ಬೆಂಗಳೂರು(ಆ.03): ರಾಜಧಾನಿ ಬೆಂಗಳೂರಿನಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ ಮೃತಪಟ್ಟವರ ಪೈಕಿ 233 ಜನರು 40 ವರ್ಷದ ಒಳಗಿನವರಾಗಿರುವುದು ಆತಂಕಕಾರಿಯಾಗಿದೆ.ವಿಶೇಷವಾಗಿ ಕೊರೋನಾ ಸೋಂಕು ಈ ವಯಸ್ಸಿನ ಜನರಲ್ಲಿ ಬಂದರೆ ಪ್ರತಿರೋಧ ಶಕ್ತಿ ಹೆಚ್ಚಿರುವುದರಿಂದ ಗುಣಮುಖರಾಗುತ್ತಾರೆ ಎಂಬ ತಜ್ಞರು ಹೇಳುತ್ತಿದ್ದರೂ ಸಾವಿನ ಸಂಖ್ಯೆ ಹೆಚ್ಚಿರುವುದು ಕಳವಳಕಾರಿಯಾಗಿದೆ. ಅದರಲ್ಲೂ ಈವರೆಗೆ 20-30 ವರ್ಷದ 60 ಯುವ ಜನ ಸಾವಿಗೀಡಾಗಿದ್ದಾರೆ.

ಮಾ.8ರಿಂದ ಆರಂಭವಾದ ಕೊರೋನಾ ಸೋಂಕಿನಿಂದ ಈವರೆಗೆ 1,056 ಬಲಿಯಾಗಿದ್ದಾರೆ. ಅದರಲ್ಲಿ 549 ಮಂದಿ (ಶೇ.53) 40ರಿಂದ 60 ವರ್ಷದೊಳಗಿನ ಮಧ್ಯ ವಯಸ್ಕರಾಗಿದ್ದಾರೆ. 60 ವರ್ಷ ಮೇಲ್ಪಟ್ಟ ವೃದ್ಧರು (ಶೇ.26) 275 ಜನರು ಹಾಗೂ ಉಳಿದವರು (ಶೇ.22) ಅಂದರೆ 233 ಜನರು 40 ವರ್ಷದೊಳಗಿನವರಾಗಿದ್ದಾರೆ.

43% ಮಧ್ಯ ವಯಸ್ಕರು ಕೊರೋನಾಗೆ ಬಲಿ!

ಜುಲೈನಲ್ಲಿ ಸೋಂಕಿನಿಂದ 934 ಸಾವು:

ಕೊರೋನಾ ಸೋಂಕು ಮಾ.8ರಿಂದ ಕಾಣಿಸಿಕೊಂಡಿದ್ದು, ಜೂ.30ಕ್ಕೆ (104 ದಿನದಲ್ಲಿ) ಕೇವಲ 95 ಮಂದಿ ಸೋಂಕಿನಿಂದ ಮೃತಪಟ್ಟಿದ್ದರು. ಆದರೆ, ಜುಲೈ ತಿಂಗಳಲ್ಲಿ 934 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಅದೇ ರೀತಿ ಒಂದೇ ತಿಂಗಳಲ್ಲಿ 50,254 ಸೋಂಕಿತರು ಪತ್ತೆಯಾಗಿದ್ದು, ದೇಶದ ಇತರೆ ಮಹಾನಗರಗಳಿಗೆ ಹೋಲಿಕೆ ಮಾಡಿದಲ್ಲಿ ಕಡಿಮೆ ಅವಧಿಯಲ್ಲಿ ಸೋಂಕು ಮತ್ತು ಸಾವು ಸಂಭವಿಸಿದ ಪ್ರಮಾಣದಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ.

708 ಪುರುಷರು ಸಾವು:

ಸೋಂಕಿನಿಂದ ಮೃತಪಟ್ಟವರಲ್ಲಿ ಶೇ.67ರಷ್ಟು ಅಂದರೆ 708 ಪುರುಷರು ಹಾಗೂ ಶೇ.33 ಅಂದರೆ 348 ಮಹಿಳೆಯರು ಮೃತರಾಗಿದ್ದಾರೆ. 40 ವರ್ಷದೊಳಗಿನವರಲ್ಲಿ 60 ಮಹಿಳೆಯರು ಮತ್ತು 173 ಪುರುಷರು, 40ರಿಂದ 60 ವರ್ಷದವರಲ್ಲಿ 164 ಮಹಿಳೆಯರು ಮತ್ತು 549 ಪುರುಷರು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ 125 ಮಹಿಳೆಯರು ಮತ್ತು 275 ಪುರುಷರು ಸೋಂಕಿಗೆ ಬಲಿಯಾಗಿದ್ದಾರೆ.

ಜುಲೈನಲ್ಲಿ ಭಾರಿ ಸಾವು:

ಪ್ರಸ್ತುತ ನಗರದಲ್ಲಿ ಪ್ರತಿನಿತ್ಯ ಸರಾಸರಿ 20ರಿಂದ 30 ಜನರು, (ಒಟ್ಟಾರೆ ಸೋಂಕಿತ ಪ್ರಕರಣದ ಶೇ.1.84ರಷ್ಟುದರ) ಸಾವು ಸಂಭವಿಸುತ್ತಿವೆ. ಆದರೆ, ಜು.12ರಿಂದ ಜು.18ರ ನಡುವಿನ ಒಂದು ವಾರದ ಅವಧಿಯಲ್ಲಿ ಸರಾಸರಿ 58 ಆಧಾರಲ್ಲಿ 404 ಸೋಂಕಿತರು ಸಾವಿಗೀಡಾಗಿದ್ದಾರೆ. ಜು.12ರಂದು 45, ಜು.13ರಂದು 47, ಜು.14 ರಂದು 56, ಜು.15 ರಂದು 60, ಜು.16 ರಂದು 70, ಜು.17ರಂದು 75 ಹಾಗೂ ಜು.18ರಂದು 49 ಸಾವು ಪ್ರಕರಣ ವರದಿಯಾಗಿವೆ.
ಸೋಂಕಿಗೆ ಬಲಿಯಾದವರ ವಿವರ

ವಯಸ್ಸು ಮಹಿಳೆ ಪುರುಷ ಒಟ್ಟು

10 ವರ್ಷದೊಳಗೆ 3 2 5
10 ರಿಂದ 20 ವರ್ಷ 2 12 14
20 ರಿಂದ 30 ವರ್ಷ 10 50 60
30 ರಿಂದ 40 ವರ್ಷ 45 108 153
40 ರಿಂದ 50 ವರ್ಷ 65 192 257
50 ರಿಂದ 60 ವರ್ಷ 99 193 292
60 ರಿಂದ 70 ವರ್ಷ 67 92 159
70 ವರ್ಷ ಮೇಲ್ಪಟ್ಟು 58 58 116
ಒಟ್ಟು ಮೃತರು 349 707 1,056