Asianet Suvarna News Asianet Suvarna News

ಅನ್ನಭಾಗ್ಯ ಯೋಜನೆ: ಆಗಸ್ಟ್‌ ತಿಂಗಳ ಹಣ ವಿತರಣೆ ಶುರು

ಡಿಬಿಟಿ ವ್ಯವಸ್ಥೆಯಲ್ಲಿನ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ 13 ದಿನಗಳ ಬಳಿಕ ಡಿಬಿಟಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಮಂಗಳವಾರವೇ ಬೀದರ್‌ ಜಿಲ್ಲೆಯ ಅನೇಕ ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ನೀಡಬೇಕಿದ್ದ ಹಣ ಸಂದಾಯವಾಗಿದೆ. ಮುಂದಿನ ಒಂದು ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ನಗದು ಜಮಾ ಆಗಲಿದೆ. 

Month of August Money Distribution Started of Anna Bhagya Yojana in Karnataka grg
Author
First Published Aug 24, 2023, 1:30 AM IST

ಬೆಂಗಳೂರು(ಆ.24):  ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ಬದಲಾಗಿ ನೀಡಬೇಕಾಗಿದ್ದ ಆಗಸ್ಟ್‌ ತಿಂಗಳ ಹಣವನ್ನು ನೇರ ನಗದು ವರ್ಗಾವಣೆ(ಡಿಬಿಟಿ) ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆಯನ್ನು ಆಹಾರ ಇಲಾಖೆ ಪ್ರಾರಂಭಿಸಿದೆ. 

ಈ ತಿಂಗಳ ನೇರ ನಗದು ವರ್ಗಾವಣೆ ಆಗಸ್ಟ್‌ 10ರಿಂದಲೇ ಆರಂಭಗೊಳ್ಳಬೇಕಿತ್ತು. ಆದರೆ, ಡಿಬಿಟಿ ವ್ಯವಸ್ಥೆಯಲ್ಲಿನ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ 13 ದಿನಗಳ ಬಳಿಕ ಡಿಬಿಟಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಮಂಗಳವಾರವೇ ಬೀದರ್‌ ಜಿಲ್ಲೆಯ ಅನೇಕ ಫಲಾನುಭವಿಗಳಿಗೆ ಐದು ಕೆಜಿ ಹೆಚ್ಚುವರಿ ಅಕ್ಕಿಯ ಬದಲಾಗಿ ನೀಡಬೇಕಿದ್ದ ಹಣ ಸಂದಾಯವಾಗಿದೆ. ಮುಂದಿನ ಒಂದು ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ ನಗದು ಜಮಾ ಆಗಲಿದೆ ಎಂದು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಆಯುಕ್ತೆ ಕನಗವಲ್ಲಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಇಲ್ಲ ; ಮುಂದಿನ ತಿಂಗಳೂ ಉಚಿತ 5 ಕೇಜಿ ಅಕ್ಕಿ ಬದಲು ಹಣ : ಮುನಿಯಪ್ಪ

ಅನ್ನಭಾಗ್ಯ ಯೋಜನೆ ಜಾರಿ ಬಂದ ಜುಲೈ ತಿಂಗಳಲ್ಲಿ 1 ಕೋಟಿಗೂ ಹೆಚ್ಚು ಪಡಿತರ ಕುಟುಂಬಗಳಿಗೆ ಹೆಚ್ಚುವರಿ ಅಕ್ಕಿಗೆ ಬದಲು ಪ್ರತಿ ಸದಸ್ಯರಿಗೆ 170 ರು.ಗಳಂತೆ 566 ಕೋಟಿ ರು.ಗಳನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಡಿಬಿಟಿ ಮೂಲಕ ಆಹಾರ ಇಲಾಖೆ ವರ್ಗಾವಣೆ ಮಾಡಿತ್ತು. ಇದರಿಂದ 3.5 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿತ್ತು. ಆಗಸ್ಟ್‌ ತಿಂಗಳಲ್ಲಿ ಪ್ರತಿಯೊಬ್ಬರಿಗೆ 10 ಕೆ.ಜಿ. ಅಕ್ಕಿ ನೀಡುವುದಾಗಿ ಇಲಾಖೆ ಭರವಸೆ ನೀಡಿತ್ತು. ಆದರೆ, ಸಮರ್ಪಕವಾಗಿ ಅಕ್ಕಿ, ರಾಗಿ, ಗೋಧಿ ಇತ್ಯಾದಿ ಧಾನ್ಯಗಳು ಲಭ್ಯವಾಗದ ಹಿನ್ನೆಲೆ ಮತ್ತು ಕೇಂದ್ರ ಸಹಕರಿಸದ ಕಾರಣ ಆಗಸ್ಟ್‌ ತಿಂಗಳಲ್ಲಿಯೂ 5 ಕೆ.ಜಿ. ಅಕ್ಕಿಗೆ ಬದಲು ಹಣ ನೀಡಲಾಗುತ್ತಿದೆ.

ಜುಲೈ ತಿಂಗಳಲ್ಲಿ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ಪಾವತಿಯಾಗದ 28 ಲಕ್ಷ ಕುಟುಂಬಗಳಲ್ಲಿ ಕಳೆದ ಮೂರು ತಿಂಗಳಲ್ಲಿ ಒಂದು ತಿಂಗಳೂ ಪಡಿತರ ಪಡೆಯದೇ ಇರುವ ಫಲಾನುಭವಿಗಳು 5,32,349, ಅಂತ್ಯೋದಯ ಅನ್ನ ಪಡಿತರ ಚೀಟಿದಾರರಲ್ಲಿ ಮೂರು ಸದಸ್ಯರಿಗಿಂತ ಕಡಿಮೆ ಫಲಾನುಭವಿಗಳ ಸಂಖ್ಯೆ 3,40,425 ಹಾಗೂ ಚಾಲ್ತಿಯಲ್ಲಿ ಇರದೇ ಹಾಗೂ ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆ ಆಗದಿರುವ ಹಾಗೂ ಅನರ್ಹ ಪಡಿತರ ಚೀಟಿಗಳ ಸಂಖ್ಯೆಯು 19,27,226 ಇದೆ.

ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಜೋಡಣೆಯಾಗದ ಲಕ್ಷಾಂತರ ಫಲಾನುಭವಿಗಳಿಗೆ ಜುಲೈ ತಿಂಗಳಲ್ಲಿ ಹೆಚ್ಚುವರಿ ಅಕ್ಕಿಯ ಹಣ ಪಾವತಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನೇಕರು ಬ್ಯಾಂಕ್‌ ಖಾತೆಯೊಂದಿಗೆ ಈಗ ಆಧಾರ್‌ ಜೋಡಣೆ ಮಾಡಿದ್ದಾರೆ. ಅವರಿಗೆ ಕಳೆದ ತಿಂಗಳ ಹಣ ಸಿಗುವುದಿಲ್ಲ. ಆದರೆ, ಆಗಸ್ಟ್‌ ತಿಂಗಳಲ್ಲಿ ಹೆಚ್ಚುವರಿ ಅಕ್ಕಿಯ ಹಣ ಪಾವತಿಯಾಗಲಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

Follow Us:
Download App:
  • android
  • ios