* ತಾಯಿ ಜತೆ ಜಗಳ ಮಾಡಿಕೊಂಡು ಆಶ್ರಮ ಸೇರಿದ್ದ ಬಾಲಕಿಯ ರಕ್ಷಣೆ* ತಾಯಿ, ಮಾವನನ್ನು ಕೂಡಿ ಹಾಕಿ ಹೋಗಿದ್ದ ಬಾಲಕಿ

ಬೆಂಗಳೂರು(ಜ.11): ಹೊಸವರ್ಷದ ದಿನವೇ 15 ವರ್ಷದ ಬಾಲಕಿಯೊಬ್ಬಳು ತಾಯಿಯ ಜತೆ ಜಗಳ ಮಾಡಿಕೊಂಡು ಮನೆ ಬಿಟ್ಟು ಉತ್ತರಹಳ್ಳಿಯ ಆಶ್ರಮ ಸೇರಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ಬಾಲಕಿಯ ತಂದೆ ತುರಹಳ್ಳಿ ನಿವಾಸಿ ಜಿ.ಚಂದ್ರಮೌಳಿ ಅವರು, ‘ಈ ಹಿಂದೆ ಆತ್ಮಾನಂದ ಸರಸ್ವತಿ ಸ್ವಾಮೀಜಿ, ಮಗಳಿಗೆ ದೀಕ್ಷೆ ಕೊಡಿಸುವುದಾಗಿ ಹೇಳುತ್ತಿದ್ದರು. ಇದೀಗ ಮಗಳು ನಾಪತ್ತೆಯಾಗಿದ್ದು, ಆಕೆ ಸ್ವಾಮೀಜಿ ಬಳಿ ಇರುವ ಅನುಮಾನವಿದೆ’ ಎಂದು ನೀಡಿದ ದೂರಿನ ಮೇರೆಗೆ ತಲಘಟ್ಟಪುರ ಠಾಣೆ ಪೊಲೀಸರು, ತನಿಖೆ ನಡೆಸಿ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಬಾಲಕಿಯನ್ನು ಪತ್ತೆ ಹಚ್ಚಿ ಕರೆತಂದು ನಿಮ್ಹಾನ್ಸ್‌ ಸಮೀಪದ ಮಕ್ಕಳ ಆರೈಕೆ ಕೇಂದ್ರಕ್ಕೆ ಸೇರಿಸಿದ್ದಾರೆ.

ಜ.1ರಂದು ಬಾಲಕಿ ಸಂಜೆ 5ರ ಸುಮಾ​ರಿಗೆ ತನ್ನ ತಾಯಿ​ಯೊಂದಿಗೆ ಜಗಳ ಮಾಡಿ​ಕೊಂಡು ಮನೆ​ಯಲ್ಲಿ ತಾಯಿ ಮತ್ತು ಅವರ ಮಾವ​ನನ್ನು ಕೊಠ​ಡಿ​ಯಲ್ಲಿ ಕೂಡಿ ಹಾಕಿ, ತಂದೆಯ ಟಿವಿಎಸ್‌ ದ್ವಿಚಕ್ರ ವಾಹ​ನ​ದಲ್ಲಿ ಮನೆ ಬಿಟ್ಟು ಹೋಗಿ​ದ್ದಳು. ಬಳಿಕ ಆಕೆ​ಯನ್ನು ಎಲ್ಲೆಡೆ ಹುಡು​ಕಾಡಿದಾಗ ಉತ್ತ​ರ​ಹ​ಳ್ಳಿ​ಯ​ಲ್ಲಿ​ರುವ ಆತ್ಮಾ​ನಂದ ಸರ​ಸ್ವತಿ ಸ್ವಾಮೀಜಿ ಆಶ್ರ​ಮಯದ ಮುಂಭಾಗ ದ್ವಿಚಕ್ರ ವಾಹನ ಪತ್ತೆ​ಯಾ​ಗಿತ್ತು.

ಈ ಹಿಂದೆ ಪುತ್ರಿಗೆ ದೀಕ್ಷೆ ಕೊಡು​ವು​ದಾಗಿ ಸ್ವಾಮೀಜಿ ಹೇಳು​ತ್ತಿ​ದ್ದರು. ಹೀಗಾಗಿ ಅವರ ಮೋಡಿ​ಯಿಂದಲೇ ಪುತ್ರಿ ಮನೆ ಬಿಟ್ಟು ಹೋಗಿ​ದ್ದಾಳೆ ಎಂದು ತಂದೆ ಚಂದ್ರ​ಮೌಳಿ ದೂರಿ​ನಲ್ಲಿ ಆರೋ​ಪಿ​ಸಿ​ದ್ದರು. ಹೀಗಾಗಿ ಬಾಲಕಿಯನ್ನು ಪತ್ತೆಹೆಚ್ಚಿ ಮಹಿಳಾ ಆರೈಕೆ ಕೇಂದ್ರಕ್ಕೆ ಕಳು​ಹಿ​ಸ​ಲಾ​ಗಿದೆ. ಬಾಲಕಿ ಸ್ವ ಇಚ್ಛೆಯಿಂದ ಆಶ್ರಮಕ್ಕೆ ಬಂದಿದ್ದಾಗಿ ಹೇಳಿಕೆ ನೀಡಿದ್ದಾಳೆ. ಸ್ವಾಮೀಜಿ ವಿರುದ್ಧ ಯಾವುದೇ ಆರೋಪ ಮಾಡುತ್ತಿಲ್ಲ ಎಂದು ಪೊಲೀ​ಸರು ತಿಳಿಸಿದ್ದಾರೆ.

ಈ ಹಿಂದೆ ಮಾವನ ವಿರುದ್ಧ ದೂರು:

ಬಾಲಕಿಯ ತಂದೆ ಚಂದ್ರ​ಮೌಳಿ ಅವರು ಆತ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಭಕ್ತ​ರಾ​ಗಿ​ದ್ದರು. ಈ ಹಿಂದೆ ಪುತ್ರಿ ಜತೆ ಆಶ್ರ​ಮಕ್ಕೆ ಹೋಗಿ​ದ್ದು, ಎರಡು ತಿಂಗಳು ಆಶ್ರ​ಮ​ದಲ್ಲಿ ಪುತ್ರಿ​ಯನ್ನು ಬಿಟ್ಟಿ​ದ್ದರು ಎನ್ನಲಾಗಿದೆ, ಈ ವೇಳೆ ಸ್ವಾಮೀಜಿ ಆಕೆಗೆ ದೀಕ್ಷೆ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಆಕೆಯ ಮಾವ ವಿರೋ​ಧಿ​ಸಿ​ದ್ದರು ಎನ್ನಲಾಗಿದೆ. ಅಲ್ಲದೆ, ಬಾಲಕಿ ಮಾವನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿ​ದ್ದರು. ಹೀಗಾಗಿ ಪೊಲೀ​ಸರು ಮಾವ​ವನ್ನು ಬಂಧಿಸಿ ಜೈಲಿಗೆ ಕಳು​ಹಿ​ಸಿ​ದ್ದರು.