ಬೆಂಗಳೂರು (ಆ.20): ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಗಳ ಚಾರಿತ್ರ್ಯವಧೆಯಾಗುವಂತಹ ಸಂದೇಶಗಳನ್ನು ಹರಡುವುದಕ್ಕೆ ನಿಯಂತ್ರಣ ಮಾಡದಿದ್ದರೆ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುತ್ತದೆ. 

ಹೀಗಾಗಿ ವ್ಯಕ್ತಿತ್ವ ಚಾರಿತ್ರ್ಯ ವಧೆಯಾಗುವಂತಹ ಸಂದೇಶಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎನ್‌.ಮಹೇಶ್‌ ಮನವಿ ಮಾಡಿದ್ದಾರೆ. ಬುಧವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರುದ್ಧ ಸಂದೇಶಗಳನ್ನು ಹರಿಬಿಡುತ್ತಿರುವ ಕುರಿತು ಮಾಹಿತಿ ನೀಡಿದರು. ತಮ್ಮ ಚಾರಿತ್ರ್ಯವಧೆ ಮಾಡಲಾಗುತ್ತಿದ್ದು, ಆ ರೀತಿ ಪೋಸ್ಟ್‌ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದರು.

ಗ್ರಾಮ ಪಂಚಾಯತ್ ಚುನಾವಣೆ ನಡೆಸಲು ಸರ್ಕಾರ ಸಿದ್ಧವೆಂದ ಸಚಿವ ಈಶ್ವರಪ್ಪ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ಕೆಲವರು ವ್ಯಕ್ತಿಗಳ ಚಾರಿತ್ರ್ಯವಧೆ ಮಾಡುತ್ತಿದ್ದು, ಸಮುದಾಯ, ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವ​ರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾಗಿ ಹೇಳಿದರು.

ಇದನ್ನು ನಿಯಂತ್ರಣ ಮಾಡಲು ಶಕ್ತಿಯುತವಾಗಿ ಕೆಲಸ ಮಾಡಬೇಕು. ಸೈಬರ್‌ ಕ್ರೈಂ ಅನ್ನು ಮತ್ತಷ್ಟುಶಕ್ತಿಯುತವಾಗಿ ಮಾಡಬೇಕು. ಪ್ರತಿ ಜಿಲ್ಲೆಯಲ್ಲೂ ಈ ಬಗ್ಗೆ ನಿಗಾವಹಿಸಬೇಕು.

ರಂಗೇರಿದ ತುಮಕೂರು ರಾಜಕಾರಣ: ಸಂಚಲನ ಮೂಡಿಸಿದ ರಾಜಣ್ಣ ನಡೆ

ನನ್ನ ಮನವಿಗೆ ಸ್ಪಂದಿಸಿ ಪ್ರತಿ ಜಿಲ್ಲೆಗೊಬ್ಬ ವಿಶೇಷ ವ್ಯಕ್ತಿಯನ್ನು ನಿಯೋಜನೆ ಮಾಡಲಾಗುವುದು ಎಂದು ಗೃಹ ಸಚಿವರು ಆಶ್ವಾಸನೆ ನೀಡಿದ್ದಾರೆ. ಒಂದು ವರ್ಷದಿಂದ ನನ್ನ ಬಗ್ಗೆ ನಾಲ್ಕೈದು ಮಂದಿ ನಿತ್ಯ ಸಂದೇಶಗಳನ್ನು ಹಾಕುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮಕ್ಕೆ ಚಾಮರಾಜನಗರ ಜಿಲ್ಲಾಧಿಕಾರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.