ಸಚಿವ ತಂಗಡಗಿಗೆ ಹನುಮಮಾಲೆ ತೊಡಿಸಿದ ಆರ್‌ಎಸ್‌ಎಸ್ ಮುಖಂಡರು: ಐದು ದಿನಗಳ ವ್ರತಾಚರಣೆ
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದ ಮುರುಡಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಸಚಿವರು ಪೂಜಾ ವಿಧಿ-ವಿಧಾನಗಳ ಮೂಲಕ ಹನುಮಮಾಲೆ ಧರಿಸಿದರು. ಸತತ ಮೂರನೇ ವರ್ಷ ಅವರು ಹನುಮಮಾಲೆ ಧರಿಸಿದ್ದಾರೆ.
ಕಾರಟಗಿ (ಏ.20): ಬರುವ ಏ.23ರಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ 25ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಹನುಮಾಲೆ ಧರಿಸಿದರು. ಆರ್‌ಎಸ್‌ಎಸ್ ಮುಖಂಡರು ಸಚಿವ ತಂಗಡಗಿಗೆ ಹನುಮಮಾಲೆ ತೊಡಿಸಿ ಶುಭಕೋರಿದರು. ತಾಲೂಕಿನ ಯರಡೋಣಾ ಗ್ರಾಮದ ಮುರುಡ ಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಸಚಿವ ಶಿವರಾಜ ತಂಗಡಗಿ ಪೂಜಾ ವಿಧಿ-ವಿಧಾನಗಳ ಮೂಲಕ ಹನುಮಮಾಲೆ ಧರಿಸಿದರು. ಸತತ ಮೂರನೇ ವರ್ಷ ಅವರು ಹನುಮಮಾಲೆ ಧರಿಸಿದ್ದಾರೆ. ವಿಶೇಷ ಎಂಬಂತೆ ಆರ್‌ಎಸ್‌ಎಸ್ ಮುಖಂಡರೇ ಹನುಮಮಾಲೆ ತೊಡಿಸಿದ್ದಾರೆ.
ಒಟ್ಟು ಐದು ದಿನಗಳ ಮಾಲೆ ವ್ರತ್ತವಿದ್ದು, ಕಟ್ಟುನಿಟ್ಟಿನಿಂದ ಪಾಲನೆ ಮಾಡಲಾಗುತ್ತದೆ. ಮಾಲೆ ಧರಿಸಿದ ಬಳಿಕ ಮಾಲಾಧಾರಣೆ ಮಾಡಿದ ಚಿಕ್ಕವಯಸ್ಸಿನ ಯುವಕ ಗುರುಸ್ವಾಮಿಗಳಿಗೆ ಸಚಿವರು ವಂದನೆ ಸಲ್ಲಿಸಿದರು. ಏ. ೨೨ರಂದು ಇರುಮುಡಿ ಕಟ್ಟಿಕೊಳ್ಳಲಿದ್ದು, ಏ. ೨೩ ಬೆಳಗಿನ ಜಾವ ಅಂಜನಾದ್ರಿಯ ಆಂಜನೇಯನ ಸನ್ನಿಧಾನದಲ್ಲಿ ಗುರುಗಳ ಸಮ್ಮುಖದಲ್ಲಿ ಮಾಲೆ ವಿಸರ್ಜನೆ ಮಾಡಲಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ತಂಗಡಗಿ, ನಾನು ಆಂಜನೇಯನ ಪರಮ ಭಕ್ತ. ಕಳೆದ ಎರಡು ವರ್ಷ ಹನುಮ ಮಾಲೆ ಧರಿಸಿದ್ದೇನೆ. ಇದು ಮೂರನೇ ವರ್ಷ. ಇನ್ನೂ ಯಾವತ್ತೂ ಡಂಬಾಚಾರಕ್ಕಾಗಲಿ, ರಾಜಕೀಯದ ಅನುಕೂಲಕ್ಕಾಗಲಿ ಮಾಲೆ ಧರಿಸುವುದಿಲ್ಲ.
ಈ ಬಾರಿ ರಾಜ್ಯ ಎಂದೂ ಕಂಡರಿಯದ, ಶತಮಾನದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಈ ಬಾರಿ ರಾಜ್ಯಾದ್ಯಂತ ಅತ್ಯುತ್ತಮ ಮಳೆ ಸುರಿಯಲಿ, ನಾಡಿನಾದ್ಯಂತ ಸಮೃದ್ಧವಾದ ಬೆಳೆ ಬರಲಿ, ಜತೆಗೆ ಲೋಕ ಕಲ್ಯಾಣವಾಗಲಿ ಎಂದು ಸಂಕಲ್ಪ ತೊಟ್ಟು ಮಾಲೆ ಧರಿಸಿರುವೆ. ಪ್ರತಿವರ್ಷದಂತೆ ಈ ವರ್ಷವೂ ನನ್ನೊಂದಿಗೆ ೨೦ಕ್ಕೂ ಅಧಿಕ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನನ್ನ ಅನುಯಾಯಿಗಳು ಹನುಮ ಮಾಲೆ ಧರಿಸಿದ್ದಾರೆ ಎಂದರು. ಹನುಮ ಮಾಲೆ ಧರಿಸಿದ ಬಳಿಕ ಸಚಿವರು ಐದು ದಿನಗಳ ಕಾಲ ತಂಗುವ ಶ್ರೀದೇವಿ ಸನ್ನಿಧಿ ದೇವಿಕ್ಯಾಂಪಿನ ದೇವಿಗುಡ್ಡದ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಪೂಜೆ ಸಲ್ಲಿಸಿದರು.
ಎಚ್‌ಡಿಕೆ ವಿರುದ್ದ ಸುಳ್ಳು ಆರೋಪ ಮಾಡುತ್ತಿರುವ ಡಿಕೆಶಿಗೆ ಮಾತನಾಡುವ ನೈತಿಕತೆ ಇಲ್ಲ: ಎಚ್.ವಿಶ್ವನಾಥ್
ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ ಶಶಿಧರಗೌಡ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಬಸವರಾಜ್ ಸಾಹುಕಾರ್ ಬೆನ್ನೂರು, ಶರಣಪ್ಪ ಕಡೇಮನಿ, ಉದ್ಯಮಿ ಸುರೇಶ ಸಿಂಗನಾಳ, ಸತೀಶ್ ಮುಷ್ಟೂರುಕ್ಯಾಂಪ್, ಸೋಮನಾಥ್ ದೊಡ್ಡಮನಿ, ಸತ್ಯನಾರಾಯಣ ಜಂಗಮರ ಕಲ್ಗುಡಿ, ಶಿವಕುಮಾರ್ ಬಜಾರ್, ಬಸವರಾಜ್ ಗುಂಡೂರು, ಬಸವರಾಜ್ ಹಾಲಸಮುದ್ರ, ಯಮನೂರು ಸೋಮನಾಳ, ಅಮರೇಶ್ ಹಾಲಸಮುದ್ರ, ಉಮೇಶ್ ತಿಮ್ಮಾಪುರ, ಹನುಮೇಶ್ ಗುರಿಕಾರ್ ಸಚಿವರೊಂದಿಗೆ ಇದ್ದರು.