Moral Policing: ಬಿಜೆಪಿ ವಿರುದ್ದವೇ ಸಿಡಿದೆದ್ದ ಕರಾವಳಿಯ ಹಿಂದೂ ಸಂಘಟನೆ!
* ಬಿಜೆಪಿ ವಿರುದ್ದವೇ ಸಿಡಿದೆದ್ದ ಕರಾವಳಿಯ ಹಿಂದೂ ಸಂಘಟನೆ ಕಾರ್ಯಕರ್ತರು
* ಸಾಮಾಜಿಕ ತಾಣಗಳಲ್ಲಿ ಕರಾವಳಿಯ ಬಿಜೆಪಿ ಶಾಸಕರು-ಸಂಸದರ ವಿರುದ್ದ ಕಿಡಿ
* ನೈತಿಕ ಪೊಲೀಸ್ ಗಿರಿ ಪ್ರಕರಣಗಳಲ್ಲಿ ಕಾರ್ಯಕರ್ತರ ಬಂಧನಕ್ಕೆ ಅಸಮಾಧಾನ
ಮಂಗಳೂರು(ಡಿ.13): ನೈತಿಕ ಪೊಲೀಸ್‌ಗಿರಿ (Moral Policing) ಪ್ರಕರಣದಲ್ಲಿ ತಮ್ಮ ಕಾರ್ಯಕರ್ತರನ್ನು ಬಂಧಿಸಿದ ವಿಚಾರವಾಗಿ ಕರಾವಳಿ ಹಿಂದೂ ಸಂಘಟನೆಯು (Coastal Hindu Activists), ಬಿಜೆಪಿ (BJP) ವಿರುದ್ಧವೇ ಸಿಡಿದೆದ್ದಿದೆ. ದ.ಕ ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರ ಮೊಬೈಲ್ ನಂಬರ್ ಹಾಕಿ ಅಭಿಯಾನ ಆರಂಭಿಸಲಾಗಿದ್ದು,ನಮ್ಮ ಕಾರ್ಯಕರ್ತರನ್ನೇ ಜೈಲಿಗೆ ಹಾಕೋದಾದ್ರೆ ನಾವು ಮತ ಕೊಟ್ಟಿದ್ದು ಯಾವ ಕರ್ಮಕ್ಕೆ?, ತಾಕತ್ತಿದ್ದರೆ ರಾಜೀನಾಮೆ ಕೊಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏನಿದು ವಿವಾದ?
ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಸ್ ಸಿಬ್ಬಂದಿ ಸೇರಿಸಿ ನಾಲ್ವರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದರು. ಪ್ರಕಾಶ್, ರಾಘವೇಂದ್ರ, ರಂಜಿತ್ ಹಾಗೂ ಪವನ್ ಬಂಧಿತ ಆರೋಪಿಗಳು. ಬಸ್‌ನಲ್ಲಿ ಕುಳಿತಿದ್ದ ಯುವಕ, ಯುವತಿಯನ್ನು ಪ್ರಶ್ನಿಸಿ ಹಲ್ಲೆ ಮಾಡಲಾಗಿತ್ತು. ಬಸ್ ನಿರ್ವಾಹಕ, ಕೆಲ ಯುವಕರಿಂದ ಯುವಕನ ಮೇಲೆ ಹಲ್ಲೆ ಮಾಡಲಾಗಿದ್ದು, ಯುವಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿತ್ತು.
Moral Policing Mangaluru: ಬಸ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದವರ ಬಂಧನ
ಆದರೀಗ ನೈತಿಕ ಪೊಲೀಸ್‌ಗಿರಿ ನಡೆಸಿದವರನ್ನು ಬಂಧಿಸಿದ ಬೆನ್ನಲ್ಲೇ ಕರಾವಳಿಯ ಬಿಜೆಪಿ ನಾಯಕರ (BJP Leaders) ವಿರುದ್ದ ಹಿಂದೂ ಕಾರ್ಯಕರ್ತರ ಅಸಮಾಧಾನ ಸ್ಪೋಟಗೊಂಡಿದೆ. ಬಹಿರಂಗವಾಗಿ ಸಾಮಾಜಿಕ ತಾಣಗಳಲ್ಲಿ ಬಿಜೆಪಿಗರ ವಿರುದ್ದ ಕಾರ್ಯಕರ್ತರು ಯುದ್ಧ ಘೋಷಿಸಿದ್ದು, ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರ ಮೊಬೈಲ್ ನಂಬರ್ ಹಾಕಿ ಅಭಿಯಾನ ಮುಂದುವರೆದಿದೆ. ನಮ್ಮ ಕಾರ್ಯಕರ್ತರನ್ನು ಜೈಲಿಗೆ ಹಾಕೋದಾದ್ರೆ ನಾವು ಮತ ಕೊಟ್ಟಿದ್ದು ಯಾವ ಕರ್ಮಕ್ಕೆ? ಎಂದೂ ನಾಯಕರಲ್ಲಿ ಪ್ರಶ್ನಿಸಲಾಗುತ್ತಿದೆ.
ಬಳೆ ಕಳುಹಿಸುತ್ತಿದ್ದೇವೆ
ಕರಾವಳಿಯ ಬಿಜೆಪಿ ಶಾಸಕರು, ಸಂಸದರು ಮತ್ತು ಬಿಜೆಪಿ ಸರ್ಕಾರಕ್ಕೆ ಬಳೆ ಕಳುಹಿಸುತ್ತಿದ್ದೇವೆ ಎಂದೂ ಅನೇಕ ಕಾರ್ಯಕರ್ತರು ಪೋಸ್ಟ್ ಮಾಡಿದ್ದು, ನಿಮಗೆ ತಾಕತ್ತಿಲ್ಲದಿದ್ದರೆ ರಾಜೀನಾಮೆ ಕೊಟ್ಟು ಬಿಡಿ ಅಂತ ನಳಿನ್ ಕಟೀಲ್ ವಿರುದ್ಧ ಕಿಡಿ ಕಾರಿದ್ದಾರೆ.
ಕಮೆಂಟ್‌ಗಳ ಸುರಿಮಳೆ
ಇನ್ನು ಬಿಜೆಪಿ ವಿರುದ್ಧ ಆರಂಭವಾಗಿರುವ ಈ ಅಭಿಯಾನದ ಪೋಸ್ಟ್‌ಗಳು ಭಾರೀ ವೈರಲ್ ಆಗುತ್ತಿದ್ದು, ಅನೇಕ ಮಂದಿ ಇದಕ್ಕೆ ಕಮೆಂಟ್ ನೀಡಿದ್ದಾರೆ. ಬಿಜೆಪಿ ಪಕ್ಷಕ್ಕೆ ಅಲ್ಪಸಂಖ್ಯಾತರ ಮೇಲಿರುವ ಪ್ರೀತಿ ನಮ್ಮ ಮೇಲೆ ಯಾಕಿಲ್ಲ? ಎಂದೂ ಪ್ರಶ್ನಿಸಿದ್ದಾರೆ. ಅನೇಕ ಮಂದಿ ಮುಂದಿನ ಚುನಾವಣೆಯಲ್ಲಿ ಈ ನಾಯಕರಿಗೆ ಬುದ್ಧಿ ಕಲಿಸಿ ಎಂದೂ ಹೇಳಿದ್ದಾರೆ.
ಸದ್ಯ ಈ ಪ್ರಕರಣದ ಕಾವು ಜೋರಾಗುತ್ತಿದ್ದು, ಕಾರ್ಯಕರ್ತರ ಬೇಡಿಕೆಯಂತೆ ಹಲ್ಲೆ ನಡೆಸಿದವರನ್ನು ಬಂಧಮುಕ್ತಗೊಳಿಸುತ್ತಾರಾ? ಅಥವಾ ನಾಲ್ವರು ಜೈಲಿನಲ್ಲೇ ದಿನ ಕಳೆಯುತ್ತಾರಾ? ಕರಾವಳಿ ಭಾಗದ ಬಿಜೆಪಿ ನಾಯಕರು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಮುಂದೆ ಇದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದು ನೊಡಬೇಕಷ್ಟೇ.