99 ರು.ಗೆ ಮೊಬೈಲ್: ಖರೀದಿಗೆ ಮುಗಿಬಿದ್ದ ಜನ, ಲಾಠಿ ಪ್ರಹಾರ: ಬೇಸ್ತು ಬಿದ್ದ ಕಂಪೆನಿ
99 ರು.ಗೆ ಮೊಬೈಲ್: ಖರೀದಿಗೆ ಮುಗಿಬಿದ್ದ ಜನ, ಲಾಠಿ ಪ್ರಹಾರ| ಪ್ರಚಾರಕ್ಕಾಗಿ ಆಫರ್ ಘೋಷಿಸಿ ಬೇಸ್ತುಬಿದ್ದ ಕಂಪನಿ
ದಾವಣಗೆರೆ[ಜ.27]: ಹೊಸದಾಗಿ ಮೊಬೈಲ್ ಕಂಪನಿಯ ಮಳಿಗೆಯೊಂದು ‘ಕೇವಲ .99ಕ್ಕೆ ಮೊಬೈಲ್’ ಆಫರ್ ಘೋಷಿಸಿ ಕೊನೆಗೆ ನಿರೀಕ್ಷೆ ಮೀರಿ ಬಂದ ಜನರನ್ನು ನಿಯಂತ್ರಿಸಲಾಗದೆ ಪರದಾಟ ಅನುಭವಿಸಿದ ಘಟನೆ ಶನಿವಾರ ದಾವಣಗೆರೆ ನಗರದಲ್ಲಿ ನಡೆದಿದೆ. ಅಗ್ಗದ ಬೆಲೆ ಮೊಬೈಲ್ ಆಫರ್ ನಂಬಿ ಸಂಸ್ಥೆಯ ಎರಡೂ ಮಳಿಗೆಗಳ ಮುಂದೆ ಭಾರೀ ಸಂಖ್ಯೆಯಲ್ಲಿ ಜನ ಸೇರಿದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
‘ಗ್ಲೋಬಲ್ ಆ್ಯಕ್ಸಿಸ್’ ಎಂಬ ಮೊಬೈಲ್ ಕಂಪನಿಯೊಂದು ಇಲ್ಲಿನ ಪಿ.ಜೆ.ಬಡಾವಣೆಯ ರಾಂ ಆ್ಯಂಡ್ ಕೋ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಬಳಿಯಿರುವ ಮತ್ತೊಂದು ಮಳಿಗೆಯಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇವಲ .99ಕ್ಕೆ ಮೊಬೈಲ್ ಹ್ಯಾಂಡ್‌ಸೆಟ್‌ನ ಆಫರ್ ಘೋಷಿಸಿತ್ತು. ಹೊಸದಾಗಿ ಆರಂಭಗೊಂಡಿದ್ದ ಈ ಕಂಪನಿಯು ಪ್ರಚಾರಕ್ಕಾಗಿ ಈ ಆಫರ್ ಘೋಷಿಸಿತ್ತು. ಆದರೆ, ಈ ಆಫರ್ ಕೇಳಿ ನಸುಕಿನ 5ಗಂಟೆಯಿಂದಲೇ ಎರಡೂ ಅಂಗಡಿ ಮುಂದೆ ಜಮಾಯಿಸಿದ್ದ ಹಿನ್ನೆಲೆಯಲ್ಲಿ 30- 40 ಫೋನ್ ಅನ್ನು ಆಫರ್ ಮೂಲಕ ನೀಡುವ ಉದ್ದೇಶ ಇಟ್ಟುಕೊಂಡಿದ್ದ ಕಂಪನಿಯವರು ಪರದಾಡಬೇಕಾಯಿತು.
30- 40 ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ನೀಡಿದ ಬಳಿಕ ನಮ್ಮಲ್ಲಿ ಮಾಲು ಖಾಲಿಯಾಗಿದೆ ಎಂದು ಅಂಗಡಿಯವರು ಹೇಳುತ್ತಿದ್ದಂತೆ ಜಮಾಯಿಸಿದ್ದ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಲಘು ಲಾಠಿ ಪ್ರಹಾರ ನಡೆಸುವ ಮೂಲಕ ಪರಿಸ್ಥಿತಿ ನಿಯಂತ್ರಿಸಿದರು. ಬಳಿಕ ಅಂಗಡಿ ಮಾಲೀಕರನ್ನು ಠಾಣೆಗೆ ಕರೆದೊಯ್ದು ಎಚ್ಚರಿಕೆ ನೀಡಿ ವಾಪಸ್ ಕಳುಹಿಸಿದರು.