ತುಮಕೂರು :  ಹಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿರುವ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದೆ ಎಂದು ಸಿದ್ಧಗಂಗಾ ಆಸ್ಪತ್ರೆ ವೈದ್ಯ ಡಾ. ಪರಮೇಶ್‌ ತಿಳಿಸಿದ್ದಾರೆ.

ಶನಿವಾರ ಶ್ರೀಗಳ ತಪಾಸಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಅಂಶಗಳು ಸಾಮಾನ್ಯವಾಗಿವೆ. ಆಲ್ಬಮಿನ್‌ ಶುಕ್ರವಾರಕ್ಕಿಂತ ಶನಿವಾರ 1 ಪಾಯಿಂಟ್‌ ಹೆಚ್ಚಾಗಿದೆ. ಶುಕ್ರವಾರ 5 ಗಂಟೆಗಳ ಕಾಲ ಸಹಜ ಉಸಿರಾಟ ನಡೆಸಿದ್ದರು. ಶನಿವಾರ ಸಹ ಮುಂಜಾನೆ 6 ರಿಂದ 10 ಗಂಟೆಯವರೆಗೆ ಸ್ವತಃ ಉಸಿರಾಟ ಮಾಡಿದ್ದಾರೆ ಎಂದರು.

ರಕ್ತ ಪರೀಕ್ಷೆಯಲ್ಲಿ ಸೋಂಕಿನ ಅಂಶ ಕಡಿಮೆಯಾಗಿದೆ. ಶ್ವಾಸಕೋಶ ಹಾಗೂ ಹೊಟ್ಟೆಭಾಗದಲ್ಲಿ ಎಂದಿನಂತೆ ನೀರು ತುಂಬಿಕೊಳ್ಳುತ್ತಿದೆ. ಕಣ್ಣು ಬಿಡುತ್ತಿದ್ದು, ಕೈ ಕಾಲು ಆಡಿಸುತ್ತಿದ್ದಾರೆ. 8 ಮಂದಿ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮಲ್ಲಿ ಕಾರ್ಡಿಯಾಲಜಿಸ್ಟ್‌ ಸೇರಿದಂತೆ ಎಲ್ಲಾ ಸ್ಪೆಷಲಿಸ್ಟ್‌ಗಳಿದ್ದಾರೆ. ಡಾ.ರೆಲಾ ಮತ್ತು ಡಾ.ರವೀಂದ್ರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಶ್ರೀಗಳ ಶ್ವಾಸಕೋಶ ಹಾಗೂ ಹೊಟ್ಟೆಭಾಗದಲ್ಲಿ ತುಂಬಿಕೊಂಡಿದ್ದ ನೀರನ್ನು ಶನಿವಾರ ತೆಗೆಯಲಾಯಿತು ಎಂದು ತಿಳಿದು ಬಂದಿದೆ.

ಈ ನಡುವೆ, ರಂಭಾಪುರಿ ಶ್ರೀಗಳು, ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮೀಜಿ, ಸಂಸದ ಎಸ್‌.ಪಿ.ಮುದ್ದ ಹನುಮೇಗೌಡ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, ಶಾಸಕ ವಿ. ಸೋಮಣ್ಣ ಸೇರಿದಂತೆ ಅನೇಕ ಪ್ರಮುಖರು ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು, ಅವರ ಆರೋಗ್ಯ ವಿಚಾರಿಸಿದರು.

ಭಕ್ತರ ಸಂಖ್ಯೆಯಲ್ಲಿ ವಿರಳ:

ಶ್ರೀಗಳ ದರ್ಶನ ಪಡೆಯಲೆಂದು ಶನಿವಾರ ಸಹ ಮಠಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಕಳೆದೆರಡು ದಿನಗಳಿಗೆ ಹೋಲಿಕೆ ಮಾಡಿದರೆ ಶನಿವಾರ ಆಗಮಿಸಿದ ಭಕ್ತರ ಸಂಖ್ಯೆ ಕೊಂಚ ವಿರಳವಿತ್ತು. ಆದರೆ ಎಂದಿನಂತೆ ಪೊಲೀಸ್‌ ಭದ್ರತೆ ಮುಂದುವರೆದಿತ್ತು.

ಅಂಧ ಮಕ್ಕಳಿಂದ ಮಂತ್ರ ಪಠಣ:

ಈ ನಡುವೆ ಸಿದ್ಧಗಂಗಾ ಮಠದಲ್ಲಿನ 30ಕ್ಕೂ ಹೆಚ್ಚು ಅಂಧ ಮಕ್ಕಳು ಶ್ರೀಗಳು ಚಿಕಿತ್ಸೆ ಪಡೆಯುತ್ತಿರುವ ಹಳೆ ಮಠಕ್ಕೆ ಆಗಮಿಸಿ, ಓಂ ನಮಃ ಶಿವಾಯ ಮಂತ್ರ ಪಠಿಸಿದರು. ಮಠದ ಆವರಣದಲ್ಲೇ ನಿಂತು ಶ್ರೀಗಳ ಕಿವಿಗೆ ಕೇಳಲಿ ಎಂದು ವಚನಗಳನ್ನು ಹಾಡಿದರು.

ನಸು ನಕ್ಕ ಶ್ರೀಗಳು!

ವೈದ್ಯಕೀಯ ಲೋಕವೇ ಪವಾಡ ಎನ್ನುವಂತೆ ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಶನಿವಾರ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಶಿವಕುಮಾರ ಸ್ವಾಮೀಜಿಗಳು ಕಣ್ಣು ತೆರೆದು ನಸು ನಕ್ಕಿದ್ದಾರೆ. ಅಲ್ಲದೇ ಭಕ್ತರನ್ನು ಕಣ್ತೆರೆದು ನೋಡಿದ್ದಾರೆ. ಇಷ್ಟಲಿಂಗ ಪೂಜೆ ಮಾಡುವಾಗ ಅದರಲ್ಲೂ ಶ್ರೀಗಳು ಸ್ವಲ್ಪ ಮಟ್ಟಿಗೆ ಭಾಗಿಯಾಗಿದ್ದು, ಆರೋಗ್ಯದಲ್ಲಿ ಶುಕ್ರವಾರಕ್ಕಿಂತ ಶನಿವಾರ ಚೇತರಿಕೆ ಕಂಡು ಬಂದಿದೆ ಎಂದು ಕಿರಿಯ ಶ್ರೀಗಳು ಇದೇ ವೇಳೆ ತಿಳಿಸಿದ್ದಾರೆ.