ಮುಸ್ಲಿಂ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಈಗಿರುವ ಶೇ.4 ರ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಇಂಜಿನಿಯರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿಂದೆ ಸರ್ಕಾರ ಗುತ್ತಿಗೆಯಲ್ಲಿ ಶೇ.4 ಮೀಸಲಾತಿ ನೀಡಿತ್ತು.

ಕೋಲಾರ (ಮಾ.13): ರಾಜ್ಯ ಸರ್ಕಾರದ ಗುತ್ತಿಗೆಯಲ್ಲಿ ಟೆಂಡರ್ ಪಡೆಯುವುದಕ್ಕೆ ಶೇ.4 ಮೀಸಲಾತಿ ಪಡೆದುಕೊಂಡಿರುವ ಮುಸ್ಲಿಂ ಸಮುದಾಯ ಇದೀಗ ಮತ್ತೊಮ್ಮೆ ತಮ್ಮ ಶಿಕ್ಷಣ ಮತ್ತು ಉದ್ಯೋಗ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ಸಚಿವ ಜಮೀರ್ ಅಹಮದ್ ಖಾನ್ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಹೌದು, ರಾಜ್ಯ ಸರ್ಕಾರದಿಂದ ಈವರೆಗೆ ಮುಸ್ಲಿಮರಿಗೆ ಶಿಕ್ಷಣ-ಉದ್ಯೋಗಕ್ಕಾಗಿ ಶೇ.4 ಮೀಸಲಾತಿಯನ್ನು ಕೊಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಕರ್ನಾಟಕ ಬಜೆಸ್ 2025ರಲ್ಲಿ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ.4ರಷ್ಟು ಕಾಮಗಾರಿಯ ಟೆಂಡರ್ ಅನ್ನು ಮುಸ್ಲಿಮರಿಗೆ ಕೊಡಬೇಕು ಎಂದು ಹೊಸದಾಗಿ ಕಾಯ್ದೆ ಜಾರಿ ಮಾಡಲಾಯಿತು. ಇದರ ಬೆನ್ನಲ್ಲಿಯೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಇಂಜಿನಿಯರ್ಸ್ ಅಸೋಸಿಯೇಷನ್‌ನಿಂದ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಈಗಿರುವ ಶೇ.4 ಶಿಕ್ಷಣ-ಉದ್ಯೋಗ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಳ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ. ಇದಕ್ಕೆ ಸರ್ಕಾರದಿಂದಲೂ ಭರವಸೆಯನ್ನು ಕೊಡಲಾಗಿದೆ.

ಇನ್ನು ಅಲ್ಪಸಂಖ್ಯಾತ ಇಂಜಿನಿಯರ್ಸ್ ಸಂಘಟನೆಯ ಮನವಿಯನ್ನು ಆಧರಿಸಿ ಸಚಿವ ಜಮೀರ್ ಅಹಮದ್ ವಿಶೇಷ ಕರ್ತವ್ಯಾಧಿಕಾರಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದು ಮುಸ್ಲಿಮರಿಗೆ 2ಬಿ ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ಬಗ್ಗೆ ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸ್ವತಃ ಸಚಿವ ಜಮೀರ್ ಅಹಮದ್ ಖಾನ್ ಅವರೇ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮಾನ್ಯತೆಗೆ ಷರತ್ತು ಸಡಿಲ?

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮನವಿ ಮಾಡಿದ ಫಾರೂಕ್ ಜುನೈದ್, ಕೋಲಾರದಿಂದ ಪಾದಯಾತ್ರ ಮೂಲಕ ಬಂದು ಮನವಿ ಮಾಡಿದ್ದೆವು. ಈ ಮನವಿಗೆ ಸಚಿವ ಜಮೀರ್ ಅಹಮದ್ ಅವರು ಸ್ಪಂದನೆ ನೀಡಿದ್ದಾರೆ. ನಾವು ಆಗ ಎರಡು ಮನವಿ ಮಾಡಿದ್ದೆವು. ಒಂದು 2ಬಿ ಮೀಸಲಾತಿ ಮರುಸ್ಥಾಪಿಸಬೇಕು. ಜೊತೆಗೆ ಈಗಿರವ ಶೇ.4 ಮೀಸಲಾತಿಯನ್ನು ಶೇ.10ಕ್ಕೆ ಹೆಚ್ಚಳ ಮಾಡಿ ಎಂದು ಮನವಿ ಸಲ್ಲಿಸಿದ್ದೆವು. ಇದಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರಕಿದೆ. ನಮ್ಮ ಮನವಿ ಸಲ್ಲಿಕೆ ಬೆನ್ನಲ್ಲಿಯೇ ಸಚಿವ ಜಮೀರ್ ಅಹಮದ್ ಅವರು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸಚಿವ ಜಮೀರ್ ಅಹಮದ್ ಅವರು ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ನಂಬಿಕೆಯಿದೆ. ಈಗಾಗಲೇ ಬಜೆಟ್‌ನಲ್ಲಿ ಶೇ.4 ಗುತ್ತಿಗೆ ಮೀಸಲಾತಿ ನೀಡಿದ್ದಾರೆ. ಹೀಗಾಗಿ, ಈಗಲೂ ನಾವು ಸಲ್ಲಿಕೆ ಮಾಡಿರುವ ಬೇಡಿಕೆ ಈಡೇರಿಸುತ್ತಾರೆ ಅಂತ ವಿಶ್ವಾಸ ಇದೆ. ಮುಖ್ಯಮಂತ್ರಿ ಕಚೇರಿಯಿಂದಲೂ ಸ್ಪಂದನೆ ದೊರಕಿದೆ. ಇಲಾಖೆಯ ಅಧಿಕಾರಿಗಳನ್ನ ಭೇಟಿಯಾಗಿ ಎಂದು ಪ್ರತಿಕ್ರಿಯೆ ನೀಡಲಿದ್ದಾರೆ ಎಂದು ಅಲ್ಪಸಂಖ್ಯಾತ ಇಂಜಿನಿಯರ್ಸ್ ಸಂಘಟನೆಯ ಅಧ್ಯಕ್ಷ ಫಾರೂಕ್ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್