‘ನನ್ನ ಗಂಡನ ಮುಟ್ಟಿದ್ದು ನಿಜವಾದರೆ ಸುಮ್ಮನಿರಲ್ಲ’| ಖಂಡಿತಾ ಕಾನೂನು ಹೋರಾಟ ಮಾಡುವೆ| ಕಂಪ್ಲಿ ಶಾಸಕ ಗಣೇಶ್ ವಿರುದ್ಧ ಆನಂದ ಸಿಂಗ್ ಪತ್ನಿ ಗುಡುಗು
ಬೆಂಗಳೂರು[ಜ.21]: ನನ್ನ ಪತಿ ಆನಂದ್ ಸಿಂಗ್ ಅವರನ್ನು ಕಂಪ್ಲಿ ಶಾಸಕ ಗಣೇಶ್ ಮುಟ್ಟಿದ್ದಾರೆ ಎಂಬುದು ಖಚಿತವಾದರೆ ನಾನಂತೂ ಸುಮ್ಮನೆ ಬಿಡುವುದಿಲ್ಲ. ಖಂಡಿತಾ ಕಾನೂನು ಹೋರಾಟ ಮಾಡುತ್ತೇನೆ ಎಂದು ಆನಂದ್ ಸಿಂಗ್ ಅವರ ಪತ್ನಿ ಲಕ್ಷ್ಮೇ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೀಮಾನಾಯ್‌್ಕ, ಕಂಪ್ಲಿ ಶಾಸಕ ಗಣೇಶ್ ಹಾಗೂ ನನ್ನ ಪತಿ ಉತ್ತಮ ಸ್ನೇಹಿತರಾಗಿದ್ದರು. ಅವರ ನಡುವೆ ನನಗಿರುವ ಮಾಹಿತಿ ಪ್ರಕಾರ ಈ ಹಿಂದೆ ಯಾವ ಭಿನ್ನಾಭಿಪ್ರಾಯವೂ ಇರಲಿಲ್ಲ. ಶುಕ್ರವಾರ ವಿಧಾನಸೌಧದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭೀಮಾನಾಯ್‌್ಕ ವಿರುದ್ಧ ಜೋರಾಗಿ ಮಾತನಾಡಬೇಕಾಯಿತು ಎಂದು ನನ್ನ ಪತಿ ಹೇಳಿದ್ದರು. ಬಳಿಕ ಈಗಲ್ಟನ್ ರೆಸಾರ್ಟ್‌ಗೆ ಸ್ಥಳಾಂತರಗೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇದನ್ನು ಹೊರತುಪಡಿಸಿ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಶನಿವಾರ ರಾತ್ರಿ ಮುಂಬೈನ ಕಾರ್ಯಕ್ರಮ ಮುಗಿದ ಬಳಿಕ ನನ್ನ ಪತಿಗೆ ಕರೆ ಮಾಡಿದ್ದೆ. ಆಗಲೂ ಅವರು ಯಾವುದೇ ವಿಚಾರ ಹೇಳಿರಲಿಲ್ಲ. ಭಾನುವಾರ ಬೆಳಗ್ಗೆ ಎದ್ದಾಗಲೇ ಈ ವಿಷಯ ತಿಳಿಯಿತು. ನನ್ನ ಮಗ ಈ ವಿಷಯವಾಗಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಕರೆ ಮಾಡಿದರೆ, ನಿಮ್ಮ ತಂದೆ ಆರಾಮವಾಗಿದ್ದಾರೆ. 4-5 ನಿಮಿಷದ ಬಳಿಕ ಮಾತನಾಡಿಸುತ್ತೇನೆ ಎಂದಿದ್ದರು. 4-5 ಗಂಟೆಯಾದರೂ ಅವರು ಪುನಃ ನಮಗೆ ಕರೆ ಮಾಡಿಲ್ಲ. ಒಂದು ವೇಳೆ ಗಣೇಶ್ ನನ್ನ ಪತಿಯನ್ನು ಮುಟ್ಟಿದ್ದರೂ ನಾನು ಸುಮ್ಮನೆ ಕೂರುವುದಿಲ್ಲ. ಕಾನೂನು ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಹಲ್ಲೆ ನಡೆದಿರುವುದು ಸುಳ್ಳು
ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆದಿದೆ ಎನ್ನುವುದು ಸುಳ್ಳು ಸುದ್ದಿ. ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ರಾತ್ರಿ ರೆಸಾರ್ಟ್‌ನಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಆಸ್ಪತ್ರೆಯಲ್ಲಿ ಅವರಿಗೆ ರಕ್ತದೊತ್ತಡ, ಇಸಿಜಿ, ಸಕ್ಕರೆ ಅಂಶದ ಪರೀಕ್ಷೆ ನಡೆದಿದೆ. ಸದ್ಯ ಆರಾಮವಾಗಿದ್ದು, ಅವರ ಕುಟುಂಬದವರೂ ಜೊತೆಗಿದ್ದಾರೆ. ಆನಂದ್ ಸಿಂಗ್‌ಗೆ ಏನೂ ಗಾಯವಾಗಿಲ್ಲ. ಒಂದು ವೇಳೆ ಗಲಾಟೆ ಆಗಿದೆ ಎಂದಾದರೆ ಕಂಪ್ಲಿ ಶಾಸಕ ಗಣೇಶ್ ಹಾಗೂ ಆನಂದ್ ಸಿಂಗ್ ಅವರೇ ಹೇಳಬೇಕು.
- ಡಿ.ಕೆ. ಸುರೇಶ್, ಬೆಂಗಳೂರು ಗ್ರಾಮಾಂತರ ಸಂಸದ
