ಕೊರೋನಾಗೆ ಸರ್ಕಾರಿ ಆಸ್ಪತ್ರೆ ವೈದ್ಯ ಬಲಿ: ಶ್ರೀರಾಮುಲು ಸಂತಾಪ, ಪರಿಹಾರದ ಭರವಸೆ
ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸರ್ಕಾರಿ ಆಸ್ಪತ್ರೆಯ ಯುವ ವೈದ್ಯ ಸಾವನ್ನಪ್ಪಿದ್ದು, ಶ್ರೀರಾಮುಲು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು, (ಸೆ.08): ಕುಣಿಗಲ್‌ನ ಸರ್ಕಾರಿ ಆಸ್ಪತ್ರೆಯ ಯುವ ವೈದ್ಯ ಡಾ. ದೇವರಾಜ್ ಕೊರೋನಾಗೆ ಬಲಿಯಾಗಿದ್ದಾರೆ.
ಅವರಿಗೆ 37 ವರ್ಷ ವಯಸ್ಸಾಗಿತ್ತು. ಕೊರೋನಾ ವಾರಿಯರ್ಸ್ ಆಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು.
ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಣಿಗಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಬಿಗಡಾಯಿಸಿದ್ದರಿಂದ ಮಂಗಳವಾರ ಬೆಳಗ್ಗೆ ತುಮಕೂರಿನ ಸೂರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದ್ದಾರೆ.
ಸಿಸಿಬಿ ವಶಕ್ಕೆ ನಟಿ ಸಂಜನಾ, ಸರಳ ದಸರಾಗೆ ತೀರ್ಮಾನ; ಸೆ.8ರ ಟಾಪ್ 10 ಸುದ್ದಿ!
ಶ್ರೀರಾಮುಲು ಸಂತಾಪ
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕು ಸರ್ಕಾರಿ ಆಸ್ಪತ್ರೆ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ದೇವರಾಜ್ ಅವರು ಕೊರೊನ ಸೋಂಕಿನಿಂದ ವಿಧಿವಶರಾಗಿದ್ದು ದುರದೃಷ್ಟಕರ. ಅವರೊಬ್ಬ ಉತ್ತಮ ವೈದ್ಯರಾಗಿದ್ದರು. ಹಾಗೂ ಕೊರೊನ ರೋಗಿಗಳ ಸೇವೆಯಲ್ಲಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ಬರಲಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಅವರ ಕುಟುಂಬಕ್ಕೆ ದೊರಕಬೇಕಾದ ಪರಿಹಾರಗಳು ಹಾಗೂ ಸವಲತ್ತುಗಳನ್ನು ಆದಷ್ಟುಬೇಗ ಒದಗಿಸಲಾಗುವುದು ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.