ಚಿಕ್ಕಮಗಳೂರಿನ ಮಾಣಿಕ್ಯಧಾರಕ್ಕೆ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಮೂರು ದಿನಗಳ ತೀವ್ರ ಶೋಧ ಕಾರ್ಯಾಚರಣೆಯ ನಂತರ, ಆಕೆಯ ಮೃತದೇಹವು 1500 ಅಡಿ ಆಳದ ಪ್ರಪಾತದಲ್ಲಿ ಪತ್ತೆಯಾಗಿದೆ. ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ದುರಂತವೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರು: ಪ್ರವಾಸಕ್ಕೆ ಚಿಕ್ಕಮಗಳೂರಿಗೆ ಬಂದಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (14) ಪ್ರಪಾತದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಏಪ್ರಿಲ್ 7ರಂದು ಕುಟುಂಬದವರೊಂದಿಗೆ ಚಿಕ್ಕಮಗಳೂರಿನ ಮಾಣಿಕ್ಯಧಾರಕ್ಕೆ ಪ್ರವಾಸಕ್ಕೆ ಬಂದಿದ್ದಳು. ಮಂಗಳವಾರ ಸಂಜೆ ಸುಮಾರು 5.30ರ ವೇಳೆ ಆಕೆ ಆಕಸ್ಮಿಕವಾಗಿ ನಾಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಸ್ಥಳೀಯರು ತಕ್ಷಣವೇ ಹುಡುಕಾಟ ಆರಂಭಿಸಿದ್ದು, ನಂತರ ಪೊಲೀಸ್ ಇಲಾಖೆ ಹಾಗೂ ರಕ್ಷಣಾ ತಂಡಗಳು ಕೂಡ ಕಾರ್ಯಾಚರಣೆಗೆ ಮುಂದಾಗಿದ್ದವು.

ಮೂರು ದಿನಗಳ ಕಾಲ ನಿರಂತರ ಶೋಧ ಕಾರ್ಯಾಚರಣೆ ನಡೆದ ಬಳಿಕ, ಅರಿಶಿನಗುಪ್ಪೆ ಭಾಗದಿಂದ ಹೊರಟ ಶೋಧ ತಂಡಕ್ಕೆ ಸುಮಾರು 5 ಕಿಲೋಮೀಟರ್ ದೂರದಲ್ಲಿರುವ ಆಳವಾದ ಕಂದಕದ ಬಳಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ಪ್ರಪಾತವು ಸುಮಾರು 1500 ಅಡಿ ಆಳವಿದೆ. ಅತ್ಯಂತ ದುರ್ಗಮ ಪ್ರದೇಶವಾಗಿರುವ ಕಾರಣ ಶವವನ್ನು ಹೊರತೆಗೆದು ಮೇಲೆ ಎತ್ತಿಕೊಂಡು ಬರುವ ಕಾರ್ಯವೂ ಸವಾಲಿನದ್ದಾಗಿತ್ತು.

ಘಟನೆಯ ಕುರಿತು ಪೊಲೀಸರು ಪ್ರಾಥಮಿಕವಾಗಿ ಆತ್ಮ*ಹತ್ಯೆಯ ಶಂಕೆಯನ್ನು ವ್ಯಕ್ತಪಡಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ. ಆದರೆ ಕುಟುಂಬದವರು ಕಾಲು ಜಾರಿ ಬಿದ್ದು ಈ ದುರ್ಘಟನೆ ಸಂಭವಿಸಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಘಟನೆ ಹಿನ್ನೆಲೆ

ಬೇಸಿಗೆ ರಜೆ ಪ್ರವಾಸಕ್ಕೆಂದು ಮಂಗಳವಾರ ಚಿಕ್ಕಮಗಳೂರಿಗೆ 40 ಮಂದಿಯ ಕುಟುಂಬ ಆಗಮಿಸಿತ್ತು. ದತ್ತಪೀಠದ ತಪ್ಪಲಿನ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ 14 ವರ್ಷದ ಬಾಲಕಿ ಅಂದು ಸಂಜೆ 5.30ರ ಸುಮಾರಿಗೆ ನಿಗೂಢ ನಾಪತ್ತೆಯಾಗಿದ್ದಳು. 3 ದಿನಗಳ ಶೋಧ ನಡೆಸಿದ ಬಳಿಕ ಈಗ ಶವ ಪತ್ತೆಯಾಗಿದೆ.

ಈಕೆಯ ಹುಡುಕಾಟಕ್ಕೆ ಪೊಲೀಸರಿಗೆ, ಅರಣ್ಯ ಇಲಾಖೆ, ಅಗ್ನಿ ಶಾಮಕ ಇಲಾಖೆ, ಡಾಗ್‌ ಸ್ಕ್ವಾಡ್, ಎಸ್‌ಡಿಆರ್‌ಎಫ್‌ ಅಧಿಕಾರಿ, ಸಿಬ್ಬಂದಿ ಸೇರಿ 60ಕ್ಕೂ ಹೆಚ್ಚು ಸಿಬ್ಬಂದಿ 5 ಪ್ರತ್ಯೇಕ ತಂಡಗಳಾಗಿ ಕಾಡಿನೊಳಗೆ ಹುಡುಕಾಟ ನಡೆಸಿದ್ದರು. ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಪ್ರದೇಶದಲ್ಲಿ ಶ್ರೀನಂದಾ ಪತ್ತೆಗೆ ಥರ್ಮಲ್‌ ಕ್ಯಾಮರಾ (ಉಷ್ಣಾಂಶದ ಆಧಾರದ ಮೇಲೆ ಪತ್ತೆ ಹಚ್ಚುವ ಡ್ರೋನ್ ) ಬಳಕೆಗೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಸೂಚನೆ ಕೂಡ ನೀಡಿದ್ದ ಹಿನ್ನೆಲೆ ಈ ಮೂಲಕವೂ ಹುಡುಕಾಟ ನಡೆದಿತ್ತು.

ಕ್ಷಣಾರ್ಧದಲ್ಲಿ ಮಾಯವಾದ ಬಾಲಕಿ

ಆ ದಿನ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಮಾಣಿಕ್ಯಾಧಾರದ ಮೆಟ್ಟಿಲುಗಳನ್ನು ಇಳಿಯುತ್ತಿದ್ದರು. ಕುಟುಂಬದ ಸದಸ್ಯರೆಲ್ಲಾ ಮುಂದೆ ಹೋಗುತ್ತಿದ್ದರೆ, ಬಾಲಕಿ ಶ್ರೀನಂದ ಅವರ ಹಿಂದೆಯೇ ಬರುತ್ತಿದ್ದಳು. ಆದರೆ, ಒಂದು ತಿರುವಿನಲ್ಲಿ ನೋಡುವಷ್ಟರಲ್ಲಿ ಆಕೆ ಅಲ್ಲಿರ ಲಿಲ್ಲ. ಕ್ಷಣಾರ್ಧದಲ್ಲಿ ಬಾಲಕಿ ದಟ್ಟ ಕಾನನದ ನಡುವೆ ನಾಪತ್ತೆಯಾದಳು. ತಕ್ಷಣವೇ ಕುಟುಂಬಸ್ಥ ಸುತ್ತಮುತ್ತ ಗಾಬರಿಯಿಂದ ಹುಡುಕಾಡಿದರೂ ಆಕೆಯ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈಗ ಇರುವ ಅನುಮಾನ ಬಾಲಕಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗಿದ್ದಾಳೋ ಅಥವಾ ಆಕಸ್ಮಿಕವಾಗಿ ಕಂದಕಕ್ಕೆ ಬಿದ್ದಿದ್ದಾಳೋ, ಇಲ್ಲವೇ ಆತ್ಮ*ಹತ್ಯೆಯೇ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈದ್ಯಕೀಯ ಪರೀಕ್ಷೆ ಬಳಿಕ ಸತ್ಯಾಸತ್ಯತೆ ಹೊರಬೀಳಲಿದೆ.