ಸ್ವಸಹಾಯ ಸಂಘ ಹೆಸರಲ್ಲಿ ಸಾಲ; ಮರುಪಾವತಿ ಮಾಡದೆ ಲಕ್ಷ ಲಕ್ಷ ಹಣ ಗುಳುಂ ಮಾಡಿದ ವಂಚಕಿ!
ಸ್ವಸಹಾಯ ಸಂಘ ಮಾಡಿ ಸಾಲ ಕೊಡಿಸ್ತೀನಿ ಅಂತ ಹೇಳಿ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಬಂಡವಾಳವಾಗಿಸಿಕೊಂಡ ಖತರ್ನಾಕಿಯೊಬ್ಬಳು ಲಕ್ಷ ಲಕ್ಷ ರೂಪಾಯಿಯನ್ನು ತಾನೇ ನುಂಗಿ ಮಕ್ಮಲ್ ಟೋಪಿ ಹಾಕಿದ್ದಾಳೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಆ.25): ಸ್ವಸಹಾಯ ಸಂಘ ಮಾಡಿ ಸಾಲ ಕೊಡಿಸ್ತೀನಿ ಅಂತ ಹೇಳಿ ಮಹಿಳೆಯರ ಆರ್ಥಿಕ ಸಮಸ್ಯೆಯನ್ನು ಬಂಡವಾಳವಾಗಿಸಿಕೊಂಡ ಖತರ್ನಾಕಿಯೊಬ್ಬಳು ಲಕ್ಷ ಲಕ್ಷ ರೂಪಾಯಿಯನ್ನು ತಾನೇ ನುಂಗಿ ಮಕ್ಮಲ್ ಟೋಪಿ ಹಾಕಿದ್ದಾಳೆ.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಈ ಘಟನೆ ನಡೆದಿದ್ದು, ನಾಸೀರ ಎಂಬಾಕೆಯೇ ಹತ್ತಾರು ಮಹಿಳೆಯರಿಗೆ ಮೋಸ ಮಾಡಿದ ಚಾಲಾಕಿ. ಮಡಿಕೇರಿ ನಗರದ ಮಖನ್ ಗಲ್ಲಿ ನಿವಾಸಿ ಆಗಿರುವ ನಾಸೀರಾ ಬಾನು ಸ್ವಸಾಯ ಸಂಘಗಳನ್ನು ಮಾಡಿದ್ದೇನೆ. ನೀವು ಸೇರಿಕೊಳ್ಳಿ ಎಂದು ಒಬ್ಬೊಬ್ಬರೇ ಮಹಿಳೆಯರ ಆಧಾರ್ ಕಾರ್ಡು, ಓಟರ್ ಐಡಿ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದಿದ್ದಾರೆ. ಬಳಿಕ ಅಕ್ಷತಾ, ದ್ವೀಪ, ಗಂಜೆ ಗೌಹಾರ್, ಗಣಪತಿ, ರಸೂಲ್, ಎಸ್ಕೆಎಸ್ ಹೀಗೆ ವಿವಿಧ ಹೆಸರಿನಲ್ಲಿ ಸ್ವಸಾಯ ಗುಂಪುಗಳನ್ನು ಮಾಡಿದ್ದಾಳೆ.
Bengaluru crime: ವ್ಯಾಪಾರಿ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದ ನಾಲ್ವರ ಬಂಧನ
ಈ ಗುಂಪುಗಳಿಗೆ ನಗರದ ಬ್ಯಾಂಕ್ ಆಫ್ ಬರೋಡ(Bank of baroda)ದಲ್ಲಿ ಒಂದೊಂದು ಸಂಘಗಳ ಹೆಸರಿನಲ್ಲೂ ನಾಲ್ಕರಿಂದ 8 ಲಕ್ಷದವರೆಗೆ ಸಾಲ ಮಾಡಿದ್ದಾರೆ. ಯಾವೆಲ್ಲಾ ಮಹಿಳೆಯರಿಂದ ದಾಖಲೆಗಳನ್ನು ಪಡೆದಿದ್ದಳೋ ಅವರಲ್ಲಿ ಕೆಲವರಿಗೆ ಹಣವನ್ನೇ ಕೊಟ್ಟಿಲ್ಲ. ನಿಮಗೆ ಸಾಲ ಸಿಕ್ಕಿಲ್ಲ ಎಂದು ಸುಳ್ಳು ಹೇಳಿ ತಾನೇ ಸ್ವಾಹಃ ಮಾಡಿದ್ದಾಳೆ ಎಂಬ ಆರೋಪವಿದೆ. ಸಾಲ ಸಿಗಲಿಲ್ಲವಲ್ಲ ಇನ್ನೇನು ಮಾಡುವುದು ಎಂದು ಸಾಲ ಸಿಗದ ಮಹಿಳೆಯರು ಸುಮ್ಮನಾಗಿದ್ದಾರೆ. ಹೀಗೆ ಮಹಿಳೆಯರ ದಾಖಲೆಗಳನ್ನು ಬಳಸಿಕೊಂಡು ಸಾಲ ಮಾಡಿರುವುದು ಮೂರು ವರ್ಷಗಳ ಹಿಂದೆಯೇ. ನೀವು ಸಾಲ ತೀರಿಸಿಲ್ಲ, ಕೂಡಲೇ ಸಾಲ ಮರುಪಾತಿ ಮಾಡಿ. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕಿನಿಂದ ನೋಟಿಸ್ ಬಂದಾಗಲೇ ತಮಗೆ ಮೋಸ ಆಗಿದೆ ಎಂದು ಮೋಸ ಹೋಗಿರುವ ಮಹಿಳೆ ಸುಕನ್ಯಾ ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದಿಷ್ಟೇ ಅಲ್ಲ, ಎಲ್ಲರಿಗೂ ಒಂದೇ ರೀತಿ ಮೋಸ ಮಾಡಿದರೆ ತನ್ನ ಮೋಸ ಎಲ್ಲಿ ಬಯಲಾಗುವುದೋ ಎಂದು ನಾಸೀರಾ ಬಾನು ಅವರು ಇನ್ನೊಂದಷ್ಟು ಮಹಿಳೆಯರಿಗೆ ಬ್ಯಾಂಕ್ ಆಫ್ ಬರೋಡದಿಂದ ಸ್ವಸಹಾಯ ಗುಂಪುಗಳ ಹೆಸರಿನಲ್ಲಿ ಸಾಲ ಕೊಡಿಸಿದ್ದಾರೆ. ನಂತರ ಸಾಲ ಮರುಪಾವತಿ ಮಾಡುವಾಗ ಮಹಿಳೆಯರಿಂದ ನಾಸೀರಾ ಬಾನು ಹಣ ಸಂಗ್ರಹಿಸಿದ್ದಾರೆ. ಜನರು ತಿಂಗಳಿಗೆ ಎರಡು ಸಾವಿರದಂತೆ ಪ್ರತೀ ತಿಂಗಳು ನಾಸೀರಾಗೆ ಹಣ ನೀಡಿದ್ದಾರೆ. ಕೆಲವು ತಿಂಗಳು ಮಹಿಳೆಯ ಕೈಗೆ ನಗದನ್ನು ನೀಡಿದ್ದೇವೆ ಎನ್ನುತ್ತಿರುವ ಮಹಿಳೆಯರು ಮತ್ತೆ ಕೆಲವು ತಿಂಗಳು ಮಹಿಳೆಗೆ ಗೂಗಲ್ ಪೇ, ಫೋನ್ ಪೇ ಮಾಡಿದ್ದಾರೆ. ಆದರೆ ಬ್ಯಾಂಕಿನಿಂದ ಪಡೆದಿದ್ದ ಸಾಲಕ್ಕೆ ಜಮೆಯಾಗಿಲ್ಲ. ಇದೂ ಕೂಡ ಮೂರು ನಾಲ್ಕು ವರ್ಷಗಳಾದರೂ ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕಿನಿಂದ ನೋಟಿಸ್ ಬಂದಾಗಲೇ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರು: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ 4.89 ಲಕ್ಷ ರು. ವಂಚನೆ!
ಕೂಡಲೇ ಎಚ್ಚೆತ್ತುಕೊಂಡ ಮಹಿಳೆಯರು ಬ್ಯಾಂಕಿಗೆ ಹೋಗಿ ವಿಚಾರಿಸಿದರೆ ಬ್ಯಾಂಕಿನಿಂದ ಸರಿಯಾದ ಪ್ರತಿಕ್ರಿಯೆ ದೊರೆಯುತ್ತಿಲ್ಲ ಎನ್ನುತ್ತಿದ್ದಾರೆ ಮೋಸ ಹೋಗಿರುವ ವಿಘ್ನೇಶ್. ಇನ್ನು ಹೀಗೆ ಮೋಸ ಮಾಡಿರುವ ಬಗ್ಗೆ ಮಡಿಕೇರಿ ಪೊಲೀಸ್ ಠಾಣೆ(Madikeri police station)ಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಕೂಡ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಮಹಿಳೆಯರು ದಿಕ್ಕುತೋಚದಂತಾಗಿ ಪರದಾಡುತ್ತಿದ್ದಾರೆ.
ಸಾಲ ಪಡೆದಿದ್ದು 25 ಸಾವಿರ ಆದರೂ ಇವರ ಖಾತೆಯಲ್ಲಿ ಮಾತ್ರ ಎರಡುವರೆ ಲಕ್ಷದಿಂದ 6 ಲಕ್ಷದವರೆಗೆ ಸಾಲ ತೋರಿಸುತ್ತಿದೆ. ಹೀಗಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕುತ್ತಿದ್ದ ಮಹಿಳೆಯರು ಈಗ ಕಣ್ಣೀರಿಡುವಂತೆ ಆಗಿದೆ.