ಪಾದರಾಯನಪುರ ಹಿಂಸಾಚಾರ ಬೆನ್ನಲ್ಲೇ ಶಾಸಕ ಜಮೀರ್ ಅಹ್ಮದ್ ಟ್ವೀಟ್!
ಪಾದರಾಯನಪುರ ವಾರ್ಡ್‌ನಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಿಂಸಾಚಾರ| ಹಿಂಸಾಚಾರದ ಬೆನ್ನಲ್ಲೇ ಭಾರೀ ಕಟ್ಟೆಚ್ಚರ| ಘಟನೆ ಬೆನ್ನಲ್ಲೇ ಟ್ವೀಟ್ ಮಾಡಿದ ಶಾಸಕ ಜಮೀರ್ ಅಹ್ಮದ್ ಖಾನ್
ಬೆಂಗಳೂರು(ಏ.20): ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ವೈದ್ಯರು ಹಾಗೂ ಪೊಲೀಸರ ಮೇಲೆ ನಡೆದ ಹಿಂಸಾಚಾರ ಸದ್ಯ ಇಡೀ ದೇಶಾದ್ಯಂತ ಸದ್ದು ಮಾಡಿದೆ. ರಾತ್ರಿ ವೇಳೆ ಏಕಾಏಕಿ ಆರೋಗ್ಯ ಸಿಬ್ಬಂದಿ ಮೇಲೆ ನಡೆದಿದ್ದ ಈ ದಾಳಿಯಲ್ಲಿ ಮಹಿಳೆಯರು ಹಾಗೂ ಪುಟ್ಟ ಪುಟ್ಟ ಮಕ್ಕಳು ಭಾಗಿಯಾಗಿದ್ದ ದೃಶ್ಯಗಳೂ ವೈರಲ್ ಆಗಿದ್ದವು. ಸದ್ ವಿಡಿಯೋ ಆಧಾರದಲ್ಲಿ ಜೆ. ಜೆ. ನಗರ ಪೊಲೀಸರು ಅನೇಕ ಮಂದಿಯನ್ನು ಬಂಧಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಇಲ್ಲಿನ ಶಾಸಕ ಜಮೀರ್ ಅಹ್ಮದ್ ಖಾನ್ ಟ್ವೀಟ್ ಮಾಡಿ ಸರ್ಕಾರಕ್ಕೆ ಈ ಸಂಂಧ ತನಿಖೆಗೆ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಪಾದರಾಯನಪುರ ಪುಂಡರ ವಿರುದ್ಧ ನೈಟ್ ಆಪರೇಷನ್: ಹಲವರ ವಶ!
ಪಾದರಾಯನಪುರ ಗಲಭೆ ಬೆನ್ನಲ್ಲೇ ಟ್ವೀಟ್ ಮಾಡಿರುವ ಜಮೀರ್ ಅಹ್ಮದ್ ಖಾನ್, ತಾನು ಈ ಸಂಬಂಧ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ. 'ಪಾದರಾಯನಪುರದಲ್ಲಿ ಭಾನುವಾರ ರಾತ್ರಿ ಅಹಿತಕರ ಘಟನೆ ನಡೆದ ಕ್ಷಣದಿಂದ ನಾನು ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ರಾತ್ರಿಯೇ ಜನತೆ ಮತ್ತು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ತಪ್ಪು ಯಾರೇ ಮಾಡಿದ್ದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದ್ದೇನೆ. ಕೊರೊನಾ ಸೋಂಕು ಹರಡದಂತೆ ರಾತ್ರಿ ಹಗಲು ಶ್ರಮಿಸುತ್ತಿರುವ ಪೊಲೀಸ್ ಮತ್ತು ವೈದ್ಯಕೀಯ ಸಿಬ್ಬಂದಿಗಳ ಜೊತೆ ಸಹಕರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಏನಾದರೂ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಬೇಕೇ ಹೊರತು ಕಾನೂನು ಉಲ್ಲಂಘನೆ ಮಾಡಿ ದಾಂಧಲೆ ಮಾಡುವುದಲ್ಲ' ಎಂದಿದ್ದಾರೆ.
ಪಾದರಾಯನಪುರದಲ್ಲಿ ಪುಂಡಾಟ; ಪೊಲೀಸರು, ಆರೋಗ್ಯ ಸಿಬ್ಬಂದಿ ಮೇಲೆ ಎರಗಿದ್ರು!
ಅಲ್ಲದೇ ಈ ಸಂಬಂಧ ನಡೆಯುವ ತನಿಖೆಗೆ ಸರ್ಕಾರಕ್ಕೆ ಸಂಪೂರ್ಣ ಸಹಕಾರ ಇದೆ ಎಂದಿರುವ ಜಮೀರ್ 'ಪಾದರಾಯನಪುರ ಗಲಾಟೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷಿಸುವ ಕೆಲಸ ಶೀಘ್ರವಾಗಿ ನಡೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಒತ್ತಾಯಿಸುತ್ತೇನೆ. ತನಿಖೆಗೆ ರಾಜ್ಯ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ' ಎಂದಿದ್ದಾರೆ.
ರಾಜಕೀಯ ಪಿತೂರಿ
ಇದೇ ಸಂದರ್ಭದಲ್ಲಿ ಈ ಗಲಭೆಯಲ್ಲಿ ರಾಜಕೀಯ ಪಿತೂರಿ ಇರುವ ಶಂಕೆಯೂ ಶಾಸಕ ಜಮೀರ್ ವ್ಯಕ್ತಪಡಿಸಿದ್ದು, 'ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆ ಹಿಂದೆ ನನ್ನ ಹೆಸರು ಕೆಡಿಸುವ ರಾಜಕೀಯ ಪಿತೂರಿ ಇರಬಹುದೆಂಬ ಸಂಶಯ ನನಗಿದೆ. ಈ ಬಗ್ಗೆ ನಾನೂ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅವೆಲ್ಲವನ್ನೂ ನಾನು ಸರ್ಕಾರದ ಗಮನಕ್ಕೆ ತರುತ್ತೇನೆ' ಎಂದಿದ್ದಾರೆ.