ವಿಧಾನಸಭೆ [ಅ.12]:  ನೆರೆಗೆ ತುತ್ತಾಗಿರುವ ಪ್ರದೇಶಗಳಲ್ಲಿನ ಅವಿಭಕ್ತ ಕುಟುಂಬಗಳ ಸದಸ್ಯರು ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ನೆರವು... ಆ ಭಾಗದಲ್ಲಿ ಶಿಥಿಲಗೊಂಡಿರುವ ಶಾಲೆಗಳ ದುರಸ್ತಿಗೆ 500 ಕೋಟಿ ರು. ವೆಚ್ಚಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶಕ್ಕೆ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆಯ (ಎನ್‌ಡಿಆರ್‌ಎಫ್‌) ನಿಯಮಗಳನ್ನು ಸಡಿಲಗೊಳಿಸಿ ಹೆಚ್ಚುವರಿಯಾಗಿ 10 ಸಾವಿರ ರು.ಗಳ ಪರಿಹಾರ...

ಇವು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನೆರೆಪೀಡಿತ ಪ್ರದೇಶಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಮಾಡಿರುವ ಘೋಷಣೆಗಳು.

ಶುಕ್ರವಾರ ನೆರೆ ಕುರಿತಂತೆ ನಡೆದ ಚರ್ಚೆಗೆ ಉತ್ತರಿಸಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಸುಮಾರು 22 ಜಿಲ್ಲೆಗಳು ನೆರೆಗೆ ತುತ್ತಾಗಿದ್ದು, ಲಕ್ಷಾಂತರ ಜನ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತಹ ಮನೆಗಳಲ್ಲಿ ಅವಿಭಕ್ತ ಕುಟುಂಬಗಳಿದ್ದು, ಆ ಕುರಿತು ದಾಖಲೆಗಳನ್ನು ಒದಗಿಸಿದಲ್ಲಿ ಪ್ರತಿ ಕುಟುಂಬವು ಪ್ರತ್ಯೇಕವಾಗಿ ಮನೆಗಳನ್ನು ನಿರ್ಮಿಸಿಕೊಳ್ಳಲು ತಲಾ ಐದು ಲಕ್ಷ ರು. ಪರಿಹಾರ ಮೊತ್ತ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಜೊತೆಗೆ, ಸರ್ಕಾರ ಈಗಾಗಲೇ ಜಿಲ್ಲಾಧಿಕಾರಿಗಳಿಂದ ಪಡೆದಿರುವ ವರದಿಯಲ್ಲಿ ತಪ್ಪಿಹೋಗಿರುವ ಕುಸಿದ ಮನೆಗಳಿದ್ದು, ಅವುಗಳ ಕುರಿತಂತೆ ದಾಖಲೆಗಳೊಂದಿಗೆ ಮನವಿ ಮಾಡಿದಲ್ಲಿ ಅಂತಹ ಮನೆಗಳ ದುರಸ್ತಿಗೆ ಪರಿಹಾರ ನೀಡಲಾಗುವುದು ಎಂದರು.

ನೆರೆಯಲ್ಲಿ ಮನೆ ಕಳೆದುಕೊಂಡಿದ್ದು, ಅಲ್ಲಿ ನೆಲೆಸಲು ಸಾಧ್ಯವೇ ಇಲ್ಲದ ಕುಟುಂಬಗಳಿಗೆ ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ 95 ಸಾವಿರ ರು. ಮಾತ್ರ ಪರಿಹಾರ ನೀಡಲು ಅವಕಾಶವಿದೆ. ಆದರೆ, ಅದನ್ನು ಮೀರಿ ಪ್ರತಿ ಮನೆಗೆ ಐದು ಲಕ್ಷ ರು. ಪರಿಹಾರ ನೀಡಲು ಮುಂದಾಗಿದ್ದೇವೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಪರಿಹಾರ ನೀಡುತ್ತಿದ್ದೇವೆ. ಅಲ್ಲದೆ, ಈಗಾಗಲೇ ಮನೆ ನಿರ್ಮಾಣದ ಅಡಿಪಾಯ ಕಾಮಗಾರಿಗೆ ಒಂದು ಲಕ್ಷ ರು. ಪರಿಹಾರ ಬಿಡುಗಡೆ ಮಾಡಿದ್ದೇವೆ. ಕುಸಿದಿರುವ ಎ ಮತ್ತು ಬಿ ವರ್ಗದ ಮನೆಗಳಿಗೆ ಐದು ಲಕ್ಷ ರು. ಹಾಗು ಸಿ ಕೆಟಗಿರಿ ಮನೆಗಳಿಗೆ 50 ಸಾವಿರ ರು.ಗಳನ್ನು ನೀಡಲು ಸೂಚನೆ ನೀಡಿದ್ದೇನೆ ಎಂದು ಅವರು ವಿವರಿಸಿದರು.

ಕೃಷಿ ಭೂಮಿಗೆ 10 ಸಾವಿರ ರು. ಹೆಚ್ಚುವರಿ ಪರಿಹಾರ:

ನೆರೆ ಪ್ರದೇಶದ ಕೃಷಿ ಭೂಮಿಗೆ ಹೆಚ್ಚುವರಿ ಹಣ ನೀಡಲು ಸರ್ಕಾರ ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ನಿಯಮಗಳ ಪ್ರಕಾರ ಖುಷ್ಕಿ ಭೂಮಿಗೆ 6,800 ರು. ಪರಿಹಾರ ನೀಡಬೇಕು ಎಂಬ ನಿಯಮವಿದೆ. ಅದನ್ನು ಸಡಿಲಗೊಳಿಸಿ 10 ಸಾವಿರ ರು. ಹೆಚ್ಚುವರಿಯಾಗಿ ಸೇರಿಸಿ ಒಟ್ಟು 16,800 ರು.ಗಳನ್ನು ಕೊಡಲಾಗುವುದು.

ಅಲ್ಲದೆ, ತೋಟಗಾರಿಗೆ ಬೆಳೆಗಳಿಗೆ 13,500 ರು.ಗಳನ್ನು ನೀಡಬೇಕು ಎಂದು ನಿಯಮವಿದ್ದು, 10 ಸಾವಿರ ರು. ಹೆಚ್ಚುವರಿ ಸೇರಿಸಿ 23,500 ರು.ಗಳನ್ನು ನೀಡಲಾಗುವುದು. ಶಾಶ್ವತ ನಿರಾವರಿ ಪ್ರದೇಶದಲ್ಲಿ 18 ಸಾವಿರ ರು. ಪರಿಹಾರ ನೀಡಬೇಕು. ಆದರೆ, 10 ಸಾವಿರ ರು.ಗಳನ್ನು ಹೆಚ್ಚುವರಿಯಾಗಿ ಸೇರಿಸಿ 28 ಸಾವಿರ ರು.ಗಳನ್ನು ನೀಡಲು ತಿರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

ಮಳೆಗಾಲದಲ್ಲಿ ಪದೇ ಪದೇ ಮುಳುಗಡೆ ಆಗುತ್ತಿರುವ ಗ್ರಾಮಗಳನ್ನು ಎತ್ತರದ ಸ್ಥಳಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಆದರೆ, ಗ್ರಾಮಸ್ಥರು ಒಪ್ಪಿಗೆ ಅಗತ್ಯವಿದೆ. ಒಪ್ಪಿಗೆ ಸಿಕ್ಕಲ್ಲಿ ಎತ್ತರದ ಪ್ರದೇಶದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಿ ಮನೆಗಳ ನಿರ್ಮಾಣ ಮಾಡಿಕೊಡಲಾಗುವುದು ಎಂದರು.

ಶಾಲೆಗಳ ದುರಸ್ತಿಗೆ 500 ಕೋಟಿ:

ನೆರೆಗೆ ತುತ್ತಾದ ಪ್ರದೇಶಗಳಲ್ಲಿ 2,791 ಶಾಲಾ ಕಟ್ಟಡಗಳು ನಾಶವಾಗಿವೆ. 6,933 ಶಾಲಾ ಕೊಠಡಿಗಳು ಸಂಪೂರ್ಣ ಹಾಗು 5,899 ಕೊಠಡಿಗಳು ಭಾಗಶಃ ಬಿದ್ದು ಹೋಗಿವೆ. ಸುಮಾರು 581 ಕೋಟಿ ರು.ಗಳಷ್ಟುಆಸ್ತಿ ನಾಶವಾಗಿವೆ. ಇವುಗಳ ದುರಸ್ತಿಗಾಗಿ 500 ಕೋಟಿ ರು.ಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿಗಳು ಇದೇ ವೇಳೆ ತಿಳಿಸಿದರು.

ನಗರ ಪ್ರದೇಶಗಳಲ್ಲಿ ಅಂಗಡಿಗಳು ನಾಶವಾಗಿದ್ದಲ್ಲಿ ದುರಸ್ತಿಗಾಗಿ 20 ಸಾವಿರ ರುಗಳನ್ನು ನೀಡಲಾಗುವುದು, ನೇಕಾರರ ಮಗ್ಗಗಳ ದುರಸ್ತಿಗೆ 25 ಸಾವಿರ ರು. ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ತೋಟದ ಮನೆ ಮತ್ತು ದನದ ಕೊಟ್ಟಿಗೆಗಳ ದುರಿಸ್ತಿಗೆ ಸೂಕ್ತ ಪರಿಹಾರ ನೀಡಲಾಗುವುದು. ಜೊತೆಗೆ ಮುಂದಿನ ಬಜೆಟ್‌ನಲ್ಲಿ ಅಗತ್ಯ ಹಣ ನೀಡಲಾಗುವುದು ಎಂದು ತಿಳಿಸಿದರು.

ಆಗಸ್ಟ್‌ 3ರಿಂದ 10ರ ಅವಧಿಯಲ್ಲಿ ಕಳೆದ 118 ವರ್ಷಗಳಲ್ಲಿ ಹೆಚ್ಚು ಮಳೆ ಆಗಿದೆ. ಏಳು ದಿನಗಳಲ್ಲಿ 224 ಮಿ.ಮೀ. ಮಳೆಯಾಗಿದೆ. ಅಲ್ಲದೆ, ಶೇ. 279 ಮಿ.ಮೀ.ಗೂ ಹೆಚ್ಚು ಪ್ರಮಾಣದ ಮಳೆ ಬಂದಿದೆ. ಅಲ್ಲದೆ, ಮಹಾರಾಷ್ಟ್ರದಿಂದ ಹೆಚ್ಚು ನೀರು ಬಿಡುಗಡೆ ಮಾಡಿದ್ದು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.