ಸರ್ಕಾರಕ್ಕೆ ಸಚಿವ ಎಸ್‌ಟಿಎಸ್‌, ನಾರಾಯಣಗೌಡ ಪತ್ರ| ಕೇರಳ, ತಮಿಳುನಾಡು ರೀತಿ ಧಾನ್ಯದ ಜತೆ ಬೆಲ್ಲ ನೀಡಿ ಅಳಿವಿನಂಚಿನಲ್ಲಿರುವ ಆಲೆಮನೆಗಳನ್ನು ಬದುಕಿಸಿ| ಆತ್ಮನಿರ್ಭರ ಯೋಜನೆಯಡಿ ಮಂಡ್ಯ ಜಿಲ್ಲೆಯ ಆಲೆಮನೆಗಳನ್ನು ಆಯ್ಕೆ ಮಾಡಿದ ಕೇಂದ್ರ ಸರ್ಕಾರ|  

ಬೆಂಗಳೂರು(ಜ.29): ಪಡಿತರ ಆಹಾರ ಧಾನ್ಯಗಳ ಜತೆಗೆ ಮಂಡ್ಯದ ಬೆಲ್ಲ ವಿತರಿಸುವ ಮೂಲಕ ಆಲೆಮನೆಗಳಿಗೆ ಪುನಶ್ಚೇತನ ನೀಡಲು ಆದ್ಯತೆ ನೀಡಬೇಕು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮತ್ತು ಮಂಡ್ಯ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಗುರುವಾರ ಈ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಅವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರ ಆತ್ಮನಿರ್ಭರ ಯೋಜನೆಯಡಿ ಮಂಡ್ಯ ಜಿಲ್ಲೆಯ ಆಲೆಮನೆಗಳನ್ನು ಆಯ್ಕೆ ಮಾಡಿದೆ. ಆದರೆ ಇದಕ್ಕೆ ಆತ್ಮನಿರ್ಭರ ಭಾರತ ಯೋಜನೆಯಡಿ ಸಾಲ ನೀಡುವ ಮೊದಲು ಅವುಗಳ ಪುನಶ್ಚೇತನ ಮಾಡಬೇಕಿದ್ದು, ಕೆಲವು ಮೂಲಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಪಡಿತರ ವ್ಯವಸ್ಥೆಯಲ್ಲಿ ಸಕ್ಕರೆ ಬದಲು ಬೆಲ್ಲ..?

ಕೇರಳ ಹಾಗೂ ತಮಿಳುನಾಡು ಸರ್ಕಾರಗಳು ಪಡಿತರ ವ್ಯವಸ್ಥೆಯೊಳಗೆ ಸಕ್ಕರೆ ಬದಲು ಬೆಲ್ಲವನ್ನು ನೀಡುತ್ತಿವೆ. ಇದೇ ಮಾದರಿಯಲ್ಲಿ ರಾಜ್ಯದ ಪಡಿತರ ಚೀಟಿದಾರರಿಗೆ ಸರ್ಕಾರದ ವತಿಯಿಂದ ತಲಾ ಒಂದು ಕೆ.ಜಿ. ಮಂಡ್ಯದ ಆಲೆಮನೆ ಬೆಲ್ಲ ವಿತರಿಸಲು ಕ್ರಮಕೈಗೊಂಡರೆ ಆಲೆಮನೆಗಳು ಬದುಕುಳಿಯುತ್ತವೆ ಎಂಬ ಅಭಿಪ್ರಾಯ ಆಲೆಮನೆ ಮಾಲಿಕರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮಂಡ್ಯ ಜಿಲ್ಲೆಯಲ್ಲಿನ ಆಲೆಮನೆಗಳನ್ನು ಪುನಶ್ಚೇತನಗೊಳಿಸುವುದರೊಂದಿಗೆ ಮಂಡ್ಯ ಬೆಲ್ಲಕ್ಕೆ ಉತ್ತೇಜನ ನೀಡುವ ಅಗತ್ಯವಿದೆ. ಇದರಿಂದ ಆತ್ಮನಿರ್ಭರ ಯೋಜನೆ ಅನುಷ್ಠಾನ ಮಾಡುವ ಮೊದಲು ಆಲೆಮನೆ ಮಾಲಿಕರು ಎದುರಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಇದೇ ವೇಳೆ ಮಂಡ್ಯ ಜಿಲ್ಲೆಯ ಆಲೆಮನೆಯ ಪುನಶ್ಚೇತನಕ್ಕೆ ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸರ್ಕಾರದಿಂದ ಯಾವ ರೀತಿಯ ಸಹಾಯ ಬೇಕು? ಬೆಲ್ಲಕ್ಕೆ ಮಾರುಕಟ್ಟೆ ಸೇರಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಿತಿ ರಚಿಸಿ ಶೀಘ್ರದಲ್ಲಿ ವರದಿ ಕೊಡುವಂತೆ ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ಸಚಿವರಾದ ಸೋಮಶೇಖರ್‌ ಮತ್ತು ನಾರಾಯಣಗೌಡ ಅವರು ಸೂಚನೆ ನೀಡಿದ್ದಾರೆ.