ನಗರ ಪ್ರದೇಶದ ಎಲ್ಲ ಬಡವರಿಗೆ ಸೂರು ಕಲ್ಪಿಸುವೆ: ಸಚಿವ ಸೋಮಣ್ಣ
* 1.80 ಲಕ್ಷ ಮಂದಿಯ ಪೈಕಿ 33 ಸಾವಿರ ಮಂದಿಗೆ ಸಾಲ ಸೌಲಭ್ಯ ವ್ಯವಸ್ಥೆ
* ಸೆ. 28ರಂದು ಹುಬ್ಬಳ್ಳಿ ಮತ್ತು 29, 30ರಂದು ಬೆಳಗಾವಿಗೆ ಭೇಟಿ
* ಇಲಾಖೆಯ ಅಧಿಕಾರಿಗಳ ಜತೆ ಸಭೆ
ಬೆಂಗಳೂರು(ಸೆ.17): ನಗರ ಪ್ರದೇಶದಲ್ಲಿನ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ವಸತಿ ಯೋಜನೆಗಳ ಜಾರಿಯು ಒಂದು ಹಂತಕ್ಕೆ ತರಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಗುರುವಾರ ಕಾಂಗ್ರೆಸ್ ಸದಸ್ಯ ಟಿ.ರಘುಮೂರ್ತಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ವಸತಿ ಸಚಿವನಾದ ಬಳಿಕ ಹಲವು ಸಭೆಗಳನ್ನು ನಡೆಸಿ ಬಡವರಿಗೆ ವಸತಿ ಕಲ್ಪಿಸುವ ಉದ್ದೇಶದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದ್ದೇನೆ. ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ಕೆಲಸಗಳನ್ನು ಸಹ ಮಾಡಲಾಗುತ್ತಿದೆ. 1.80 ಲಕ್ಷ ಮಂದಿಯ ಪೈಕಿ 33 ಸಾವಿರ ಮಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ
ಇದೇ ತಿಂಗಳು 28ರಂದು ಹುಬ್ಬಳ್ಳಿ ಮತ್ತು 29, 30ರಂದು ಬೆಳಗಾವಿಗೆ ಹೋಗುತ್ತಿದ್ದು, ಅಲ್ಲಿಯೂ ಬ್ಯಾಂಕ್ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಲಾಗುತ್ತದೆ. ಹಂತ ಹಂತವಾಗಿ ಸಭೆ ನಡೆಸಿ ವಸತಿಗಳನ್ನು ಹಂಚಿಕೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಪ್ರಸ್ತುತ ಎದುರಾಗಿರುವ ಸಮಸ್ಯೆಗಳನ್ನು ನಿವಾರಣೆ ಮಾಡಿ ಮುಂದಿನ ಎರಡು ತಿಂಗಳಲ್ಲಿ ಒಂದು ಹಂತಕ್ಕೆ ತರಲಾಗುವುದು ಎಂದರು.
ಇದೇ ವೇಳೆ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ ಮಾತನಾಡಿ, ಮಹದೇವಪುರ ಕ್ಷೇತ್ರದಲ್ಲಿ ಮನೆಗಳನ್ನು ನಿರ್ಮಿಸಲಾಗಿದ್ದು, ಫಲಾನುಭವಿಗಳು ಹಣವನ್ನು ಪಾವತಿಸಿದ್ದಾರೆ. ಆದರೆ, ಮನೆ ಹಂಚಿಕೆಯಾಗಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಮಂಗಳವಾರ ಈ ಬಗ್ಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.