ಬೆಂಗಳೂರು (ಏ.07):  ಕೋವಿಡ್‌ ನಿಯಂತ್ರಣಕ್ಕಾಗಿ ದೇಶದಲ್ಲಿ ಹೆಚ್ಚು ಲಸಿಕೆ ಪೂರೈಕೆ ಮಾಡಿ ಅಭಿಯಾನವನ್ನು ವೇಗವಾಗಿ ನಡೆಸಬೇಕು. ದೇಶಾದ್ಯಂತ ಏಕರೂಪ ನಿಯಮ ಜಾರಿಗೊಳಿಸಬೇಕು ಮತ್ತು ಹೆಚ್ಚು ಆಮ್ಲಜನಕ ಲಭ್ಯವಾಗಿಸಲು ಸಹಕಾರ ನೀಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಂಗಳವಾರ ಸಂಜೆ ವಿಕಾಸಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ಅವರು 11 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜತೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿದ ಸುಧಾಕರ್‌ ಅವರು ರಾಜ್ಯದ ಕೋವಿಡ್‌ ಸ್ಥಿತಿಗತಿ ಕುರಿತು ವಿಸ್ತೃತವಾಗಿ ವಿವರಿಸಿದರು. ಸೋಂಕು ಹರಡುವಿಕೆ ತಡೆಗಟ್ಟಲು ಕೈಗೊಂಡ ಕ್ರಮ, ಪರೀಕ್ಷೆ ಹೆಚ್ಚಳ ಸೇರಿದಂತೆ ಕೋವಿಡ್‌ ಎರಡನೇ ಅಲೆ ತಡೆಯಲು ಕೈಗೊಂಡ ಕ್ರಮ ಕುರಿತು ಕೇಂದ್ರಕ್ಕೆ ಮಾಹಿತಿ ನೀಡಿದರು.

ಕಡಿಮೆ ಲಸಿಕೆಯಿಂದಾಗಿ ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗಬೇಕಾಗಿರುವ ಕಾರಣ ಕೇಂದ್ರದಿಂದ ಹೆಚ್ಚು ಲಸಿಕೆ ನೀಡಬೇಕು. ಕೊರೋನಾ ನಿಯಂತ್ರಣಕ್ಕೆ ಪೂರಕವಾಗಿ ಆಮ್ಲಜನಕ ಹೆಚ್ಚು ಉತ್ಪಾದನೆಯಾಗುವಂತೆ ಕ್ರಮ ಕೈಗೊಳ್ಳಬೇಕು. ಚಿತ್ರಮಂದಿರ, ಅಂತಾರಾಜ್ಯ ಪ್ರಯಾಣ, ಸಮಾರಂಭಗಳಲ್ಲಿ ಜನಸಂಖ್ಯೆ ಮಿತಿ ಇತ್ಯಾದಿಗಳಲ್ಲಿ ದೇಶಾದ್ಯಂತ ಒಂದೇ ಮಾರ್ಗಸೂಚಿ ಒದಗಿಸಬೇಕು. ಇದರಿಂದಾಗಿ ಯಾವುದೇ ಗೊಂದಲ ಇರುವುದಿಲ್ಲ. ಏಕರೂಪತೆ ಇಲ್ಲದಿದ್ದರೆ ಸಮಸ್ಯೆಯಾಗಲಿದೆ. ಹೀಗಾಗಿ ಎಲ್ಲಾ ಕೋವಿಡ್‌ ಪೀಡಿತ ರಾಜ್ಯಗಳಿಗೆ ಒಂದೇ ರೀತಿಯ ನಿಯಮ ರೂಪಿಸಬೇಕು ಎಂದು ಕೋರಿದರು.

ಆಕ್ಸ್‌ಫರ್ಡ್‌ ಲಸಿಕೆಯ ಡೋಸ್‌ ಅಂತರ 2-3 ತಿಂಗಳಿದ್ದರೆ ಶೇ.90ರಷ್ಟು ಪರಿಣಾಮಕಾರಿ!

ಕೇಂದ್ರ ಸಚಿವರ ಪ್ರಶಂಸೆ:  ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಸುಧಾಕರ್‌, ಕೋವಿಡ್‌ ವೇಗವಾಗಿ ಹರಡುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚಾಗಬಹುದು. ಕಳೆದ ವರ್ಷ ಮರಣ ಪ್ರಮಾಣ ಶೇ.1.24ರಷ್ಟುಇದ್ದು, ಈಗ ಶೇ.0.6 ಆಗಿದೆ. ಸೋಮವಾರ 32 ಸಾವಾಗಿದ್ದರೆ, ಮಂಗಳವಾರ 38 ಸಾವುಗಳಾಗಿವೆ. ಆದರೆ, ರಾಜ್ಯದಲ್ಲಿ 2 ಕೋಟಿಗೂ ಹೆಚ್ಚು ಜನರಿಗೆ ಪರೀಕ್ಷೆ ಮಾಡಿರುವುದಕ್ಕೆ ಕೇಂದ್ರ ಸಚಿವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಪೈಕಿ ಶೇ.95ರಷ್ಟುಆರ್‌ಟಿಪಿಸಿಆರ್‌ ಮಾಡಲಾಗಿದೆ. ಬೇರೆ ಯಾವ ರಾಜ್ಯವೂ ಇಷ್ಟೊಂದು ಪರೀಕ್ಷೆ ಮಾಡಿಲ್ಲ ಎಂದು ಹೇಳಿದರು.

ಜನರು ಕೋವಿಡ್‌ ಸುರಕ್ಷತಾ ಕ್ರಮ ಪಾಲಿಸದಿದ್ದರೆ ಸೋಂಕು ಹೆಚ್ಚಾಗುತ್ತದೆ. ಆಗ ನೈತಿಕ ಹೊಣೆಯನ್ನು ಯಾರು ಹೊರಬೇಕು ಎಂಬ ಪ್ರಶ್ನೆ ಬರುತ್ತದೆ ಎಂಬ ಆತಂಕವನ್ನು ಕೇಂದ್ರ ಸಚಿವರು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲಿಯೇ ಹೊಸ ಮಾರ್ಗಸೂಚಿ ಬರುವ ನಿರೀಕ್ಷೆ ಇದೆ. ಸೋಂಕು ಹೆಚ್ಚಾಗಿರುವುದರಿಂದ ನಿಖರ ಮಾರ್ಗಸೂಚಿ ನೀಡುವ ಕೆಲಸ ಮಾಡಲಿದ್ದಾರೆ. ಹೆಚ್ಚು ಆಮ್ಲಜನಕ ಘಟಕ ಅಳವಡಿಕೆ ಕೇಂದ್ರದ ಸಹಕಾರ ಕೋರಲಾಗಿದೆ. ಮಹಾರಾಷ್ಟ್ರದ ಆರೋಗ್ಯ ಸಚಿವರು ಸಭೆಯಲ್ಲಿ ಲಾಕ್‌ಡೌನ್‌ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಮಗೆ ಸ್ಪಷ್ಟನಿರ್ದೇಶನ ನೀಡಬೇಕು ಎಂದು ಅವರು ಕೇಂದ್ರಕ್ಕೆ ಕೋರಿದರು ಎಂದು ಸುಧಾಕರ್‌ ಮಾಹಿತಿ ನೀಡಿದರು.