ರಾಜ್ಯದ 18 ಕಡೆ ಅಶೋಕ್ ದಾಖಲೆ ಗ್ರಾಮ ವಾಸ್ತವ್ಯ: ಮತ್ತೆ ರಾಜ್ಯದಲ್ಲಿ ನಮ್ಮದೇ ಸರ್ಕಾರವೆಂದ ಕಂದಾಯ ಸಚಿವ
ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ 18 ಕಡೆ ಗ್ರಾಮ ವಾಸ್ತವ್ಯ ಮಾಡಿದ ತೃಪ್ತಿ ನನಗಿದೆ. ಜನತೆ ಇದಕ್ಕೆ ತುಂಬು ಹೃದಯದ ಸಹಕಾರ ನೀಡಿದ್ದಾರೆ. ಮತ್ತೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದೆ. ಮತ್ತೆ ಗ್ರಾಮವಾಸ್ತವ್ಯ ಮುಂದುವರಿಸುವ ಆಸೆ ನನ್ನದು ಎಂದು ಕಂದಾಯ ಸಚಿವ ಆರ್.ಅಶೋಕ ಆಶಾವಾದ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ (ಫೆ.26): ನನ್ನ ಅಧಿಕಾರದ ಅವಧಿಯಲ್ಲಿ ರಾಜ್ಯದ 18 ಕಡೆ ಗ್ರಾಮ ವಾಸ್ತವ್ಯ ಮಾಡಿದ ತೃಪ್ತಿ ನನಗಿದೆ. ಜನತೆ ಇದಕ್ಕೆ ತುಂಬು ಹೃದಯದ ಸಹಕಾರ ನೀಡಿದ್ದಾರೆ. ಮತ್ತೆ ರಾಜ್ಯದಲ್ಲಿ ನಮ್ಮದೇ ಸರ್ಕಾರ ಬರಲಿದೆ. ಮತ್ತೆ ಗ್ರಾಮವಾಸ್ತವ್ಯ ಮುಂದುವರಿಸುವ ಆಸೆ ನನ್ನದು ಎಂದು ಕಂದಾಯ ಸಚಿವ ಆರ್.ಅಶೋಕ ಆಶಾವಾದ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಶನಿವಾರ ದಾಖಲೆಯ 18ನೇ ಗ್ರಾಮ ವಾಸ್ತವ್ಯ ನಡೆಸಿದ ಅಶೋಕ್, ನನ್ನ ಪಾಲಿಗೆ ಇದೊಂದು ದಾಖಲೆ.
ಗ್ರಾಮದಲ್ಲಿಯೇ 24 ಗಂಟೆಗಳ ಕಾಲ ಕಳೆದು ಗ್ರಾಮಸ್ಥರ ಜೊತೆಯಲ್ಲಿಯೇ ಊಟ, ಉಪಹಾರ ಮಾಡಿ ದಲಿತ ಕೇರಿಗೆ ತೆರಳಿ ಅವರ ಜೊತೆ ಅವರೆ ಮಾಡಿದ ಕೈ ಊಟವನ್ನು ಮಾಡಿದ ತೃಪ್ತಿ ನನ್ನದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬಹುಶ: ಇದೇ ಈ ಸರ್ಕಾರದ ಕೊನೆಯ ಗ್ರಾಮ ವಾಸ್ತವ್ಯ ಆಗಬಹುದು. ಮತ್ತೆ ನಮ್ಮ ಸರ್ಕಾರ ಬಂದರೆ ಗ್ರಾಮವಾಸ್ತವ್ಯ ಮುಂದುವರಿಸುತ್ತೇವೆ ಎಂದು ಹೇಳಿದರು. ಜಗತ್ತಿನಲ್ಲಿ ಸೂರ್ಯ, ಚಂದ್ರ ಇರೋದು ಎಷ್ಟುಸತ್ಯವೋ, ನಮ್ಮ ಸರ್ಕಾರ ಬರೋದು ಅಷ್ಟೇ ಸತ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಚ್‌ಡಿಕೆಯದ್ದು ಬ್ರಿಟಿಷರ ರೀತಿ ಒಡೆದಾಳುವ ನೀತಿ: ಸಚಿವ ಅಶೋಕ್
ಗ್ರಾಮ ವಾಸ್ತವ್ಯ ತೃಪ್ತಿ ಕೊಟ್ಟಿದೆ: ಕಂದಾಯ ಸಚಿವರಾದ ಬಳಿಕೆ ಅಲ್ಲಿಂದ ಇಲ್ಲಿವರೆಗೂ ಎಲ್ಲೆಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೋ ಅವೆಲ್ಲವೂ ನನಗೆ ತೃಪ್ತಿ ಕೊಟ್ಟಿದೆ. ನಾನು ಕಾಡಿನಂಚಿನಲ್ಲೂ ವಾಸ್ತವ್ಯ ಮಾಡಿದ್ದೇನೆ. ನನ್ನ ಹೆಚ್ಚು ಗ್ರಾಮ ವಾಸ್ತವ್ಯಗಳು ಆಗಿದ್ದು ಉತ್ತರ ಕರ್ನಾಟಕದಲ್ಲಿ. ಹಳೆ ಮೈಸೂರು ಭಾಗದಲ್ಲಿ ಮೂರ್ನಾಲ್ಕು ಆಗಿವೆ. ಉತ್ತರ ಕರ್ನಾಟಕದ ಜನ ಪ್ರೀತಿ ತೋರಿಸಿದ್ದಾರೆ. ಕಾಡು ಪ್ರದೇಶದಲ್ಲಿ ಹೋದಾಗ, ಅಲ್ಲಿನ ಜನರನ್ನು ನೋಡಿದರೆ ಕಣ್ಣೀರು ಬರುತ್ತದೆ. ನಾವೆಲ್ಲ ಇಡ್ಲಿ, ಸಾಂಬಾರ, ವಡೆ ತಿಂತೀವಿ. ಆದರೆ, ಅವರೆಲ್ಲ ಬರೀ ಗೆಡ್ಡೆ-ಗೆಣಸು ತಿಂದು ಬದುಕುತ್ತಾರೆ. ನಾವೆಲ್ಲ 21ನೇ ಶತಮಾನ ದಾಟಿದ್ದರೂ, ಅವರ ಕಡೆ ಗಮನ ಹರಿಸಿಲ್ಲ. ಆದರೂ, ನಾನು ಆ ಕಡೆ ಭೇಟಿ ಮಾಡಿ, ಎಲ್ಲ ಸವಲತ್ತುಗಳು ಸಿಗಲು ಎಲ್ಲ ಆದೇಶ ಮಾಡಿದ್ದೇನೆ. ಇದಕ್ಕೆ ಕಾರಣ ನಾನು ಸ್ಥಳದಲ್ಲಿ ವಾಸ್ತವ್ಯ ಮಾಡಿದ್ದು ಎಂದರು.
ಇಲಾಖೆಯ ಮುಖ್ಯಸ್ಥರ ಜೊತೆ ಚರ್ಚಿಸುವೆ: ಎನ್‌ಪಿಎಸ್ ನೌಕರರ ಮುಂದುವರಿದ ಆತ್ಮಹತ್ಯೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎನ್‌ಪಿಎಸ್ ನನ್ನ ಇಲಾಖೆಗೆ ಬರಲ್ಲ. ಆದರೂ, ಶಿಕ್ಷಣ ಇಲಾಖೆಯ ಸಚಿವರ ಜೊತೆ ಮಾತನಾಡುತ್ತೇನೆ. ಎಲ್ಲರಿಗೂ ನ್ಯಾಯ ಕೊಡಬೇಕು. ನ್ಯಾಯ ಕೊಡುವುದರಲ್ಲಿ ತಪ್ಪಾದರೆ ನಿಜಕ್ಕೂ ಅಧಿಕಾರಿಗಳಿಗೆ ನಾವು ಎಚ್ಚರಿಕೆ ಕೊಡಬೇಕು. ಆ ದೃಷ್ಟಿಯಿಂದ ಇಲಾಖೆ ಮುಖ್ಯಸ್ಥರ ಜೊತೆ ನಾನು ಚರ್ಚೆ ಮಾಡಿ, ನ್ಯಾಯ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು.
ಸರಳತೆ ಮೆರೆದ ಸಚಿವರು: ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅದ್ಧೂರಿಯಾಗಿದ್ದರೂ ಸಚಿವ ಆರ್.ಅಶೋಕ ಅವರು ಮಾತ್ರ ಆಡಂಬರಕ್ಕೆ ಅವಕಾಶವನ್ನೇ ಕೊಡಲಿಲ್ಲ. ವೇದಿಕೆಯ ಕಾರ್ಯಕ್ರಮದಲ್ಲಿ ಹಾರ, ತುರಾಯಿಗೆ ಅವಕಾಶವೇ ಇರಲಿಲ್ಲ. ಬದಲಾಗಿ ಸ್ವಾಗತಿಸುವ ಸಂದರ್ಭದಲ್ಲಿ ಪುಸ್ತಕ ಹಾಗೂ ಗುಲಾಬಿ ಹೂ ಮಾತ್ರ ಕೊಡಲು ಸಚಿವರು, ಅಧಿಕಾರಿಗಳಿಗೆ ಸೂಚಿಸಿದ್ದರು. ಹೀಗಾಗಿ, ಎಲ್ಲಿಯೂ ಆಡಂಬರಕ್ಕೆ ಅವಕಾಶವೇ ಇರಲಿಲ್ಲ.
ಗ್ರಾಮ ವಾಸ್ತವ್ಯ ಪಾಠಶಾಲೆ: ಗ್ರಾಮ ವಾಸ್ತವ್ಯ ಎಂಬುದು ಪಾಠಶಾಲೆ ಇದ್ದ ಹಾಗೆ. ಇಲ್ಲಿ ಬಹಳಷ್ಟು ಕಲಿಯೋದಿದೆ. ಬೆಂಗಳೂರು, ಡಿಸಿ ಕಚೇರಿಯಲ್ಲಿ ಕುಳಿತುಕೊಂಡರೆ ಏನನ್ನೂ ಕಲಿಯಲು ಆಗುವುದಿಲ್ಲ. ಬರೀ ಪುಸ್ತಕ ನೋಡಬೇಕಾಗುತ್ತದೆ. ಪ್ರಾಯೋಗಿಕವಾಗಿ ಜನರ ಬವಣೆ ನೋಡಬೇಕು ಎಂದರೆ ನೀವು ಹಳ್ಳಿಗೆ ಬರಬೇಕು. 1 ಗಂಟೆ, ಅರ್ಧ ಗಂಟೆ ಕಳೆದರೆ ಆಗಲ್ಲ. 24 ಗಂಟೆ ಅವರ ಜೊತೆಗಿದ್ದರೆ ಜನರ ಕಷ್ಟನಮ್ಮ ಗಮನಕ್ಕೆ ಬರುತ್ತದೆ. ಸಿಎಂ ಹೇಳಿದಂತೆ ನಾವು ಕ್ರಾಂತಿಕಾರಿ ಬದಲಾವಣೆ ಮಾಡಿದ್ದೇವೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಮೂಲ ಕಾರಣವೇ ಗ್ರಾಮ ವಾಸ್ತವ್ಯ ಎಂದರು.
ಶೀಘ್ರದಲ್ಲಿಯೇ ಮಹಿಳೆಯರ ಖಾತೆಗೆ ಸಾವಿರ ರೂ.ಜಮೆ: ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರತಿ ಕುಟುಂಬದ ಓರ್ವ ಮಹಿಳೆಯ ಬ್ಯಾಂಕ್ ಖಾತೆಗೆ ಶೀಘ್ರದಲ್ಲಿಯೇ ಒಂದು ಸಾವಿರ ರೂ.ಗಳನ್ನು ಪ್ರತಿ ತಿಂಗಳು ಜಮೆ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಪ್ರತಿ ಕುಟುಂಬದ ಓರ್ವ ಮಹಿಳಾ ಮುಖ್ಯಸ್ಥರ ಖಾತೆಗೆ ನೇರವಾಗಿ ಒಂದು ಸಾವಿರ ರೂ.ಗಳನ್ನು ನೀಡುವ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿಯೇ ಈ ಯೋಜನೆ ಅನುಷ್ಠಾನಗೊಳ್ಳಲಿದೆ ಎಂದರು.
ಈ ಮೊದಲು ಅಧಿಕಾರಿಗಳು ಒಂದು ತೀರ, ಫಲಾನುಭವಿಗಳು ಒಂದು ತೀರದಂತಾಗಿತ್ತು. ನಡುವೆ ಸಂಪರ್ಕ ಸೇತುವೆ ನಿರ್ಮಾಣ ಮಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಇತ್ಯರ್ಥಪಡಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ಅಂಗವಿಕಲರು, ಅನಾಥರು, ವೃದ್ಧರು, ಅಸಹಾಯಕರು ಹಾಗೂ ಮುಗ್ಧ ಜನರು ಸರಕಾರಿ ಕಚೇರಿಗಳಿಗೆ ತೆರಳಿ ಹಣ ಹಾಗೂ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ರಾಜ್ಯದಲ್ಲಿ 4.74 ಲಕ್ಷ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಣೆ ಮಾಡಲಾಗಿದೆ.
ಮಂಡ್ಯ ಉಸ್ತುವಾರಿಯಿಂದ ಅಶೋಕ್ ಬಿಡುಗಡೆ, ಸಚಿವರ ಮನವಿ ಮೇರೆಗೆ ತೀರ್ಮಾನ: ಸಿಎಂ ಬೊಮ್ಮಾಯಿ
ಸರಕಾರಿ ಜಾಗದ ಭೂಪರಿವರ್ತನೆ ಮಾಡಿಕೊಳ್ಳುವ ರೈತರಿಗೆ ಹಕ್ಕುಪತ್ರ ನೀಡುವ ಉದ್ದೇಶದಿಂದ ಕಾಯ್ದೆಯಲ್ಲಿ ಬದಲಾವಣೆ ತರಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಬಾರಿ ಕಂದಾಯ ದಾಖಲೆಗಳನ್ನು ಉಚಿತವಾಗಿ ನೀಡಲಾಗಿದೆ. ಕೃಷಿಕರಿಗೆ, ವೈಜ್ಞಾನಿಕ ಪದ್ಧತಿ ಅಳವಡಿಸುವವರಿಗೆ ಪ್ರೋತ್ಸಾಹ ನೀಡಬೇಕು. ಆ ದಿಸೆಯಲ್ಲಿ 79 ಅ ಮತ್ತು 79ಬಿ ತೆಗೆದುಹಾಕಲಾಗಿದೆ ಎಂದರು. ಈವರೆಗೂ ತಾಂಡಾಗಳಿಗೆ ಹೆಸರಿಲ್ಲದೇ ಅವು ಕಂದಾಯ ಗ್ರಾಮಗಳಾಗದೇ ಅತಂತ್ರಸ್ಥಿತಿಯಲ್ಲಿದ್ದವು. ಅಂತಹ ತಾಂಡಾಗಳನ್ನು ಗುರುತಿಸಿ ಕಾಯ್ದೆಯಲ್ಲಿ ತಿದ್ದುಪಡಿ ಮಾಡುವ ಮೂಲಕ 51 ಸಾವಿರ ಕುಟುಂಬಗಳಿಗೆ ಸ್ಥಳದಲ್ಲಿಯೇ ಹಕ್ಕುಪತ್ರ ವಿತರಿಸಲಾಗಿದೆ ಎಂದರು.
ಕಲಾದಗಿ ಅಭಿವೃದ್ಧಿಗೆ 1 ಕೋಟಿ ರು.: ಕಲಾದಗಿ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಒಂದು ಕೋಟಿ ರೂ.ಗಳ ಅನುದಾನ ನೀಡುವುದಾಗಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ ಇದೇ ವೇಳೆ ಘೋಷಿಸಿದರು.