Bengaluru Stone Pelting: ಬೆಂಗಳೂರಿನ ಜೆ.ಜೆ.ನಗರದಲ್ಲಿ ಓಂಶಕ್ತಿ ದೇವಿಯ ತೇರು ಎಳೆಯುತ್ತಿದ್ದ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಈ ಘಟನೆಯಲ್ಲಿ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು: ದೇವಿಯ ತೇರು ಎಳೆಯುತ್ತಿರುವ ವೇಳೆ ಓಂ ಶಕ್ತಿ ಮಾಲಾಧಾರಿಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿರುವ ಘಟನೆ ಚಾಮರಾಜಪೇಟೆ ಬಳಿಯ ಜೆ.ಜೆ.ನಗರ (ಜಗಜೀವನ್ ರಾಮ್ ನಗರ) ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.
ಜೆ.ಜೆ.ನಗರದ ವಿ.ಎಸ್ ಗಾರ್ಡಡ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ರಾತ್ರಿ 8 ಗಂಟೆಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ವರದರಾಜು ಎಂಬುವರ ಅಪ್ರಾಪ್ತ ಮಗಳ ತಲೆಗೆ ಗಂಭೀರವಾದ ಗಾಯವಾಗಿದೆ. ಜತೆಗೆ ಇಬ್ಬರು ಮಹಿಳೆಯ ಕಾಲಿಗೆ ಗಾಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಜೆ.ಜೆ ನಗರ ಠಾಣೆ ಪೊಲೀಸರು ಮತ್ತು ಎಸಿಪಿ ಭರತ್‌ರೆಡ್ಡಿ ಸೇರಿ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಘಟನೆಯಿಂದ ಸಿಡಿದೆದ್ದಿರುವ ಓಂ ಶಕ್ತಿ ಮಾಲಾಧಾರಿಗಳು ಮತ್ತು ನೂರಾರು ಸ್ಥಳೀಯರು ಜೆ.ಜೆ ನಗರ ಠಾಣೆ ಮುಂದೆ ಜಮಾಯಿಸಿ ಕಲ್ಲು ತೂರಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ದೇವಾಲಯದ ಮುಂದೆ ಹಾಗೂ ಜೆ.ಜೆ ನಗರ ಠಾಣೆ ಮುಂದೆ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಸ್ಥಳದಿಂದ ತೆರಳುವಂತೆ ಸೂಚಿಸಿದರು. ಪೊಲೀಸರ ಸೂಚನೆಗೆ ಜಗ್ಗದೇ ನೂರಾರು ಮಂದಿ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಈ ಹಿಂದೆಯೂ ಕಲ್ಲು ತೂರಾಟ
ಈ ರೀತಿ ಕಲ್ಲು ತೂರಿದ ಘಟನೆಗಳು ಈ ಹಿಂದೆಯೂ ನಡೆದಿದೆ. ಮಾರಮ್ಮ ದೇವಾಲಯದ ಬಳಿ ಕಳೆದ ಬಾರಿ ಅನ್ಯಕೋಮಿನವರು ಕಲ್ಲು ತೂರಿದ್ದರು. ಅಷ್ಟೇ ಇತ್ತೀಚೆಗೆ ಅಯ್ಯಪ್ಪನ ಭಜನೆ ಮಾಡುತ್ತಿರುವಾಗ ಅನ್ಯಕೋಮಿನವರು ವಾಟರ್ ಬಾಟಲ್‌ಗಳನ್ನು ತೂರಿದ್ದರು. ಈ ರೀತಿಯ ಘಟನೆ ಮೂರ್ನಾಲ್ಕು ಬಾರಿ ಆಗಿದೆ. ಇನ್ನಾದರೂ ಪೊಲೀಸರು ಎಚ್ಚೆತ್ತು ಕಲ್ಲು ತೂರಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅನ್ಯಕೋಮುಗಳ (ಮುಸ್ಲಿಂ) ಏರಿಯಾದಿಂದ ಕಲ್ಲುಗಳು ತೂರಿ ಬಂದಿದೆ. ಅವರೇ ಕಲ್ಲು ಎಸೆದಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಕಲ್ಲು ಎಸೆದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಗಾಯಗೊಂಡಿರುವ ಬಾಲಕಿಯ ತಂದೆ ವರದರಾಜು ಹೇಳಿದ್ದಾರೆ.

ಕಲ್ಲು ಎಸೆದವರು ಅಪ್ರಾಪ್ತ ಬಾಲಕರು?
ದೇವಿಯ ತೇರು ಎಳೆಯುತ್ತಿರುವ ವೇಳೆ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಅಪ್ರಾಪ್ತ ಬಾಲಕರು ಕಲ್ಲು ತೂರಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



