ಬೆಂಗಳೂರು(ಫೆ.13): ರಾಜ್ಯದ ಪಡಿತರ ವ್ಯವಸ್ಥೆಯ ಸ್ಥಿತಿಗತಿ ಮತ್ತು ಪಡಿತರ ವ್ಯವಸ್ಥೆಯಲ್ಲಿ ರಾಗಿ ಹಾಗೂ ಜೋಳ ವಿತರಣೆ ಮಾಡುವ ಕುರಿತು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವ ರಾವ್‌ ಸಾಹೇಬ್‌ ದಾನ್ವೆ ಅವರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ ಉಮೇಶ್‌ ಕತ್ತಿ, ಪ್ರಸ್ತುತ ಪಡಿತರ ಸರಬರಾಜು ವ್ಯವಸ್ಥೆಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಣೆ ಮಾಡಲಾಗುತ್ತಿದೆ. ಅದನ್ನು ಕಡಿತಗೊಳಿಸಿ ಪರ್ಯಾಯವಾಗಿ ರಾಗಿ, ಜೋಳ ಮತ್ತು ಸ್ಥಳೀಯ ಧಾನ್ಯಗಳನ್ನು ವಿತರಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

'ಪಡಿತರ ಧಾನ್ಯ ಜತೆ ಮಂಡ್ಯದ ಬೆಲ್ಲ ನೀಡಿ'

ಭೌಗೋಳಿಕವಾಗಿ ಸ್ಥಳೀಯ ಜನರ ಆಹಾರ ಪದ್ಧತಿಗೆ ಅನುಸಾರವಾಗಿ ಪಡಿತರ ವ್ಯವಸ್ಥೆಯನ್ನು ವಿತರಣೆ ಮಾಡಬೇಕಾಗುತ್ತದೆ. ಭೌಗೋಳಿಕ ಆಹಾರ ಪದ್ಧತಿಗೆ ವಿರುದ್ಧವಾಗಿ ಒಂದೇ ವಿಧದ ಆಹಾರ ಸೇವನೆಯಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಒಂದು ಪ್ರದೇಶದ ರೈತರಿಗೆ ಮಾತ್ರ ಲಾಭವಾಗುತ್ತಿದ್ದು, ಸ್ಥಳೀಯ ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಲಭಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ಕಿ ಮತ್ತು ಗೋಧಿ ಪ್ರಮಾಣವನ್ನು ಕಡಿತಗೊಳಿಸಬೇಕು. ಕಡಿತಗೊಳಿಸಿದ ಪ್ರಮಾಣದ ಸಬ್ಸಿಡಿ ದರವನ್ನು ರಾಜ್ಯದ ಆಹಾರ ಪದ್ಧತಿಯಲ್ಲಿ ಬಳಸುವ ರಾಗಿ, ಜೋಳ ಮತ್ತು ಸ್ಥಳೀಯ ಧಾನ್ಯಗಳ ಖರೀದಿಗೆ ಅವಕಾಶ ನೀಡಬೇಕು ಎಂದು ಕೋರಿದರು.

ಸಚಿವ ಕತ್ತಿ ಮಾಡಿದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಜನರ ಹಿತದೃಷ್ಟಿಯಿಂದ ಅತ್ಯುತ್ತಮವಾಗಿದೆ. ಇದರ ಅನುಷ್ಠಾನಕ್ಕೆ ಚಾಲ್ತಿಯಲ್ಲಿರುವ ನೀತಿಯನ್ನು ಬದಲಾವಣೆ ಮಾಡಬೇಕು. ಈ ಬಗ್ಗೆ ಉನ್ನತಮಟ್ಟದ ಸಭೆಯಲ್ಲಿ ಚರ್ಚಿಸಿ ಹೊಸ ನೀತಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.