ಪಗೆ ಕುಳಿತ್ತಿದ್ದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕಾರ: ಜೆಡಿಎಸ್-ಬಿಜೆಪಿ ಮೈತ್ರಿಗೆ ನಾಂದಿ...!

 ವಿಧೇಯಕಕ್ಕೆ ಕೆಲವು ತಿದ್ದುಪಡಿಗಳನ್ನು ಮಂಡಿಸಿದ ಎಚ್.ಕೆ.ಪಾಟೀಲ್ ಕರ್ನಾಟಕದವರಿಗೆ ಮಾತ್ರ ಜಮೀನು ಖರೀದಿಸಲು ಹಾಗೂ ಅನ್ಯ ರಾಜ್ಯದವರು ಜಮೀನು ಖರೀದಿಸಿದರೆ ಅದನ್ನು ರದ್ದುಪಡಿಸುವ ಅಧಿಕಾರ ನೀಡಿ ಎಂದು ತಿದ್ದುಪಡಿ ಮಂಡಿಸಿದರು. ತಿದ್ದುಪಡಿಗಳೊಂದಿಗೆ ವಿಧೇಯಕ ಪರ್ಯಾಲೋಚನೆ ಮಾಡಬೇಕೆಂದು ಒತ್ತಾಯಿಸಿದರು.

ತಿದ್ದುಪಡಿ ಮಂಡನೆಗೆ ವಿರೋಧ ವ್ಯಕ್ತಪಡಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಒಮ್ಮೆ ವಿಧೇಯಕ ಅಂಗೀಕಾರವಾದ ನಂತರ ತಿದ್ದುಪಡಿಗೆ ಅವಕಾಶವಿಲ್ಲ. ವಿಧಾನಪರಿಷತ್‌ನಲ್ಲಿ ಆಗಿರುವ ತಿದ್ದುಪಡಿಗೆ ಸೀಮಿತವಾಗಿದೆ. ಎಚ್.ಕೆ ಪಾಟೀಲ್ ಅವರು ತಂದಿರುವ ತಿದ್ದುಪಡಿಗೆ ಅವಕಾಶವಿಲ್ಲ ಎಂದರು. ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಸಚಿವ ಆರ್.ಅಶೋಕ್ ಇದಕ್ಕೆ ದನಿಗೂಡಿಸಿದರು.

ಭೂ ಸುಧಾರಣಾ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಎಚ್‌ಡಿಕೆ...!

ಈ ನಡುವೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಎಚ್.ಕೆ.ಪಾಟೀಲ್ ಅವರು ತಂದಿರುವ ತಿದ್ದುಪಡಿ ಪ್ರಸ್ತಾವನೆ ನಿಯಮಗಳಡಿ ಬರುವುದಿಲ್ಲ ಹಾಗಾಗಿ ತಿರಸ್ಕಾರ ಮಾಡಲಾಗಿದೆ ಎಂದು ತೀರ್ಮಾನ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರೊಂದಿಗೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಆಗ ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದಾಗಿ ಧ್ವನಿಮತದ ಅನುಮೋದನೆ ದೊರೆಯಿತು. ಮತ್ತೊಂದೆಡೆ ನಿನ್ನೆ (ಮಂಗಳವಾರ) ವಿಧಾನಪರಿತ್‌ನಲ್ಲಿ ಸರ್ಕಾರದ ಪರವಾಗಿ ಈ ವಿಧೇಯಕಕ್ಕೆ ಬೆಂಬಲ ನೀಡಿದ್ದ ಜೆಡಿಎಸ್ ಸದಸ್ಯರು ತುಟಿ ಬಿಚ್ಚದೇ ಮೌನಕ್ಕೆ ಶರಣಾಗಿದ್ದರು.