ಬೆಳಗಾವಿ, (ಮೇ.11): ಕೊರೋನಾ ಕಾರಣಕ್ಕೆ ದೇಶದ ಕೆಲ ರೈಲುಗಳು 50 ದಿನಗಳ ಬಳಿಕ ಸಂಚರಿಸಲು ಸಿದ್ಧವಾಗಿವೆ. ನಾಳೆಯಿಂದ (ಮಂಗಳವಾರ) ದೆಹಲಿ ಸೇರಿದಂತೆ ಕೆಲವು ನಗರಗಳಲ್ಲಿ 15 ಪ್ಯಾಸೆಂಜರ್ ರೈಲುಗಳನ್ನು ಓಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಲಾಕ್‌ಡೌನ್ ಮಧ್ಯೆಯೂ ರೈಲು ಸಂಚಾರಕ್ಕೆ ಅನುಮತಿ ನೀಡಿರುವ ಬಗ್ಗೆ ಪರ-ವಿರೋಧಗಳ ಚರ್ಚೆಗಳಾಗುತ್ತಿವೆ. ಇದೀಗ ಇದಕ್ಕೆ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ತೆರೆ ಎಳೆದಿದ್ದಾರೆ.

ಚುಕುಬುಕು ರೈಲು ಸಂಚಾರಕ್ಕೆ ಲಾಕ್‌ ಓಪನ್:ಆನ್‌ಲೈನ್ ಬುಕ್ಕಿಂಗ್ ಸೇವೆಯೂ ಆರಂಭ

ಇಂದು (ಸೋಮವಾರ) ಬೆಳಗಾವಿಯಲ್ಲಿ ಮಾತನಾಡಿದ ಸುರೇಶ್ ಅಂಗಡಿ, ಲಾಕ್‌ಡೌನ್ ಸಂಕಷ್ಟದಲ್ಲಿರುವವರಿಗೆ 15 ವಿಶೇಷ ರೇಲ್ವೆಗಳ ಸಂಚಾರಿಸಲಿವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ಈ ರೈಲುಗಳಲ್ಲಿ ಸಂಚರಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಮಾರ್ಗ ಸೂಚಿಗಳನ್ನು ಸಚಿವರು ಮಾಧ್ಯಮಗಳ ಜತೆ ಹಂಚಿಕೊಂಡು. ಅವು ಈ ಕೆಳಗಿನಂತಿವೆ ನೋಡಿ.

* ಗೃಹ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, ದೃಢಪಡಿಸಿದ ಇ-ಟಿಕೆಟ್ ಹೊಂದಿರುವ ಜನರು ಮಾತ್ರ ಈ ರೈಲುಗಳಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

* ಆರೋಗ್ಯ ತಪಾಸಣೆ ಮತ್ತು ಪ್ಲಾಟ್‌ಫಾರ್ಮ್‌ನ ಸ್ಕ್ರೀನಿಂಗ್ ನಲ್ಲಿ ಹಾದುಹೋಗುವ ಪ್ರಯಾಣಿಕರಿಗೆ ಮಾತ್ರ ಈ ರೈಲುಗಳಲ್ಲಿ ಪ್ರಯಾಣಿಸಲು ಅನುಮತಿ ಸಿಗುತ್ತದೆ. 

* ಯಾವುದೇ ವ್ಯಕ್ತಿಗೆ ಕೊರೋನಾದ ಯಾವುದೇ ಸೌಮ್ಯ ಲಕ್ಷಣಗಳು ಕಂಡುಬಂದರೆ ರೈಲು ಹತ್ತಲು ಅವಕಾಶವಿರುವುದಿಲ್ಲ.

* ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಸ್ಯಾನಿಟೈಜರ್ ಬಳಸಬೇಕಾಗುತ್ತದೆ. ಕಸ ತುಂಬಲು ಚೀಲ ತೆಗೆದುಕೊಂಡು ಹೋಗಬೇಕು.

* ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಪ್ರಯಾಣಿಕರು ಬೋರ್ಡಿಂಗ್, ಲ್ಯಾಂಡಿಂಗ್ ಮತ್ತು ಪ್ರಯಾಣದುದ್ದಕ್ಕೂ ಆರೋಗ್ಯ ಸಚಿವಾಲಯ ಹೊರಡಿಸಿದ ನೈರ್ಮಲ್ಯ ನಿಯಮಗಳನ್ನು ಪಾಲಿಸುವುದು ಅವಶ್ಯಕ.

* ರೈಲಿನ ಸಮಯಕ್ಕಿಂತ 2 ಗಂಟೆಗಳ ಮೊದಲು ಪ್ರಯಾಣಿಕರು ನಿಲ್ದಾಣವನ್ನು ತಲುಪಬೇಕು. ಎಲ್ಲಾ ರೈಲುಗಳು ಸೀಮಿತ ನಿಲ್ದಾಣಗಳೊಂದಿಗೆ ಮಾತ್ರ ಚಲಿಸುತ್ತವೆ.