Asianet Suvarna News Asianet Suvarna News

ಲೈಸನ್ಸ್‌ ನವೀಕರಿಸದೇ ರಿವಾಲ್ವರ್‌ ಹೊಂದಿದ್ದ ಪ್ರಕರಣದಲ್ಲಿ ಶಾಸಕ ಸೋಮಶೇಖರ್‌ ರೆಡ್ಡಿ ದೋಷಿ!

ಲೈಸನ್ಸ್‌ ನವೀಕರಣ ಮಾಡದೆ ಅಕ್ರಮವಾಗಿ ರಿವಾಲ್ವರ್‌ ಇಟ್ಟುಕೊಂಡಿದ್ದ ಪ್ರಕರಣದಲ್ಲಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಅವರನ್ನು ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ ಅವರ ವಿರುದ್ಧ ಕೇಸ್‌ ದಾಖಲಾಗಿತ್ತು.
 

MLA Somasekhar Reddy guilty in the case of having a revolver without renewing the license san
Author
First Published Nov 3, 2022, 11:03 AM IST

ಬೆಂಗಳೂರು (ನ.3): ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮಾಡಿದ ಆರೋಪದಲ್ಲಿ ಬಳ್ಳಾರಿ ಬಿಜೆಪಿ ಶಾಸಕ ಜಿ.ಸೋಮಶೇಖರ್‌ ರೆಡ್ಡಿ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ಆದೇಶ ನೀಡಿದೆ. ತಮ್ಮಲ್ಲಿದ್ದ ರಿವಾಲ್ವರ್‌ನ ಪರವಾನಗತಿ ನವೀಕರಣ ಮಾಡದೆ ಅದನ್ನು ಇರಿಸಿಕೊಂಡಿದ್ದರು. ಈ ಕುರಿತಾಗಿ ಕೇಸ್‌ ಕೂಡ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಅವರನ್ನು ಅಪರಾಧಿ ಎಂದು ಪರಿಗಣಿಸಿದೆ. ಷರತ್ತುಗಳನ್ನು ವಿಧಿಸಿ ಸನ್ನಡತೆಯ ಮೇಲೆ ಅವರನ್ನು ಒಂದು ವರ್ಷದ ಅವಧಿಗೆ ಬಿಡುಗಡೆ ಕೂಡ ಮಾಡಲಾಗಿದೆ. ಬಳ್ಳಾರಿಯ ಬ್ರೂಸ್‌ಪೇಟೆ ಠಾಣೆಯಲ್ಲಿ ಸೋಮಶೇಖರ್‌ ರೆಡ್ಡಿ ವಿರುದ್ಧ ಕೇಸ್‌ ದಾಖಲಾಗಿತ್ತು. ಇದರ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ತನ್ನ ಆದೇಶ ಪ್ರಕಟಿಸಿದೆ. ಸಿಆರ್‌ಪಿಸಿ ಸೆಕ್ಷನ್‌ 248(2) ರ ಅಡಿ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ 25(1)(ಬಿ)(ಎಚ್) ಅಡಿಯಲ್ಲಿ  ಸೋಮಶೇಖರ್ ರೆಡ್ಡಿ ಅಪರಾಧಿ ಎಂದು ಕೋರ್ಟ್‌ ಘೋಷಣೆ ಮಾಡಿದೆ. ಸೋಮಶೇಖರ ರೆಡ್ಡಿ ಬಳಿ ಇದ್ದ ಎನ್‌ ಪಿ ಬೋರ್‌ ರಿವಾಲ್ವರ್‌ಗೆ 2005ರಲ್ಲಿ ಪರವಾನಗಿ ಪಡೆದಿದ್ದರು. ಬಳಿಕ ನಿಯಮಿತವಾಗಿ ಪರವಾನಗಿಯನ್ನು ನವೀಕರಣ ಮಾಡುತ್ತಿದ್ದರು.

2009ರ ಡಿಸೆಂಬರ್‌ 31ರ ನಂತರ ಲೈಸೆನ್ಸ್‌ ನವೀಕರಣ ಮಾಡಿರಲಿಲ್ಲ. ಪರವಾನಗಿ ನವೀಕರಣ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸನ್ನಡತೆಯ ಮೇಲೆ ಬಿಡುಗಡೆಗೆ ಸನ್ನಡೆ ಕಾಯಿದೆ ಸೆಕ್ಷನ್‌ 4ರ ಅಡಿ ಬಿಡುಗಡೆ ಆಗಿದ್ದಾರೆ. 50 ಸಾವಿರ ಮೌಲ್ಯದ ವೈಯಕ್ತಿಕ ಬಾಂಡ್‌, ಸೇರಿ ಹಲವು ಷರತ್ತು ವಿಧಿಸಿದ ಒಂದು ವರ್ಷಕ್ಕೆ ಸೋಮಶೇಖರ್‌ ರೆಡ್ಡಿ ಅವರನ್ನು ಬಿಡುಗಡೆ ಮಾಡಲಾಗಿದೆ. ಮನೆಯ ನವೀಕರಣ ಮಾಡುವ ವೇಳೆ ರಿವಾಲ್ವರ್‌ ನವೀಕರಣದ ಕಡತ ಕಳೆದು ಹೋಗಿದೆ. ಆ ಕಾರಣಕ್ಕಾಗಿ ನವೀಕರಣ ಮಾಡಿಸಿರಲಿಲ್ಲ. ಪರವಾನಗಿ ಯಾವಾಗ ಮುಗಿಯುತ್ತದೆ ಎನ್ನುವ ದಿನಾಂಕ ಕೂಡ ನೆನಪಿರಲಿಲ್ಲ ಎಂದು ಸೋಮಶೇಖರ್‌ ರೆಡ್ಡಿ ಹೇಳಿದ್ದರು.

ಆದರೆ, ವಿಚಾರಣೆ ನಡೆಸಿದ ನ್ಯಾಯಾಲಯ, 'ದೋಷಿಯಾಗಿರುವ ವ್ಯಕ್ತಿ ಇರಿಸಿಕೊಂಡಿರುವ ಅಸ್ತ್ರ ಸಾಮಾನ್ಯವಾದುದಲ್ಲ. ಮನೆಯ ನವೀಕರಣದ ವೇಳೆಯಲ್ಲಿ ಲೈಸನ್ಸ್‌ ಪುಸ್ತಕ ಕಳೆದು ಹೋಗಿದೆ ಎಂದರೆ ಅದನ್ನು ನಂಬುವುದು ಕಷ್ಟ. ಹಾಗೇನಾದರೂ ಪುಸ್ತಕ ಕಳೆದು ಹೋಗಿದ್ದರೆ, ಆ ಕುರಿತಾಗಿ ಅವರಿಗೆ ದೂರು ನೀಡುವ ಅವಕಾಶವೂ ಇತ್ತು. ಆರೋಪಿಯಾಗಿರುವ ವ್ಯಕ್ತಿ ಜನಪ್ರತಿನಿಧಿ. ಇಂಥ ಪ್ರಮುಖ ಸ್ಥಾನದಲ್ಲಿ ಇದ್ದುಕೊಂಡು ಈ ರೀತಿಯ ನಿರ್ಲಕ್ಷ್ಯದ ಧೋರಣೆ ತೋರಿರುವುದು ಅಪಾಯಕಾರಿ' ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್‌ ಆದೇಶದಲ್ಲಿ ತಿಳಿಸಿದ್ದಾರೆ.

RSS ಬಗ್ಗೆ ಇನ್ನೊಮ್ಮೆ ಮಾತನಾಡಿದ್ರೆ ಛೀಮಾರಿ ಹಾಕ್ಬೇಕಾಗುತ್ತೆ: HDK ವಿರುದ್ಧ ರೆಡ್ಡಿ ಕಿಡಿ

ಆದರೆ, ಆರೋಪಿಯ ಈ ಹಿಂದೆ ಯಾವುದೇ ಘೋರ ಅಪರಾಧವಾಗಲಿ ಕ್ರಿಮಿನಲ್‌ ಸಂಚಿನಲ್ಲಾಗಲಿ ಭಾಗಿಯಾಗಿಲ್ಲ. ಅವರ ವಿರುದ್ಧ ಈ ಪ್ರಕರಣ ಹೊರತುಪಡಿಸಿದಂತೆ ಬೇರೆ ಯಾವುದೇ ಅಪರಾಧ ಪ್ರಕರಣಗಳಿಲ್ಲ ಎನ್ನುವ ಅಭಿಪ್ರಾಯವನ್ನೂ ಕೋರ್ಟ್‌ ಪಡೆದುಕೊಂಡಿದ್ದು ಆ ಕಾರಣಕ್ಕಾಗಿ ಅವರನ್ನು ಷರತ್ತುಗಳ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ.

ನನ್ನನ್ನೂ ಮಂತ್ರಿ ಮಾಡಿ: ಸೋಮಶೇಖರ ರೆಡ್ಡಿ

ಒಂದು ವರ್ಷದ ಅವಧಿಗೆ ಷರತ್ತುಗಳ ಮೇಲೆ ಅವರನ್ನು ಬಿಡುಗಡೆ ಮಾಡಲಾಗುತ್ತಿದ್ದರೂ, ಮೂರು ತಿಂಗಳಿಗೊಮ್ಮೆ ಅವರು ನ್ಯಾಯಾಲಯದ ಮುಂದೆ ಹಾಜಾರಾಗಬೇಕು. ಅಶಾಂತಿಗೆ ಕಾರಣವಾಗುವಂಥ ಯಾವುದೇ ಪ್ರಕರಣಗಳಲ್ಲಿ ಅವರು ಹೆಸರು ಸೇರಬಾರದು. ಶಸ್ತ್ರಾಸ್ತ್ರ ಕಾಯ್ದೆಯಡಿ ಅವರು 50 ಸಾವಿರದ ಬಾಂಡ್‌ ನೀಡಬೇಕು. ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ವಿದೇಶ ಪ್ರಯಾಣ ಮಾಡುವಂತಿಲ್ಲ ಎನ್ನುವ ಷರತ್ತುಗಳನ್ನು ಕೋರ್ಟ್‌ ವಿಧಿಸಿದೆ.
 

Follow Us:
Download App:
  • android
  • ios